Saturday, 14th December 2024

ಭೈರಪ್ಪ ವಿರುದ್ದ ಟೀಕೆ: ನೆಲೆಯಿಲ್ಲದ ಹಳ್ಳಿಹಕ್ಕಿಯ ಹತಾಶೆಯ ಪ್ರಲಾಪ

ಓದುಗರ ಒಡಲಾಳ

ವಾಜರಳ್ಳಿ ವಾಸುದೇವಮೂರ್ತಿ

ಮಗನಿಗೆ ಟಿಕೆಟ್ ಕೊಡಿಸಲು ಇಷ್ಯೂನಾಥ್‌ಗೆ ಇಂಥ ಹೇಳಿಕೆ ಅನಿವಾರ್ಯ !

ನಿಮ್ಮ ರಾಜಕೀಯ ಲಾಭಕ್ಕೆ ಜ್ಞಾನಪೀಠಿಗಳನ್ನು ಅವಮಾನಿಸುತ್ತಿರೇಕೆ?

ಮಾನ್ಯರೆ,
‘ಹಳ್ಳಿಹಕ್ಕಿ’ಯೀಗ ನೆಲೆಯಿಲ್ಲದೇ, ಇರುವ ಗೂಡಿನಲ್ಲೂ ಜಾಗವಿಲ್ಲದೇ, ಬೇರೆ ಗೂಡಿನ ಹಕ್ಕಿಗಳು ತಮ್ಮೊಂದಿಗೆ ಸೇರಿಸಿಕೊಳ್ಳದೇ ಅತಂತ್ರವಾಗಿದ್ದು, ಹತಾಶೆಯ ಪರಮಾವಧಿ ಮುಟ್ಟಿರುವುದು ಸ್ಪಷ್ಟ. ಅದಿಲ್ಲದಿದ್ದರೆ ಕನ್ನಡದ ಹೆಮ್ಮೆಯ ಕಾದಂಬರಿಕಾರ, ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ‘ಹಳ್ಳಿಹಕ್ಕಿ’ ಪ್ರಲಾಪ ನಡೆಸಿರುವುದಕ್ಕೆ ಬೇರೆ ಅರ್ಥವೇನಿದೆ? ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಹೋಗಿ, ಅಲ್ಲಿ ಗೌಡರು ಉದಾರವಾಗಿ ಕೊಟ್ಟ ರಾಜ್ಯಾಧ್ಯಕ್ಷ ಹುದ್ದೆಯನ್ನೂ ನಿಭಾಯಿಸಲಾಗದೇ ಅಧಿಕಾರದ ಹಪಾಹಪಿಯಿಂದ ಬಿಜೆಪಿಗೆ ಹಾರಿ ವಿಧಾನ ಪರಿಷತ್ ಸದಸ್ಯರಾಗಿರುವ ‘ವಲಸೆ ಹಕ್ಕಿ’ ಅಡಗೂರು ಎಚ್.ವಿಶ್ವನಾಥ್ ಅವರು ಭೈರಪ್ಪ ನವರ ಬಗೆಗೆ ಆಡಿರುವ ಮಾತುಗಳಿಗೆ ಯಾವ ಸಮರ್ಥನೆಯಿದೆ? ಭೈರಪ್ಪನವರಿಗೆ ಪದ್ಮಭೂಷಣ ಗೌರವ ಸಿಕ್ಕಿದ್ದು ‘ಪ್ರಧಾನಿ ಮೋದಿಯವರ ಕೃಪೆ’ ಎಂಬರ್ಥದಲ್ಲಿ ಅಡಗೂರು ಪ್ರತಿಕ್ರಿಯಿಸಿದ್ದಾರೆ.

ಬೇಕೆಂದೇ ಅವರು ಇಂಥ ವಿವಾದಾತ್ಮಕ ಹೇಳಿಕೆಗಳಿಂದ ಪ್ರಚಾರ ಗಿಟ್ಟಿಸಿಕೊಳ್ಳುವುದು, ಆ ಮೂಲಕ ‘ಇಷ್ಯೂನಾಥ್’, ಎಂಬ ಹೆಸರನ್ನು ವಿಶ್ವನಾಥ್ ಪಡೆದಿರುವುದು ಇದೇ ಮೊದಲಲ್ಲ. ತಮ್ಮ ವಾಚಾಳಿತನದಿಂದಲೇ ಕುಖ್ಯಾತಿಗೆ ಪಾತ್ರರಾಗಿರುವ ಇಷ್ಯೂನಾಥ್ ಸಿಕ್ಕ ಸಿಕ್ಕ ವಿಚಾರಗಳಿಗೆ ಬಾಯಿ ಹಾಕಿ ತಾವೊಬ್ಬ ‘ಚಿಂತನಶೀಲ ರಾಜಕಾರಣಿ’ ಎಂಬ ಬುಸುಕೊಡುವುದರಲ್ಲಿ ನಿಸ್ಸೀಮ. ಮೊದಲೆಲ್ಲ ಸಜ್ಜನ ರಾಜಕಾರಣಿ ಎಂದೇ ಭ್ರಮಿಸಿದ್ದ ವಿಶ್ವನಾಥ್‌ರ ‘ಕಲ್ಯಾಣ ಗುಣಗಳ’ ಬಗೆಗೆ ಮೈಸೂರಿಗೆ ಮೈಸೂರೇ ಮಾತನಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಏನೇನೋ ಹಗಲುಗನಸು ಕಂಡು ಬಿಜೆಪಿಗೆ ಹಾರಿದ್ದ ಈ ಹಳ್ಳಿಹಕ್ಕಿಯನ್ನು ಅಲ್ಲಿ ‘ಕ್ಯಾರೇ’ ಎನ್ನದಿದ್ದುದರಿಂದ ಹತಾಶರಾಗಿ, ರೆಕ್ಕೆ ಕತ್ತರಿಸಿಕೊಂಡು ಇದೀಗ ರಾಜಕೀಯ ಸನ್ಯಾಸದ ಮಾತನಾಡುತ್ತಿದ್ದರೂ, ಮಗನಿಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯ ಕದ ತಟ್ಟುತ್ತಿರುವುದು ಗೊತ್ತಿಲ್ಲದ ಸಂಗತಿ ಯೇನಲ್ಲ. ತಾವಂದುಕೊಂಡಿದ್ದು ನೆರವೇರಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಸಹವಾಸ ಅಪಥ್ಯವಾಗಿದ್ದು, ಸಿದ್ದರಾಮಯ್ಯ ಹಾಗೂ
ಕಾಂಗ್ರೆಸ್ ನಾಯಕರ ಓಲೈಕೆಗಾಗಿ ವಿಶ್ವನಾಥ್ ಮೋದಿ ಟೀಕೆಗೆ ಇಳಿದಿದ್ದಾರೆ.

ಸ್ವಾಮಿ ಇಷ್ಯೂನಾಥ್‌ರವರೇ, ಕನ್ನಡದ ಅಸಾಧಾರಣ, ಅಸಾಮಾನ್ಯ ಸಾಹಿತಿ ಭೈರಪ್ಪನವರು. ಅವರ ಅಧ್ಯಯನ ಪರತೆ, ಓದು, ಪ್ರವಾಸ, ಜ್ಞಾನ, ಸೃಜನಶೀಲತೆ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಯಾರಿಗೆ ಕಡಿಮೆ ಎಂದು ನಿಮಗೆ ಅನಿಸಿದೆ? ಯಾಕಾಗಿ ಅವರು ಪದ್ಮಭೂಷಣ ಪ್ರಶಸ್ತಿಗೆ
ಅರ್ಹರಲ್ಲ ಎಂಬುದನ್ನು ಒಂದು ಸಕಾರಣದೊಂದಿಗೆ ವಿವರಿಸಬಲ್ಲಿರಾ? ಈ ಮೊದಲೇ ೨೦೧೬ರಲ್ಲಿ ಭೈರಪ್ಪನವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು. ಆಗಲೂ ನರೇಂದ್ರ ಮೋದಿಯವರೇ ಪ್ರಧಾನಮಂತ್ರಿಯಾಗಿದ್ದರು ಎಂಬುದು ನಿಜ.

ಆದರೆ, ಅದಕ್ಕೂ ಮುನ್ನ ಇದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಏಕೆ ಭೈರಪ್ಪನವರಂಥ ಸಮಕಾಲೀನ ಸನ್ನಿವೇಶದ ಅತಿ ಶ್ರೇಷ್ಠ, ಕನ್ನಡಿಗರಾದ ಕಾದಂಬರಿಕಾರ ಕಾಣಲೇ ಇಲ್ಲ? ಅವರ ಪುಸ್ತಕಗಳು ಮಾರಾಟವಾದಷ್ಟು ಕನ್ನಡದ ಹಾಗಿರಲಿ, ಭಾರತೀಯ ಬೇರೆ ಯಾವ ಭಾಷೆಯ, ಬೇರೆ ಯಾವ ಸಾಹಿತಿಯ ಕೃತಿಗಳು ಮಾರಾಟವಾಗುತ್ತವೆ? ದೇಶದ ಹೆಮ್ಮೆಯ ಈ ಸಾಹಿತಿಯ ಅತಿ ಹೆಚ್ಚು ಕೃತಿಗಳು ಬೇರೆ ಬೇರೆ ಭಾಷೆಗಳಿಗೂ ಅನುವಾದಗೊಂಡಿವೆ. ಇಂಥ ಭೈರಪ್ಪನವರಿಗೆ ಪದ್ಮಶ್ರೀ ಸಿಕ್ಕ ಏಳು ವರ್ಷಗಳ ಬಳಿಕ ಇದೀಗ ಪದ್ಮಭೂಷಣ ನೀಡಿ ಗೌರವಿಸಲಾಗಿದೆ ಎಂಬು ದಕ್ಕಿಂತ, ಕೇಂದ್ರ ಸರಕಾರ ತನ್ನನ್ನು ತಾನು ಗೌರವಿಸಿಕೊಂಡಿದೆ.

ಅಷ್ಟಕ್ಕೂ ಪದ್ಮಶ್ರೀ ಪ್ರಶಸ್ತಿ ಸಿಕ್ಕಾಗ ಯಾಕೆ ನೀವು ಬಾಯಿಮುಚ್ಚಿ ಕೊಂಡಿದ್ದಿರಿ? ಕೇಂದ್ರದಲ್ಲಿ ನಿಮ್ಮದೇ (ಕಾಂಗ್ರೆಸ್) ಸರಕಾರವಿದ್ದು, ಆಗ ನೀವೂ ಸಂಸದರಾಗಿದ್ದಾಗಲೂ ನಿಮ್ಮದೇ ಊರಿನ ಸರ್ವಶ್ರೇಷ್ಠ ಕಾದಂಬರಿಕಾರರಾದ ಭೈರಪ್ಪನವರಿಗೆ ಪದ್ಮ ಗೌರವ ಕೊಡಿಸಬೇಕೆಂದು ನಿಮಗೆ ಅನ್ನಿಸಿ ರಲಿಲ್ಲವೇ? ನಿಜ, ‘ಇಂದು ಮೋದಿಯವರು ಪ್ರಧಾನಿ ಆದ್ದರಿಂದ ನನಗೆ ಪದ್ಯಭೂಷಣ ಪ್ರಶಸ್ತಿ ಬಂದಿದೆ.

ಇಲ್ಲವಾಗಿದ್ದರೆ ಬರುತ್ತಿರಲಿಲ್ಲ’ ಎಂದು ಭೈರಪ್ಪನವರು ಪ್ರತಿಕ್ರಿಯಿಸಿದ್ದಾರೆ. ಅದರಲ್ಲಿ ತಪ್ಪೇನು? ಭೈರಪ್ಪನವರು ಸತ್ಯವನ್ನೇ ಹೇಳಿದ್ದಾರಲ್ಲವೇ? ಆದರೆ ಅದಕ್ಕೂ ಹೆಚ್ಚಿನ ಸತ್ಯವೆಂದರೆ, ಪ್ರಶಸ್ತಿ ದೊರಕಿದ್ದು ಮೋದಿಯವರಿಂದಲ್ಲ, ಅದು ದೂರಕ್ಕಿದ್ದು ಭೈರಪ್ಪನವರ ಬರವಣಿಗೆ, ಸಾಹಿತ್ಯ ಕ್ಷೇತ್ರದ
ಸಾಧನೆಗೆ. ಅದನ್ನು ಗುರುತಿಸುವ ವ್ಯವಧಾನ, ವೈಶಾಲ್ಯ ಮೋದಿಯಿಂದ ಹೊರತಾಗಿ ಕಾಂಗ್ರೆಸ್‌ನವರಿಗೆ ಇರಲಿಲ್ಲ. ಇದ್ದಿದ್ದರೆ, ನೂರರ ಅಂಚಿನಲ್ಲಿ ರುವ ಭೈರಪ್ಪನವರಿಗೆ ಈಗ ಪದ್ಮ ಗೌರವಗಳು ಸಲ್ಲಬೇಕಿರಲಿಲ್ಲ. ಅದು ಸಿಕ್ಕು, ದಶಕಗಳೇ ಸಂದಿರುತ್ತಿದ್ದವು.

ವಿಶ್ವನಾಥ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಭೈರಪ್ಪನವರು ಮುಂದಿನ ದಿನಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆಯಲಿಕ್ಕೋಸ್ಕರ ಮೋದಿಯ ವರನ್ನು ಈ ರೀತಿ ಮೆಚ್ಚಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ. ವಿವೇಚನಾಶಿಲರು ಮಾತನಾಡುವ ಮಾತಲ್ಲ ಇದು? ಕುವೆಂಪು ಅವರ ಬಗ್ಗೆ ಯಾರೋ ಒಬ್ಬರು ಈ ರೀತಿ ಕೇವಲವಾಗಿ ಮಾತಾಡಿದಾಗ, ಆ ಮಹಾಕವಿ ‘ನಾನೇರಿದ ಎತ್ತರಕ್ಕೆ ನೀನೇರ ಬಯು’ ಎಂದು ಕೇಳಿದ್ದರು. ರಾಷ್ಟ್ರಕವಿಯ ಈ ಮಾತು ಅಡಗೂರು ವಿಶ್ವನಾಥ್‌ಗೂ ಅನ್ವಯ. ಭೈರಪ್ಪನವರು ಏರಿದ ಎತ್ತರಕ್ಕೆ ವಿಶ್ವನಾಥ್ ಏರಬಲ್ಲರೇ? ಸ್ವಾಮಿ ಇಷ್ಯೂನಾಥ್‌ ರವರೇ ನಿಮ್ಮ ಅಡಗೂರಿನ ಅಡಗೂಲಜ್ಜಿಯ ಕಥೆಯನ್ನು ಬದಿಗಿಡಿ.

ಬಹಳ ಜ್ಞಾನಿಗಳಂತೆ ಮಾತನಾಡುವ ನಿಮಗೆ ಜ್ಞಾನಪೀಠ ಪ್ರಶಸ್ತಿ ಕೊಡುವರು ಯಾರು ಎಂಬುದು ಗೊತ್ತಿಲ್ಲವೇ? ಮೋದಿಯವರಿಗೂ ಜ್ಞಾನಪೀಠಕ್ಕೂ ಏನು ಸಂಬಂಧ? ಆ ಪ್ರಶಸ್ತಿಯನ್ನು ೧೯೯೧ರ ಮೇ ೨೨ರಂದು ಸಾಹು ಜೈನ್ ಪರಿವಾರದವರು ಸ್ಥಾಪಿಸಿದ್ದು, ಪ್ರಶಸ್ತಿ, ಪುರಸ್ಕೃತರನ್ನು eನಪೀಠ ಟ್ರ ಆಯ್ಕೆ ಮಾಡುತ್ತದೆಯೇ ಹೊರತು ಕೇಂದ್ರ ಸರಕಾರವಲ್ಲ. ಹಾಗೊಮ್ಮೆ ಕೇಂದ್ರ ಸರಕಾರದ ಲಾಭಿಯಿಂದ ಜ್ಞಾನಪೀಠ ಬರುತ್ತದೆಂದಾದರೇ ಕನ್ನಡಕ್ಕೆ ಸಿಕ್ಕ ಎಂಟು ಜ್ಞಾನಪೀಠವೂ ಇಂಥ ಲಾಭಿಯಿಂದ ಬಂದದ್ದೇ? ಯಾಕೆ ವೃಥಾ ಕನ್ನಡದ ಹೆಮ್ಮೆಯ ಜ್ಞಾನಪೀಠಿಗಳನ್ನು ಅವಮಾನಿಸುತ್ತೀರಿ? ಅಷ್ಟಕ್ಕೂ, ಜ್ಞಾನಪೀಠ ಪ್ರಶಸ್ತಿ ಮುಂದಿನ ದಿನಗಳಲ್ಲಿ ಭೈರಪ್ಪನವರಿಗೆ ಬಂದರೂ ಅದನ್ನು ಫ್ರಾನ್ಸ್ ದೇಶದ ತತ್ವಜ್ಞಾನ (ಭೈರಪ್ಪನವರೂ ಕೂಡ ತತ್ವಜ್ಞಾನಿ), ಹೆಸರಾಂತ ಬರಹಗಾರ ಜೀಗ್-ಬಾಲ-ಸಾಟಿಯವರು ಸಾಹಿತ್ಯಕ್ಕೆ ಕೊಡುವ ನೋಬಲ್ ಪ್ರಶಸ್ತಿಯನ್ನು ತಿರಸ್ಕರಿಸಿದಂತೆ, ನಮ್ಮ ೯೨ವರ್ಷ ಪ್ರಾಯದ ಭೈರಪ್ಪನವರು ಅದನ್ನು ತಿರಸ್ಕರಿಸಬಹುದಲ್ಲವೇ? ಅದನ್ನು ಸಂಭ್ರಮಿಸುವ ವಯಸ್ಸಿನಲ್ಲಿ ಸಿಗದ ಜ್ಞಾನಪೀಠ, ಈಗ ಸಿಕ್ಕರೆಷ್ಟು, ಬಿಟ್ಟರೆಷ್ಟು? ಮಾತ್ರವಲ್ಲ, ಜ್ಞಾನಪೀಠಕ್ಕೆ ಸರಿಸಮಾನವೆಂದು ಪರಿಗಣಿತ ಸರಸ್ವತಿ ಸಮ್ಮಾನ್‌ಗೆ ಈಗಾಗಲೇ ಭೈರಪ್ಪನವರು ಭಾಜನರು ಎಂಬುದು ನಿಮಗೆ ನೆನಪಿರಲಿ.

ನೀವು ರಾಜಕಾರಣಿಗಳು ಮಾಡುವಂತೆ, ಜೀವನದಲ್ಲಿ ಯಾರನ್ನೋ ಹೊಗಳಿ, ಯಾರದ್ದೋ ಮುಖಸ್ತುತಿ ಮಾಡಿ ಬೇಳೆ ಬೇಯಿಸಿಕೊಳ್ಳುವ, ಪ್ರಶಸ್ತಿಗೌರವಗಳನ್ನು ಹೊಡಕೊಳ್ಳುವ ದರ್ದು, ಅನಿವಾರ್ಯ ಭೈರಪ್ಪನವರಂಥ ಭೈರಪ್ಪನವರಿಗೆ ಇಲ್ಲ ಎಂಬುದನ್ನು ನೆನಪಿಡಿ. ಓದುಗರ ‘ಜ್ಞಾನದ ಪೀಠ’ದಲ್ಲಿ ಭೈರಪ್ಪನವರು ಎಂದೋ ವಿರಾಜಮಾನರಾಗಿಬಿಟ್ಟಿದ್ದಾರೆ. ಹಾಗೂ ಅವರಿಗೆ ಜ್ಞಾನಪೀಠ ಒಲಿಒಯಲೇ ಇಲ್ಲವೆಂದಾದರೆ ಭೈರಪ್ಪನವರಿಗಾಗಲೀ, ಅವರ ಅಪಾರ ಓದುಗರು, ಅಭಿಮಾನಿಗಳಿಗಾಗಲೀ ನಷ್ಟವೇನೂ ಇಲ್ಲ. ಇಂಥವರಿಗೊಬ್ಬರಿಗೆ ಜ್ಞಾನಪೀಠ ಸಲ್ಲದ ಕಾರಣಕ್ಕೆ ಆ ಗೌರವಕ್ಕೆ ಅಪವಾದ ಶಾಶ್ವತವಾದೀತು.

ಭೈರಪ್ಪನವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವ ವಿಷಯಕ್ಕೆ, ಸದಾ ಅಧಿಕಾರಕ್ಕೆ ಬಾಲ ಬಡಿಯುಯವ ನೀವು ನಿಮ್ಮಂಥವರು ಪ್ರತಿಕ್ರಿಯಿಸಿದ
ರೀತಿಯ ಬಗೆಗೆ ಆತ್ಮವಿಮರ್ಶೆಗೆ ಇಳಿದರೆ ಲೇಸು. ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ ವಿಶ್ವನಾಥ್‌ರವರೇ, ಭೈರಪ್ಪನವರಿಗೆ ಪದ್ಮ ಪ್ರಶಸ್ತಿಗಳನ್ನಾಗಲೀ,
ಜ್ಞಾನಪೀಠವನ್ನಾಗಲೀ ಕೊಡಿಸುವ ಯೋಗ್ಯತೆಯಾಗಲೀ, ಕಾಳಜಿಯಾಗಲೀ ನಿಮಗಿದೆಯೇ? ಪಾಪ, ನಿಮ್ಮ ಮಗನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು
ಇಂಥವೆಲ್ಲ ಹೇಳಿಕೆ ಅನಿವಾರ್ಯ ಎಂಬದನ್ನು ಅರ್ಥಮಾಡಿಕೊಳ್ಳಬಲ್ಲೆವು. ಆದರೆ ಭೈರಪ್ಪನವರಂಥ ಘನ ವ್ಯಕ್ತಿತ್ವಕ್ಕೆ ಕುಂದು ಬರುವಂಥ ಮಾತನಾಡುವ ಮೊದಲು ತುಸು ಯೋಚಿಸಿ, ಇಲ್ಲದಿದ್ದರೆ ಪರಿಣಾಮ ವ್ಯತಿರಿಕ್ತವಾದೀತು!