Saturday, 12th October 2024

ನಿರೀಕ್ಷೆ ಹುಸಿ; ಉತ್ತರಾಧಿವೇಶನಕ್ಕೆ ತೆರೆ

Suvarna Soudha

ವಿಶ್ವವಾಣಿ ವಿಶೇಷ 

ಸಮಸ್ಯೆಗಳ ಪರಿಹಾರದ ಚರ್ಚೆಗಿಂತ ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾದ ಕಲಾಪ

ವಿಧಾನಸಭೆ 52 ಗಂಟೆ ಕಲಾಪದಲ್ಲಿ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆಯಾಗಿದ್ದು ಕೇವಲ 5.45 ಗಂಟೆ

ವಿಧಾನ ಪರಿಷತ್ತಿನಲ್ಲಿ 11 ಗಂಟೆ ಸುದೀರ್ಘ ಚರ್ಚೆ ನಡೆದಿದ್ದಷ್ಟೇ ಸಮಾಧಾನಕರ ಸಂಗತಿ

ಸರಕಾರದಿಂದಲೂ ಆ ಭಾಗದ ಅಭಿವೃದ್ಧಿಗೆ ನಿರ್ದಿಷ್ಟ ಕಾರ‍್ಯಕ್ರಮ ಘೋಷಣೆಯಾಗಲಿಲ್ಲ

ಸುವರ್ಣಸೌಧ: ಎರಡು ವರ್ಷದ ಬಳಿಕ ಉತ್ತರ ಕರ್ನಾಟಕ ಭಾಗದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನ ಮಂಡಲ ಕಲಾಪ ಮತ್ತದೇ ನಿರಾಶೆಯೊಂದಿಗೆ ಮುಕ್ತಾಯಗೊಂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾ ಮಯ್ಯ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮುಂತಾದವರು ಉತ್ತರ ಕರ್ನಾಟಕ ಭಾಗ ದಿಂದಲೇ ಆಯ್ಕೆಯಾಗಿರುವುದರಿಂದ ಪ್ರಸಕ್ತ ಅಧಿವೇಶನದಲ್ಲಿ ಏನಾದರೂ ನ್ಯಾಯ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅದು ಸಂಪೂರ್ಣ ಹುಸಿಯಾಗಿದೆ.

ವಿಧಾನಸಭೆಯಲ್ಲಿ ಒಟ್ಟು ೫೨ ಗಂಟೆ ಕಲಾಪ ನಡೆಯಿತಾದರೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿ ಸಲು ಸಿಕ್ಕಿದ್ದು ಕೇವಲ ೫ ಗಂಟೆ ೪೫ ನಿಮಿಷ ಮಾತ್ರ. ಅದರಲ್ಲೂ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಪರಿಹಾರಕ್ಕೆ ಸಲಹೆಗಳನ್ನು ನೀಡುವುದಕ್ಕಿಂತ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಹೆಚ್ಚು ಸಮಯ ಮೀಸಲಾಯಿತು.

ಡಿ.13ರಂದು ಕಲಾಪ ಆರಂಭವಾದಾಗಲೇ ಉತ್ತರ ಕರ್ನಾಟಕ ಕುರಿತ ಚರ್ಚೆಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಆಡಳಿತ ಮತ್ತು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಎರಡು ದಿನ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಉಭಯ ಸದನಗಳಲ್ಲಿ ಪ್ರಕಟಿಸಲಾಗಿತ್ತು. ಈ ಮಧ್ಯೆ ಮಳೆ ಹಾನಿ ಪರಿಹಾರ ಕುರಿತಂತೆ ಚರ್ಚೆ ತುರ್ತು ಅಗತ್ಯವಿದ್ದುದರಿಂದ ಅದಕ್ಕೆ ಆದ್ಯತೆ ನೀಡಲಾಯಿತು. ಈ ಕುರಿತು 8.30ಕ್ಕೂ ಹೆಚ್ಚು ಸಮಯ ಚರ್ಚೆ ನಡೆದು ಸರಕಾರ ಉತ್ತರ ನೀಡಿತು. ಇದಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ, ಕನ್ನಡ ಧ್ವಜಕ್ಕೆ ಅವಮಾನ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಎಂಇಎಸ್ ಪುಂಡಾಟ ಕುರಿತ ಚರ್ಚೆಗೆ ಸಾಕಷ್ಟು ಸಮಯ ಬೇಕಾಯಿತು.

ಹೀಗಾಗಿ ಕೊನೆಯ ಎರಡೂವರೆ ದಿನ ಇದ್ದಾಗ ಉತ್ತರ ಕರ್ನಾಟಕ ಸಮಸ್ಯೆಯ ಚರ್ಚೆ ಕೈಗೆತ್ತಿಕೊಳ್ಳಲಾಯಿತು. ಇದರ ಮಧ್ಯೆ ಮತಾಂತರ ನಿಷೇಧ ವಿಧೇಯಕವನ್ನು ಸರಕಾರ ಮಂಡಿಸಿದ್ದರಿಂದ ಒಂದು ದಿನ ಆ ಕುರಿತು ಚರ್ಚೆಯಾಗಿ ವಿಧೇಯಕ ಅಂಗೀಕಾರವಾಯಿತು.

ಪರಿಷತ್ತಿನಲ್ಲಿ 11 ಗಂಟೆ ಚರ್ಚೆ
ಸಮಾಧಾನದ ಸಂಗತಿ ಎಂದರೆ ವಿಧಾನ ಪರಿಷತ್ತಿನಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಸುಮಾರು 11 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದು ಸರಕಾರ ಉತ್ತರವನ್ನೂ ನೀಡಿತು. ಆದರೆ, ಇಲ್ಲೂ ಸಮಸ್ಯೆ ಬಗೆಹರಿಸುವ ಸಲಹೆಗಳಿಗಿಂತ ರಾಜಕೀಯ ವಾದ- ಪ್ರತಿವಾದಗಳೇ ಹೆಚ್ಚಾಗಿತ್ತು. ಇನ್ನು ಸರಕಾರದ ಉತ್ತರದಲ್ಲಿ ಉತ್ತರ ಕರ್ನಾಟದ ಅಭಿವೃದ್ಧಿಗೆ ಬದ್ಧವಿದ್ದೇವೆ ಎಂಬ ಭರವಸೆ ಸಿಕ್ಕಿತೇ ಹೊರತು ಅದಕ್ಕಾಗಿ ಯಾವ ದಿಕ್ಕಿನಲ್ಲಿ ಸಾಗುತ್ತೇವೆ ಎಂಬ ಸಣ್ಣ ಸುಳಿವೂ ಸಿಗಲಿಲ್ಲ. ನೀರಾವರಿ ಹೊರತುಪಡಿಸಿ ಬೇರೆ ಯಾವುದೇ ವಿಚಾರಗಳು ಸರಿಯಾಗಿ ಪ್ರಸ್ತಾಪವಾಗಲೇ ಇಲ್ಲ. ಬೆರಳೆಣಿಕೆಯ ಸದಸ್ಯರು ಬೇರೆ ಬೇರೆ ವಿಚಾರಗ ಳನ್ನು ಪ್ರಸ್ತಾಪಿಸಿದರಾದರೂ ಅವರಿಗೆ ಮಾತನಾಡಲು ಹೆಚ್ಚು ಅವಕಾಶ ಸಿಗಲಿಲ್ಲ. ಹೀಗಾಗಿ ಸಮಸ್ಯೆಗಳ ಬಗ್ಗೆ ಸೂಕ್ತ ಚರ್ಚೆ
ನಡೆಸಲು ಸಮಯದ ಕೊರತೆ ಮತ್ತು ಸದಸ್ಯರ ನಿರಾಸಕ್ತಿಯಿಂದಾಗಿ ಈ ಬಾರಿಯ ಅಽವೇಶನದಲ್ಲೂ ಸಮಗ್ರ ಅಭಿವೃದ್ಧಿಯ ಕ್ರಿಯಾತ್ಮಕ ಭರವಸೆ ಸಿಗಲೇ ಇಲ್ಲ.

ಸಚಿವರ ರಾಜೀನಾಮೆ ಬೇಡಿಕೆ ಹೋರಾಟ ಅರ್ಧಕ್ಕೆ ಸ್ಥಗಿತ
ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಬಸವರಾಜು ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಅನುಮತಿ ನೀಡಿದ್ದು, ಇದರ ನೈತಿಕ
ಹೊಣೆಹೊತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಎರಡೂ ಸದನಗಳಲ್ಲಿ ಗದ್ದಲ ಎಬ್ಬಿಸಿ ಧರಣಿ ನಡೆಸಿತು. ಆದರೆ, ಅಷ್ಟರಲ್ಲಿ ಕನ್ನಡ ಧ್ವಜಕ್ಕೆ ಅವಮಾನ, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಎಂಇಎಸ್ ಪುಂಡಾಟ ನಡೆದಿದ್ದರಿಂದ ಈ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಹೋರಾಟವನ್ನು ಅರ್ಧಕ್ಕೆ ಸ್ಥಗಿತಗೊಳಿಸಿತು.

***

ಬಿಟ್ ಕಾಯಿನ್, 40% ಚರ್ಚೆಗೆ ಬರಲೇ ಇಲ್ಲ ಅಧಿವೇಶನದಲ್ಲಿ ಬಿಟ್ ಕಾಯಿನ್ ಮತ್ತು 40 ಪಸೆಂಟ್ ಕಮಿಷನ್ ಆರೋಪಗಳನ್ನು ಪ್ರಸ್ತಾಪಿಸಿ ಸರಕಾರ ವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್ ನಿರ್ಧರಿಸಿತ್ತಾದರೂ ಈ ಎರಡೂ ವಿಚಾರಗಳು ಚರ್ಚೆಗೆ ಬರಲೇ ಇಲ್ಲ. ಈ ವಿಚಾರ ಪ್ರಸ್ತಾಪಿಸಲು ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತಾದರೂ ಹೆಚ್ಚು ಗಂಭೀರವಾಗಿ ಪರಿಗಣಿಸಿಲ್ಲ. ಮೇಲಾಗಿ ಸಮಯದ ಅಭಾವದಿಂದ ಚರ್ಚೆಗೆ ಅವಕಾಶವೂ ಸಿಗಲಿಲ್ಲ.

ವಿಧಾನಮಂಡಲ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ
ಎರಡು ವರ್ಷಗಳ ಬಳಿಕ ಬೆಳಗಾವಿಯ ಸುವರ್ಣ ವಿಧಾಸೌಧದಲ್ಲಿ ನಡೆದ ವಿಧಾನ ಮಂಡಲ ಕಲಾಪಕ್ಕೆ ಶುಕ್ರವಾರ ತೆರೆ ಬಿದ್ದಿದೆ. ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತ ಚರ್ಚೆಗೆ ಇನ್ನೂ ಅವಕಾಶ ನೀಡಬೇಕು ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಧರಣಿ, ಘೋಷಣೆ ಗಳೊಂದಿದೆ ಕಲಾಪಕ್ಕೆ ತೆರೆ ಬಿದ್ದರೆ, ವಿಧಾನ ಪರಿಷತ್ತಿನಲ್ಲಿ ವಿಧಾನ ಪರಿಷತ್ತಿನಿಂದ ನಿವೃತ್ತರಾಗುವ ಸದಸ್ಯರ ವಿದಾಯ ಭಾಷಣದೊಂದಿಗೆ ಕಲಾಪ ವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಕೊನೆಯ ದಿನವಾದ ಶುಕ್ರವಾರ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯೆ ವಿರಳವಾಗಿತ್ತು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತಿತರೆ ಕಾರಣಗಳಿಂದ ಸದಸ್ಯರು ಕಲಾಪದಿಂದ ದೂರ ಉಳಿದಿದ್ದರಿಂದ ಸದನ ಆರಂಭ ವಾಗುವಾಗ ಮೂರನೇ ಒಂದರಷ್ಟು ಸದಸ್ಯರೂ ಇರಲಿಲ್ಲ.