Tuesday, 17th September 2024

ಫ್ರಾಂಕ್ ಫರ್ಟ್ ಮೇಳದಲ್ಲಿ ತಮಿಳು ಪುಸ್ತಕಗಳ ಮೇಲುಗೈ

ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ವಿಶ್ವವಾಣಿ- ವಿಶ್ವೇಶ್ವರ ಭಟ್

ಜನವರಿಯಲ್ಲಿ ಆಯೋಜಿಸಿದ್ದ ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳವೇ ವಿದೇಶಿ ಪ್ರಕಾಶಕರು ತಮಿಳು ಪ್ರಕಾಶಕರ ಹಿಂದೆ ಬೀಳಲು ಕಾರಣ ತಮಿಳು ಪ್ರಕಾಶಕರು ತಾವು ಪ್ರಕಟಿಸಿರುವ ಕೃತಿಗಳ ಅನುವಾದದ ಹಕ್ಕನ್ನು ವಿದೇಶಿ ಪ್ರಕಾಶಕರಿಗೆ ಮಾರಾಟ ಮಾಡುವ ಒಡಂಬಡಿಕೆಗೆ ಸಹಿ.

ಫ್ರಾಂಕ್ ಫರ್ಟ್ (ಜರ್ಮನಿ): ಭಾರತೀಯ ಭಾಷೆಗಳ ಪ್ರಕಾಶಕರು ಮತ್ತು ಸಾಹಿತಿಗಳ ಪೈಕಿ ತಮಿಳು ಪ್ರಕಾಶಕರು ಈ ವರ್ಷದ ೭೫ನೇ ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಮೇಲುಗೈ ಸಾಧಿಸಿದ್ದಾರೆ. ತಮಿಳು ಲೇಖಕರ ಪುಸ್ತಕಗಳು ಅತಿ ಹೆಚ್ಚು ವಿದೇಶಿ ಪ್ರಕಾಶಕರ ಗಮನ ಸೆಳೆದಿದ್ದು, ಆಯಾ ದೇಶಗಳ ಭಾಷೆ ಗಳಿಗೆ ಅನುವಾದವಾಗುವ ಹಕ್ಕನ್ನು ಮಾರಾಟ ಮಾಡಿವೆ. ಈ ಮೂಲಕ ತಮಿಳು ಪುಸ್ತಕೋದ್ಯಮ ಇತರ ಭಾರತೀಯ ಭಾಷಾ ಲೇಖಕರಿಗೆ ಮತ್ತು ಪ್ರಕಾಶಕ ರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಂತಾಗಿದೆ.

ಕಳೆದ ಐದು ವರ್ಷಗಳಲ್ಲಿ ಬಿಡುಗಡೆಯಾದ ತಮಿಳಿನ ಜನಪ್ರಿಯ ಕೃತಿಗಳು ಅರ್ಮೇನಿಯನ್, ಅಜರಬೈಜಾನಿ, ಸ್ಲೊವಾಕ್, ಐಸ್ಲ್ಯಾಂಡಿಕ್, ಇಟಾಲಿ ಯನ್, ಅಮ್ಹಾರಿಕ್ (ಇಥಿಯೋಪಿಯಾ), ಪೋಲಿಷ್, ವೆಲ್ಷ, ಫಿಲಿಪಿನೋ, ಹಂಗೇರಿಯನ್, ನಾರ್ವೇಜಿಯನ್, ಅರಾಬಿಕ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಿಗೆ ಅನುವಾದವಾಗಲಿದ್ದು, ತಮಿಳು ಪ್ರಕಾಶಕರು ತಾವು ಪ್ರಕಟಿಸಿರುವ ಈ ಕೃತಿಗಳ ಅನುವಾದದ ಹಕ್ಕನ್ನು ವಿದೇಶಿ ಪ್ರಕಾಶಕರಿಗೆ ಮಾರಾಟ ಮಾಡುವ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

ಪೆರುಮಾಳ್ ಮುರುಗನ್ ಅವರ ಕೃತಿಗೆ ಅತಿ ಹೆಚ್ಚು ಬೇಡಿಕೆ ಬಂದಿದ್ದು, ಅದು ಅಂತಾರಾಷ್ಟ್ರೀಯ ಪ್ರಕಾಶಕರ ಗಮನ ಸೆಳೆಯಲು ಯಶಸ್ವಿಯಾಗಿದೆ. ಅವರ ಕೃತಿಗಳು ಯೂರೋಪಿನ ಹತ್ತಕ್ಕೂ ಹೆಚ್ಚು ದೇಶಗಳ ಭಾಷೆಗಳಿಗೆ ಅನುವಾದವಾಗಲಿದೆ. ಮುರುಗನ್ ಅವರ ‘ಪೂಕುಳಿ’ ಇಥಿಯೋಪಿಯಾದ ಅಮ್ಹಾರಿಕ್ ಮತ್ತು ಇಟಾಲಿಯನ್ ಭಾಷೆಗೆ ಅನುವಾದವಾಗಿವೆ. ಅವರ ‘ಪೂಣಾಚಿ’ ಕೃತಿ ಫ್ರೆಂಚ್ ಮತ್ತು ಜೇಗ್ರೆಬ್ ಭಾಷೆಗಳಿಗೂ ಅನುವಾದಗೊಂಡಿವೆ. ಸುಂದರ ರಾಮಸ್ವಾಮಿ ಅವರ ‘ಒರು ಪುಳಿಯಮರಥಿನ್ ಕಥೈ’ (ಒಂದು ಹುಣಸೇ ಮರದ ಕಥೆ) ಸ್ಲೊವಾಕ್ ಭಾಷೆಗೆ ಅನುವಾದಕ್ಕೆ ಹಕ್ಕು ಮಾರಾಟ ವಾಗಿದೆ.

ತಮಿಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದವರ ಕೃತಿಗಳು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ತಮಿಳು ಸಾಹಿತಿಗಳ ಆಯ್ದ ಕೃತಿಗಳು ಹಾಗೂ ಪೆರಿಯಾರ್, ಅಣ್ಣಾದೊರೈ, ಕರುಣಾನಿಧಿ ಅವರ ಪುಸ್ತಕಗಳು ಯೂರೋಪಿನ ಭಾಷೆಗಳಿಗೆ ಅನುವಾದವಾಗಲಿವೆ. ಈ ಅನುವಾದಗಳಿಗೆ
ತಮಿಳುನಾಡು ಸರಕಾರವೇ ಅನುದಾನ ಮತ್ತು ಪ್ರೋತ್ಸಾಹ ಧನವನ್ನು ನೀಡಲಿದೆ.

ತಮಿಳುನಾಡಿನ ಸಾರ್ವಜನಿಕ ಗ್ರಂಥಾಲಯಗಳ ನಿರ್ದೇಶಕ ಎಳಂಬಘವಾತ್ ನೇತೃತ್ವದಲ್ಲಿ ತಮಿಳುನಾಡಿನ ಪುಸ್ತಕ ಪ್ರಕಾಶಕರು ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಭಾಗವಹಿಸಿದ್ದು, ತಮಿಳು ಪುಸ್ತಕ ಮಳಿಗೆಗಳಲ್ಲಿ ವಿದೇಶಿ ಪ್ರಕಾಶಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ತಮಿಳು ಪುಸ್ತಕಗಳ ಅನುವಾದದ ಹಕ್ಕನ್ನು ಪಡೆಯಲು ಪೈಪೋಟಿ ನಡೆಸಿದ್ದು ಕಂಡು ಬಂದಿತು. ‘ತಮಿಳು ಪುಸ್ತಕಗಳನ್ನು ಅನುವಾದಿಸಲು ಯೂರೋಪಿನ ಹಲವು ದೇಶ ಗಳು ಮುಂದೆ ಬರುತ್ತಿರುವುದು ಸಂತೋಷದ ಸಂಗತಿ.

ಇದು ತಮಿಳು ಲೇಖಕರು ಮತ್ತು ಪ್ರಕಾಶಕರ ಮನೋಸ್ಥೈರ್ಯವನ್ನು ಹೆಚ್ಚಿಸಿದೆ. ನಮ್ಮಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ಮುಂಬರುವ
ದಿನಗಳಲ್ಲಿ ಯೂರೋಪಿನ ಬಹುತೇಕ ಭಾಷೆಗಳಲ್ಲಿ ತಮಿಳು ಕೃತಿಗಳು ಅನುವಾದವಾಗಲಿವೆ’ ಎಂದು ಎಳಂಬಘವಾತ್ ಹೇಳಿದರು.

ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ವಿದೇಶಿ ಪ್ರಕಾಶಕರು ತಮಿಳು ಪ್ರಕಾಶಕರ ಹಿಂದೆ ಬೀಳಲು, ಈ ವರ್ಷದ ಜನವರಿಯಲ್ಲಿ ತಮಿಳುನಾಡು ಸರಕಾರ
ಆಯೋಜಿಸಿದ್ದ ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳವೇ ಕಾರಣವಾಗಿದೆ. ಚೆನ್ನೈ ಪುಸ್ತಕ ಮೇಳಕ್ಕೆ ತಮಿಳುನಾಡು ಸರಕಾರ ಯೂರೋಪಿನ ಬಹು ತೇಕ ಎಲ್ಲ ಭಾಷೆಗಳ ಆಯ್ದ ಪ್ರಮುಖ ಪ್ರಕಾಶಕರನ್ನು ಆಹ್ವಾನಿಸಿ ತಮಿಳ್ ಸಾಹಿತ್ಯದ ಶ್ರೀಮಂತಿಕೆ, ವೈವಿಧ್ಯಗಳನ್ನು ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಟ್ಟಿತ್ತು. ಅದರ ಫಲವಾಗಿ ಯುರೋಪಿನ ಪ್ರಕಾಶಕರು ತಮಿಳು ಕೃತಿಗಳ ಅನುವಾದಕ್ಕೆ ಮುಂದೆ ಬರುವಂತಾಗಿದೆ.

ತಮಿಳುನಾಡು ಸರಕಾರ ತನ್ನ ಭಾಷೆಯ ಕೃತಿಗಳನ್ನು ವಿದೇಶಿ ಭಾಷೆಗೆ ಅನುವಾದಿಸಲು, ವಿದೇಶಿ ಅನುವಾದಕರನ್ನು ಆಹ್ವಾನಿಸುತ್ತಿದೆ. ಅದಕ್ಕಾಗಿ ‘ಒಂದು ಆಲೋಚನೆ, ಒಂದು ವಿಶ್ವ: ಅನುವಾದದ ಮೂಲಕ ಒಂದಾಗೋಣ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದೇಶಿ ಭಾಷೆಗಳಿಗೆ ತಮಿಳು ಕೃತಿಗಳನ್ನು ಅನುವಾದಿಸುವವರಿಗೆ ತಮಿಳುನಾಡು ಸರಕಾರ ಫೆಲೋಶಿಪ್ ನೀಡಿ ಉತ್ತೇಜಿಸುತ್ತಿದೆ ಎಂದು ಎಳಂಬಘವಾತ್ ತಿಳಿಸಿದರು. ಬೇರೆ ಯಾವ ಭಾರತೀಯ ಭಾಷೆಗಳ ಪುಸ್ತಕ ಮಳಿಗೆಗಳಲ್ಲಿ ಕಾಣಿಸದ ಲವಲವಿಕೆ, ಉತ್ಸಾಹ, ಚಟುವಟಿಕೆ ತಮಿಳುನಾಡಿನ ಪ್ರಕಾಶಕರ ಮಳಿಗೆಗಳಲ್ಲಿ ಕಂಡು ಬಂದಿತು.

ತಮಿಳುನಾಡಿನ ಹಲವು ಪ್ರತಿಷ್ಠಿತ ಪ್ರಕಾಶಕರು ಕಳೆದ ಹದಿನೈದು ವರ್ಷಗಳಿಂದ ಸತತವಾಗಿ ಫ್ರಾಂಕ್ ಫರ್ಟ್ ಪುಸ್ತಕ ಮೇಳಕ್ಕೆ ಆಗಮಿಸುತ್ತಿದ್ದಾರೆ. ಒಂದು ಸಲ ಇಂಥ ಅಂತಾರಾಷ್ಟ್ರೀಯ ಮೇಳದಲ್ಲಿ ಭಾಗವಹಿಸಿದರೆ ಪ್ರಯೋಜನ ಇಲ್ಲ. ಮೊದಲ ಸಲ ಬಂದಾಗ ಹೆಚ್ಚು ಅನೂಕೂಲವಾಗುವುದಿಲ್ಲ. ಇಷ್ಟೆಲ್ಲ ಹಣ ಖರ್ಚು ಮಾಡಿಕೊಂಡು ಬಂದಿದ್ದು ವ್ಯರ್ಥ ಎಂಬ ಭಾವನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತದೆ. ಆದರೆ ವರ್ಷ ವರ್ಷವೂ ಬರುವುದರಿಂದ ಪುಸ್ತಕೋದ್ಯಮದ ಒಳಸುಳಿಗಳು, ವಹಿವಾಟು, ಗಾತ್ರ, ಅಂತಾರಾಷ್ಟ್ರೀಯ ಪ್ರಕಾಶಕರ ಧೋರಣೆ, ವ್ಯವಹಾರ ರೀತಿ-ನೀತಿಗಳು ಅರ್ಥ ವಾಗುತ್ತಾ ಹೋಗುತ್ತವೆ. ಲೇಖಕರು ಮತ್ತು ಪ್ರಕಾಶಕರ ಪರಿಚಯವಾಗುತ್ತದೆ.

‘ನಾವು ನಮ್ಮದೇ ಪ್ರಪಂಚದಲ್ಲಿ ಮಾತ್ರ ಇರಲು ಸಾಧ್ಯವಿಲ್ಲ’ ಎಂದು ಕಳೆದ ಹದಿನೈದು ವರ್ಷಗಳಿಂದ ಫ್ರಾಂಕ್ ಫರ್ಟ್ ಪುಸ್ತಕ ಮೇಳಕ್ಕೆ ಆಗಮಿಸು ತ್ತಿರುವ ‘ಕಳಚುವಾಡು’ ತಮಿಳು ಪ್ರಕಾಶಕ ಮತ್ತು ಅದೇ ಹೆಸರಿನ ಮ್ಯಾಗಜಿನ್ ಸಂಪಾದಕ ಕಣ್ಣನ್ ಸುಂದರಂ ಅಭಿಪ್ರಾಯಪಟ್ಟರು. ‘ಮುಂದಿನ ಮೂರು ವರ್ಷಗಳಲ್ಲಿ ತಮಿಳಿನ ಕನಿಷ್ಠ ನೂರು ಪುಸ್ತಕಗಳು ಯೂರೋಪಿನ ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡು ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ವಿಶೇಷ ಮಳಿಗೆಯನ್ನು ತೆರೆಯುವಂತಾಗಲಿದೆ. ಇದು ತಮಿಳು ಲೇಖಕರಿಗೆ ಅತ್ಯಂತ ಸಂಭ್ರಮ ತರುವ ವಿಷಯ. ಅಷ್ಟೇ ಅಲ್ಲ, ತಮಿಳು ಸಾಹಿತ್ಯಕ್ಕೆ ಹಿರಿಮೆ ಮತ್ತು ಪ್ರಕಾಶಕರ ನೈತಿಕ ಬಲವನ್ನು ಹೆಚ್ಚಿಸುವ ಸಂಗತಿಯಾಗಲಿದೆ. ಇದರ ಹಿಂದೆ ಐದಾರು ವರ್ಷಗಳ ಪರಿಶ್ರಮದ ಫಲವಿದೆ. ಶ್ರೀಮಂತ ಸಾಹಿತ್ಯವನ್ನು ವಿದೇಶಿಯರಿಗೆ ತೆರೆದಿಡಲು ಇದು ಸೂಕ್ತವಾದ ಸಮಯ. ಐಟಿ-ಬಿಟಿ ಮಾತ್ರ ಅಲ್ಲ, ಸಾಹಿತ್ಯದಲ್ಲೂ ಭಾರತೀಯ ಭಾಷೆಯ ಲೇಖಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಲು ಸಮರ್ಥರು’ ಎಂದು ಕಣ್ಣನ್ ಸುಂದರಂ ಹೇಳಿದರು.

ಪುಸ್ತಕ ಪ್ರೇಮಿಗಳ ಗೆದ್ದ ಬುಕ್ ಟೋಕ್
ವಿಶ್ವದೆಡೆ ಜನಪ್ರಿಯವಾಗಿರುವ, ಆದರೆ ಭಾರತದಲ್ಲಿ ನಿಷೇಧ ಕ್ಕೊಳಗಾಗಿರುವ ‘ಟಿಕ್ ಟೋಕ್’ ಆಪ್ ಪುಸ್ತಕಪ್ರಿಯರನ್ನು ಸೆಳೆಯಲು ‘ಬುಕ್ ಟೋಕ್’ನ್ನು ಆರಂಭಿಸಿದ್ದು, ಅದು ಈಗಾಗಲೇ ಹೆಚ್ಚಿನವರನ್ನು ಆಕರ್ಷಿಸುತ್ತಿದೆ. ಇದು ಮೂಲತಃ ಟಿಕ್ ಟೋಕ್‌ನಲ್ಲಿ ಪುಸ್ತಕ ಪ್ರೇಮಿಗಳ ಸಮುದಾಯ. ಪುಸ್ತಕ ಪ್ರಿಯರು ತಾವು ಓದಿದ ಪುಸ್ತಕಗಳ ಬಗ್ಗೆ ಐದು-ಹತ್ತು ನಿಮಿಷಗಳ ಕಾಲ ಮಾತಾಡಿ, ವಿಮರ್ಶೆ ಮಾಡಿ ಅಥವಾ ಕೃತಿ ಪರಿಚಯ ಮಾಡಿ ಅಪ್ಲೋಡ್ ಮಾಡುತ್ತಾರೆ.

ಪುಸ್ತಕಗಳ ಕುರಿತು ಲೇಖಕರನ್ನು ಕಾಲೆಯುತ್ತಾರೆ ಅಥವಾ ವಿಡಂಬನೆ ಮಾಡುತ್ತಾರೆ. ಶಿಷ್ಟ ಮಾರ್ಗ ಬಿಟ್ಟು, ತೀರಾ ತಮಾಷೆ ಯಾಗಿಯೂ ವಿಮರ್ಶೆ ಮಾಡಿ ವಿಡಿಯೋವನ್ನು ಆ ಆಪ್‌ನಲ್ಲಿ ಹರಿಬಿಡುತ್ತಾರೆ. ಇನ್ನು ಕೆಲವರು ಗಂಭೀರವಾಗಿಯೂ ವಿಮರ್ಶೆ ಮಾಡುತ್ತಾರೆ. ಅನೇಕ ಲೇಖಕರು ಬುಕ್ ಟೋಕ್
ನಲ್ಲಿ ತಮ್ಮ ಪುಸ್ತಕವನ್ನು ಪ್ರಮೋಷನ್ ಮಾಡುತ್ತಾರೆ. ಬುಕ್ ಟೋಕ್ ಪುಸ್ತಕ ಮಾರಾಟದ ಮೇಲೆ ಗಣನೀಯ ಪ್ರಭಾವವನ್ನು ಬೀರಿದೆ. ಈ ಆಪ್‌ನಲ್ಲಿ ಪುಸ್ತಕಗಳ ಬಗ್ಗೆ ಕೇಳಿ ಖರೀದಿಸಲಾರಂಭಿಸಿದ್ದಾರೆ.

ಕೆಲವು ಪುಸ್ತಕಗಳ ವಿಮರ್ಶೆ ವೈರಲ್ ಆಗುತ್ತವೆ. ಕೆಲವು ವಿಡಿಯೋ ಕ್ಲಿಪ್‌ಗಳನ್ನು ಲಕ್ಷಾಂತರ ಜನ ನೋಡಿದ್ದಿದೆ. ಟಿಕ್ ಟೋಕ್ ಅಂದ್ರೆ ಕೇವಲ ಡ್ಯಾ, ವಿಡಂಬನೆ, ಹಾಸ್ಯಕ್ಕೆ ಮಾತ್ರ ಸೀಮಿತವಾದ ಆಪ್ ಅಲ್ಲ, ಅದನ್ನು ಪುಸ್ತಕ ವಿಮರ್ಶೆಯಂಥ ಗಂಭೀರ ಪ್ರಕಾರಕ್ಕೂ ಬಳಸಿಕೊಳ್ಳಬಹುದು ಎಂಬ
ಉದ್ದೇಶದಿಂದ ಆರಂಭಿಸಲಾಯಿತು. ಈಗ ಇದು ಹಿಂದಿನ ಬುಕ್ ಕ್ಲಬ್ ಮಾದರಿಯಲ್ಲಿ ಅಭಿವೃದ್ಧಿಯಾಗಿ ಜನಪ್ರಿಯವಾಗುತ್ತಿದೆ. ಕೆಲವರು ತಾವು ಓದಿದ ಪುಸ್ತಕಗಳ ಬಗ್ಗೆ ವಾರವಾರವೂ ಮಾತಾಡಿದರೆ, ಇನ್ನು ಕೆಲವರು ಲೇಖಕರ ಜತೆ ಹತ್ತು ನಿಮಿಷಗಳ ಲಘು ಸಂದರ್ಶನ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಇನ್ನು ಕೆಲವರು ತಮ್ಮದೇ ಮಾನದಂಡಗಳ ಮೂಲಕ ವಾರವಾರ ಟಾಪ್ ಟೆನ್ ಪುಸ್ತಕಗಳ ಪಟ್ಟಿ ನೀಡುತ್ತಿದ್ದಾರೆ. ಬುಕ್ ಟೋಕ್‌ನಿಂದಾಗಿ ಪುಸ್ತಕ ಮಾರಾಟ ಹೆಚ್ಚಿದೆ. ಇದು ಪುಸ್ತಕಪ್ರೇಮಿಗಳ ಮೇಲೆ ಪ್ರಭಾವ ಬೀರುವಷ್ಟು ಪರಿಣಾಮಕಾರಿಯಾಗಿದೆ. ಹಲವು ಪುಸ್ತಕಗಳು ಬುಕ್ ಟೋಕ್ ನಿಂದಾಗಿಯೇ ಪ್ರತಿಷ್ಠಿತ ಪತ್ರಿಕೆಗಳ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಗಿದೆ. ಗಂಭೀರ ಓದುಗರು, ಲೇಖಕರು ಕೂಡ ಬುಕ್ ಟೋಕ್‌ನತ್ತ ಮುಖ ಮಾಡುವಂತಾಗಿದೆ. ಈ ಸಲದ ಪುಸ್ತಕಮೇಳದಲ್ಲಿ ‘ಬುಕ್ ಟೋಕ್’ ಮಳಿಗೆ ಹಲವರ ಗಮನ ಸೆಳೆಯಲು ಯಶಸ್ವಿಯಾಯಿತು. ಬುಕ್ ಟೋಕ್‌ನಿಂದಾಗಿ ‘ಟಿಕ್ ಟೋಕ್’ ತನ್ನ ವರ್ಚಸ್ಸನ್ನು ಬದಲಿಸಿಕೊಳ್ಳುವಂತಾಗಿದೆ.

ಪುಸ್ತಕ ಮೇಳದಲ್ಲಿ ಗೌರವ ಅತಿಥಿ

ಫ್ರಾಂಕ್ ಫರ್ಟ್ ಪುಸ್ತಕ ಮೇಳದಲ್ಲಿ ಪ್ರತಿ ವರ್ಷ ಒಂದು ದೇಶವನ್ನು ‘ಗೌರವ ಅತಿಥಿ’ (Guest of Honour) ಎಂದು ಪರಿಗಣಿಸಿ, ಆ ದೇಶದ ಪುಸ್ತಕಗಳಿಗೆ ವಿಶೇಷ ಮಾನ್ಯತೆ ಮತ್ತು ಗೌರವವನ್ನು ನೀಡುವ ಸಂಪ್ರದಾಯವನ್ನು ೧೯೭೬ರಿಂದ ಆರಂಭಿಸಲಾಗಿದೆ. ಗೌರವ ಅತಿಥಿಯಾದ ದೇಶದ ಪುಸ್ತಕ ಮಳಿಗೆ ಉಳಿದೆಲ್ಲ ಮಳಿಗೆಗಳಿಗಿಂತ ದೊಡ್ಡದೂ, ವಿಶಿಷ್ಟವೂ, ಆಕರ್ಷಕವೂ ಆಗಿರುತ್ತದೆ. ಅಷ್ಟೇ ಅಲ್ಲ, ಆ ದೇಶದ ಸಾಹಿತ್ಯ, ಪುಸ್ತಕೋದ್ಯಮದ ಕುರಿತಂತೆ ವಿಶೇಷ ಚರ್ಚೆ ಮತ್ತು ಗೋಷ್ಠಿಗಳನ್ನು ಆಯೋಜಿಸಲಾಗಿರುತ್ತದೆ. ಗೌರವ ಅತಿಥಿ ಸ್ಥಾನಕ್ಕೆ ಭಾಜನವಾಗಿರುವ ದೇಶದ ಮಹತ್ವದ ಕೃತಿಗಳ ಪ್ರದರ್ಶನ ಇನ್ನೊಂದು ಆಕರ್ಷಣೆ. ಪುಸ್ತಕ ಮೇಳದಲ್ಲಿ ಆ ದೇಶದ ಸಾಹಿತಿಗಳ ಪಾಲ್ಗೊಳ್ಳುವಿಕೆಯೂ ಹೆಚ್ಚಿರುತ್ತದೆ. ಗೌರವ ಅತಿಥಿಯಾಗಿ ಯಾವುದೇ ದೇಶದ
ಉಪಸ್ಥಿತಿಯು ಫ್ರಾಂಕ್ ಫರ್ಟ್ ಪುಸ್ತಕ ಮೇಳಕ್ಕೆ ಪ್ರತಿ ವರ್ಷ ಹೊಸ ಪಾತ್ರವನ್ನುನೀಡುತ್ತದೆ.

ಗೌರವ ಅತಿಥಿ ದೇಶಕ್ಕೆ ತನ್ನ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲು ಇದೊಂದು ಅಪೂರ್ವ ಅವಕಾಶ. ಕಾರಣ ಆ ದೇಶದ ಮಳಿಗೆಗೆ ಎಲ್ಲರೂ ಭೇಟಿ ನೀಡುತ್ತಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿನ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಆರಂಭದಲ್ಲಿ ಗೌರವ ಅತಿಥಿಯಾಗಿ ಎರಡು ವರ್ಷಕ್ಕೊಮ್ಮೆ ಒಂದು ದೇಶವನ್ನು ಆರಿಸಲಾಗುತ್ತಿತ್ತು. ಈಗ ಪ್ರತಿ ವರ್ಷವೂ ಆಯ್ಕೆ ಮಾಡಲಾಗುತ್ತಿದೆ. ಯಾವುದೇ ದೇಶವು ಪುಸ್ತಕ ಮೇಳದಲ್ಲಿ ಗೌರವ ಅತಿಥಿಯಾಗಲು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಸಾಮಾನ್ಯವಾಗಿ ಆಯಾ ದೇಶದ ಪ್ರಕಾಶಕರ ಸಂಘದಿಂದ ಕಳಿಸಿಕೊಡಬೇಕು.

ಫ್ರಾಂಕ್ ಫರ್ಟ್ ಪುಸ್ತಕ ಮೇಳದ ಸಂಘಟಕರೂ ಯಾವುದಾದರೂ ದೇಶವನ್ನು ಸಂಪರ್ಕಿಸಬಹುದು. ಅಂತಿಮವಾಗಿ, ಜರ್ಮನ್ ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರ ಸಂಘದ ಮೇಲ್ವಿಚಾರಣಾ ಮಂಡಳಿ ಸಮಾಲೋಚಿಸಿ ಗೌರವ ಅತಿಥಿಯನ್ನು ಆಯ್ಕೆ ಮಾಡುತ್ತದೆ. ಫ್ರಾಂಕ್ ಫರ್ಟ್ ಪುಸ್ತಕ ಮೇಳ
ಮತ್ತು ಗೆಸ್ಟ್ ಆಫ್ ಆನರ್ ನಡುವಿನ ಒಪ್ಪಂದ ದೇಶದ ಸಂಸ್ಕೃತಿ ಸಚಿವಾಲಯ ಅಥವಾ ಪ್ರಕಾಶಕರ ಸಂಘ-ಸಹಯೋಗದೊಂದಿಗೂ ಏರ್ಪಡಬಹುದು. ಸಾಮಾನ್ಯವಾಗಿ ಗೌರವಾನ್ವಿತ ಅತಿಥಿ ಆಯ್ಕೆ ಒಪ್ಪಂದ ಮೂರು ವರ್ಷ ಮೊದಲೇ ಆಗಿರುತ್ತದೆ.

Leave a Reply

Your email address will not be published. Required fields are marked *