Friday, 13th December 2024

ಪಿರಮಿಡ್ಡುಗಳ ಒಳಗೆ ಬಾಗಿಲು, ಪೆಟ್ಟಿಗೆಗಳೂ ಇವೆ

ಈಜಿಪ್ಟ್ ಡೈರಿ- ಪ್ರವಾಸದ ಒಳ-ಹೊರಗಿನ ಕಥನ 8

ವಿಶ್ವೇಶ್ವರ ಭಟ್

‘ನಿಮಗೆ ಆಶ್ಚರ್ಯವೆನಿಸಬಹುದು, ಗಿಜಾ ಪಿರಮಿಡ್ಡುಗಳನ್ನು 10002 ಸಾವಿರದ ಹಿಂದೆ ನಿರ್ಮಿಸಲಾಯಿತು’ ಎಂದು ಗೈಡ್ ತನ್ನ ಜತೆಗಿದ್ದ ಪ್ರವಾಸಿಗರಿಗೆ ಹೇಳಿದ. ಆ ಪೈಕಿ ಒಬ್ಬ ಪ್ರವಾಸಿಗನಿಗೆ ಬಹಳ ಆಶ್ಚರ್ಯವಾಯಿತು.

‘ಮಿಸ್ಟರ್ ಗೈಡ್, ನೀವು ಹೇಳುವ ಮಾಹಿತಿಯನ್ನು ಗಮನವಿಟ್ಟು ಕೇಳುತ್ತಿದ್ದೇನೆ. ನೀವು ಹೇಗೆ ಅಷ್ಟು ಕರಾರುವಾಕ್ಕಾಗಿ 10002 ವರ್ಷಗಳ ಹಿಂದೆಯೇ ಪಿರಮಿಡ್ಡುಗಳನ್ನು ಕಟ್ಟಲಾಯಿತು ಎಂದು ಹೇಳುತ್ತೀರಿ? ದಯವಿಟ್ಟು ವಿವರಿಸುತ್ತೀರಾ?’ ಎಂದು ಕೇಳಿದ.
ಆಗ ಗೈಡ್ ಹೇಳಿದ-‘ನಾನು ನಾಲ್ಕು ವರ್ಷಗಳ ಹಿಂದೆ ಈ ಗೈಡ್ ವೃತ್ತಿಯನ್ನು ಆರಂಭಿಸಿ ದಾಗ, ಈ ಪಿರಮಿಡ್ಡುಗಳನ್ನು 9998 ವರ್ಷಗಳ ಹಿಂದೆ ನಿರ್ಮಿಸಲಾಯಿತು ಎಂದು ಹೇಳುತ್ತಿದ್ದರು. ನಾಲ್ಕು ವರ್ಷಗಳ ನಂತರ ಅಂದ್ರೆ 10002 ವರ್ಷ ಆಯಿತಲ್ಲ’
ಪಿರಮಿಡ್ಡುಗಳಿಗೆ ಈ ರೀತಿ ವರ್ಷಗಳು ಸೇರಿಕೊಂಡು ಅವುಗಳಿಗೆ ಈಗ ಆರು ಸಾವಿರ, ಏಳು ಸಾವಿರ, ಹತ್ತು ಸಾವಿರ ವರ್ಷಗಳಾ ಗಿರಬಹುದು ಎಂಬ ಥಿಯರಿಯೂ ಇದೆ.

ಈ ವಿಷಯದಲ್ಲಿ ಎರಡು ಇತಿಹಾಸಕಾರರು ಅಥವಾ ಪುರಾತತ್ವ ಶಾಸಜ್ಞರ ಮಧ್ಯೆ ಏಕನಿಲುವು ಇಲ್ಲ. ಒಬ್ಬರು ಹೇಳಿದ್ದನ್ನು ಮತ್ತೊಬ್ಬರು ಒಪ್ಪುವುದಿಲ್ಲ. ಹಾಗಂತ ಇಬ್ಬರ ವಾದಗಳಿಗೂ ಮೂಲ ಅವರ ಹಿಂದಿನವರು ಹೇಳಿದ್ದು. ಅವರ ಹಿಂದಿನವರಿಗೆ, ಅವರ ಹಿಂದಿನವರು ಹೇಳಿದ್ದು. ಈ ಹಿಂಬರ್ಕಿ ಲೆಕ್ಕಾಚಾರ ಹೀಗೆ ಹಿಂದುವರಿಯುತ್ತದೆ.

ಮತ್ತೊಬ್ಬ ಪ್ರವಾಸಿಗ ಗೈಡ್ ಬಳಿ ಕೇಳಿದ-‘ಇಷ್ಟು ವರ್ಷಗಳಾದರೂ ಪಿರಮಿಡ್ಡುಗಳು ಈಜಿಪ್ಟಿನಲ್ಲಿಯೇ ಇವೆಯಲ್ಲ, ಹೇಗೆ?’ ಅದಕ್ಕೆ ಗೈಡ್ ಹೇಳಿದ-‘ಅವುಗಳನ್ನು ಬ್ರಿಟಿಷ್ ಅಥವಾ ಅಮೆರಿಕನ್ ಮ್ಯೂಸಿಯಂನಲ್ಲಿ ಇಡೋಣ ಅಂದ್ರೆ ಅವು ಅಷ್ಟು ದೊಡ್ಡ ದಾಗಿಲ್ಲವಲ್ಲ?’ ಇದೂ ನಿಜವೇ. ಬೇರೆ ಯಾರಿಗೂ ಸಾಗಿಸಲು ಸಾಧ್ಯವೇ ಇಲ್ಲದಿರುವುದರಿಂದ, ಈಜಿಪ್ಟಿನ ಆ ಸುಡು ಮರುಭೂಮಿ ಯಲ್ಲಿರುವುದರಿಂದ ಮತ್ತು ಪಿರಮಿಡ್ಡಿಗೆ ಬಳಸಿದ ಒಂದೊಂದು ಕಲ್ಲೂ ಹತ್ತಾರು ಟನ್ ಹೆಣಭಾರವಿರುವುದರಿಂದ, ಯಾರೂ ಅವುಗಳನ್ನು ಮುಟ್ಟಿಲ್ಲ.

ಹೀಗಾಗಿ ಎಲ್ಲರೂ ಪಿರಮಿಡ್ಡುಗಳನ್ನು ನೋಡಿ, ಆಶ್ಚರ್ಯಚಕಿತರಾಗಿ ಸುಮ್ಮನೆ ವಾಪಸ್ ಬರುತ್ತಾರೆ. ಅದಕ್ಕಾಗಿ ಪಿರಮಿಡ್ಡುಗಳು ಸಹಸ್ರಾರು ವರ್ಷಗಳ ಹಿಂದೆ ಹೇಗಿದ್ದವೋ, ಈಗಲೂ ಹಾಗೇ ಇವೆ. ಪಿರಮಿಡ್ಡಿಗೆ ಬಳಸಿದ ಯಾವುದಾದರೂ ವಸ್ತುಗಳನ್ನು ಎತ್ತಲು, ಸಾಗಿಸಲು ಬರುವಂತಿದ್ದಿದ್ದರೆ, ಬ್ರಿಟಿಷರಾಗಲಿ, ಅಮೆರಿಕನ್‌ರಾಗಲಿ ಪಿರಮಿಡ್ಡುಗಳನ್ನು ಸಾಗಿಸದೇ ಬಿಡುತ್ತಿದ್ದಾರಾ? ಹೀಗಾಗಿ ಅವರೆಲ್ಲ ಗಿಜಾಕ್ಕೆ ಹೋಗಿ ಪಿರಾಮಿಡ್ದುಗಳನ್ನು ನೋಡಿ, ಕೈಚೆಲ್ಲಿ ಸುಮ್ಮನೆ ಹೋಗುತ್ತಾರೆ.

ಪ್ರವಾಸಿಗರ ಕಲ್ಪನೆಯನ್ನು ಪರೀಕ್ಷಿಸಲೆಂಬಂತೆ ಗೈಡ್ ಕೇಳಿದ -‘ಗಿಜಾದ ಪಿರಮಿಡ್ಡುಗಳ ಒಳಗೆ ಬಾಗಿಲುಗಳಿವೆ ಅಂದ್ರೆ ನಂಬು ತ್ತೀರಾ?’ ಆಗ ಒಬ್ಬ ಕಿಲಾಡಿ ಪ್ರವಾಸಿಗ ತಟ್ಟನೆ ಹೇಳಿದ – ‘ಬಾಗಿಲುಗಳಿವೆಯಾ? ಇಂಪಾಸಿಬಲ. ಇದ್ದಿದ್ದರೆ ರಾಜಕಾರಣಿಗಳು ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್ ಬದಲು ಪಿರಮಿಡ್ಡುಗಳ ಇಡುತ್ತಿದ್ದರು.’ ವಾಸ್ತವವೆಂದರೆ ಇದು ತಮಾಷೆಯಲ್ಲ.

ಪಿರಮಿಡ್ಡುಗಳ ಒಳಗೆ ಬಾಗಿಲುಗಳಿವೆ. ಒಂದೊಂದು ಬಾಗಿಲು ಕನಿಷ್ಠ ಇಪ್ಪತ್ತು ಟನ್ ಭಾರದ್ದು. ಆ ಬಾಗಿಲನ್ನು ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಆಧಾರಕ್ಕೆ ಕಬ್ಬಿಣಗಳನ್ನು ಬಳಸಿಲ್ಲ. ಕಲ್ಲಿನ ಸಂದಿಯೊಳಗೆ ಸಿಕ್ಕಿಸಲಾಗಿದೆ. ಆ ಬಾಗಿಲನ್ನು ಎಡಕ್ಕೆ, ಬಲಕ್ಕೆ ಸರಿಸಬಹುದಷ್ಟೇ. ಈ ಬಾಗಿಲನ್ನು ಮಾಡಿದವನ ಕುಶಾಗ್ರಮತಿಗೆ ಏನು ಕೊಟ್ಟರೂ ಕಡಿಮೆಯೇ. ಯಾಕೆಂದರೆ ಅಷ್ಟು ಭಾರದ ಬಾಗಿಲನ್ನು ಕೇವಲ ಒಂದು ಕೈಯಲ್ಲಿ ಸರಿಸಿ ತೆರೆಯಬಹುದು. ಆದರೆ ಈ ಬಾಗಿಲನ್ನು ಹೊರಗಿನಿಂದ ಜಪ್ಪಯ್ಯ ಅಂದರೂ ತೆರೆಯಲಾಗುವುದಿಲ್ಲ. ಒಳಗಿನಿಂದ ಮಾತ್ರ ಓಪನ್ ಮಾಡಬಹುದು. ಒಳಗಿನಿಂದ ಕಳ್ಳ ಕೀಲಿ ಮೂಲಕ ಮಾತ್ರ ಅದನ್ನು ಸುಲಭ ವಾಗಿ ತೆರೆಯಬಹುದು.

ಈ ರೀತಿಯ ಬಾಗಿಲನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಅಷ್ಟು ವರ್ಷಗಳ ಹಿಂದೆ ಇಂಥದ್ದೊಂದು ತಂತ್ರಗಾರಿಕೆಯನ್ನು ರೂಪಿಸಿದ್ದು ಸಹ ಸೋಜಿಗವೇ. ಪಿರಮಿಡ್ಡುಗಳ ಒಳಗೆ ಬೃಹದಾಕಾರದ ಪೆಟ್ಟಿಗೆಗಳಿವೆ. ಇವುಗಳನ್ನು ಶವ ಸಂಗ್ರಹಕ್ಕಾಗಿಯೇ ನಿರ್ಮಿಸಿರುವುದು ನಿರ್ವಿವಾದ. ಆದರೆ ಒಂದೊಂದು ಕಲ್ಲಿನ ಪೆಟ್ಟಿಗೆ ಏನಿಲ್ಲವೆಂದರೂ ನೂರು ಟನ್ ಭಾರವಿರಬಹುದು. ಅಷ್ಟು
ಭಾರದ ಪೆಟ್ಟಿಗೆಯನ್ನು ಮನುಷ್ಯನ ಶವಗಳ ಸಂಗ್ರಹಕ್ಕಾಗಿ ಬಳಸಿರುವುದು ಸಂದೇಹಾಸ್ಪದ.

ಸುಮಾರು ಇನ್ನೂರು ಟನ್‌ಗೂ ಭಾರದ ಏಕಶಿಲೆ ಅಥವಾ ಬಂಡೆಗಳನ್ನು ಎಲ್ಲಿಂದಲೋ ಸಾಗಿಸಿ ತಂದು, ಅದನ್ನು ಕೆತ್ತಿ, ಪೆಟ್ಟಿಗೆ ಮಾಡಿದ್ದಾರೆಂದು ನಂಬಲಾಗಿದೆ. ಆ ಪಿರಮಿಡ್ಡುಗಳ ಒಳಗೆ ಅವುಗಳನ್ನು ಕದಲಿಸುವುದು ಸಾಧ್ಯವಿಲ್ಲದ ಮಾತು. ಶವಗಳ ಜತೆಗೆ,
ಬಂಗಾರ, ಬೆಳ್ಳಿ, ವಜ್ರ ಮತ್ತು ಆಭರಣಗಳನ್ನು ಸಂಗ್ರಹಿಸಿಟ್ಟಿರುವ ಸಾಧ್ಯತೆ ಇದ್ದುದರಿಂದ, ಈ ಪೆಟ್ಟಿಗೆಗಳನ್ನು ಅಷ್ಟು ಬೃಹದಾ ಕಾರದಲ್ಲಿ ನಿರ್ಮಿಸಿರಬಹುದು ಮತ್ತು ಅದಕ್ಕಾಗಿಯೇ ಕಳ್ಳ ಕೀಲಿ ಇರುವ ಭಾರದ ಬಾಗಿಲುಗಳನ್ನು ಜೋಡಿಸಿರಬಹುದು. ಆದರೆ
ಕಾಲಕಾಲಕ್ಕೆ ಈಜಿಪ್ತಿನ ಮೇಲೆ ಬೇರೆ ಬೇರೆ ರಾಜರು ದಾಳಿ ಮಾಡಿ, ಸಾಮ್ರಾಜ್ಯ ಸ್ಥಾಪಿಸಿದಾಗ, ಪಿರಮಿಡ್ಡುಗಳೊಳಗೆ ಇದ್ದ ಬೆಲೆ ಬಾಳುವ ಮತ್ತು ಅಮೂಲ್ಯ ವಸ್ತುಗಳನ್ನು ದೋಚಿಕೊಂಡು ಹೋಗಿರಬಹುದು.

ದೊಡ್ಡ ಪಿರಮಿಡ್ಡುಗಳನ್ನು ಧ್ವಂಸ ಮಾಡುವುದು ಸಾಧ್ಯವಿಲ್ಲದ್ದರಿಂದ, ಅಲ್ಲಲ್ಲಿ ಗೋಡೆಗಳಿಗೆ ಧಕ್ಕೆ ಮಾಡಿದ್ದಾರೆ. ಆದರೆ ಚಿಕ್ಕ ಪಿರಮಿಡ್ಡುಗಳನ್ನು ನೆಲಸಮ ಮಾಡಿ ಅವುಗಳೊಳಗೆ ಇದ್ದ ಧನ-ಕನಕಗಳನ್ನು ದೋಚಿರಬಹುದು. ಗಿಜಾದಲ್ಲಿರುವ ಮೂರರ ಪೈಕಿ ಒಂದು ಪಿರಮಿಡ್ಡಿನ ಒಂದು ಪಾರ್ಶ್ವವನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದು ಗೊತ್ತಾಗುತ್ತದೆ. ಒಂದೆಡೆ ಪಿರಮಿಡ್ಡಿನ ಗೋಡೆಯೊಳಗೆ ತೂತು ಮಾಡಲು ವಿಫಲ ಪ್ರಯತ್ನ ಮಾಡಿರುವುದು ಕಾಣುತ್ತದೆ. ಅದರ ಕೆಳಭಾಗದಲ್ಲಿ ಕೆಲವು ಕಲ್ಲುಗಳು ಉರುಳಿ ಬಿದ್ದಿರುವುದು ಆ ಸಂದೇಹವನ್ನು ಪುಷ್ಟೀಕರಿಸುತ್ತದೆ.

ಪಿರಮಿಡ್ಡುಗಳಲ್ಲಿ ಕಂಡು ಬರುವ ನಿರ್ಮಿತಿ ಕೌಶಲ (workmanship) ಈಜಿಪ್ಟಿನಲ್ಲಿರುವ ಉಳಿದ ಕಲಾಕೃತಿಗಳಲ್ಲೂ ಕಾಣ ಬಹುದು. ಚಕ್ರ ಅಥವಾ ಗಾಲಿ (Wheel) ಯನ್ನು ಕಂಡು ಹಿಡಿಯದ ಆ ದಿನಗಳಲ್ಲಿ, ಆಧುನಿಕ ಮಾನವ ಈಗ ಮಾಡಬಹುದಾದ ಸಾಹಸ ಮತ್ತು ಅದ್ಭುತಗಳನ್ನು ಮಾಡಿದ್ದು ಪರಮಾಶ್ಚರ್ಯವೇ. ವಿಶ್ವದ ಹಳೆಯ ಏಳು ಅದ್ಭುತಗಳ ಪೈಕಿ, ಪಿರಮಿಡ್ದೊಂದನ್ನು ಹೊರತುಪಡಿಸಿ, ಉಳಿದೆಲ್ಲವೂ ನಾಶವಾಗಿವೆ, ಇಲ್ಲವೇ ಶಿಥಿಲವಾಗಿವೆ, ಇಲ್ಲವೇ ಅವನತಿಯ ಹಾದಿಯಲ್ಲಿವೆ. ಆದರೆ ಪಿರಮಿಡ್ ಮಾತ್ರ ಇಂದಿಗೂ ಕಾಲನ ಸವಾಲುಗಳನ್ನು ಎದುರಿಸಿ ಭದ್ರವಾಗಿ ನಿಂತಿದೆ.

ಮನುಷ್ಯ ನಿರ್ಮಿಸಿದ್ದು ಸಹ ಕಾಲಾತೀತ ಎಂಬುದನ್ನು ಸಾಬೀತುಪಡಿಸಿದೆ. ಕಬ್ಬಿಣ, ಸಿಮೆಂಟು ಸೇರಿದಂತೆ ಆಧುನಿಕ ಸಾಮಗ್ರಿ ಗಳನ್ನು ಬಳಸಿ ಕಟ್ಟುವ ಮನೆ, ಅಪಾರ್ಟಮೆಂಟುಗಳಿಗೆ ಜೀವಿತದ ಅವಧಿಯನ್ನು ನಿಗದಿ ಮಾಡಿಸುವ ಮನುಷ್ಯನಿಗೆ, ಪುರಾತನ ಪಿರಮಿಡ್ಡುಗಳು ಇನ್ನು ಎಷ್ಟು ವರ್ಷಗಳ ಕಾಲ ಹೀಗೆಯೇ ಇರಬಹುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯ ವಾಗಿಲ್ಲ.