Tuesday, 17th September 2024

Teachers Day 2024: ಅದ್ಭುತ ವಿದ್ಯಾರ್ಥಿ, ಎಲ್ಲರ ಪ್ರೀತಿಯ ಶಿಕ್ಷಕರಾಗಿದ್ದರು ಡಾ. ಸರ್ವಪಲ್ಲಿ ರಾಧಾಕೃಷ್ಣನ್

Teacher's Day 2024

ದೇವರನ್ನು ಕಾಣದೇ ಇದ್ದರೂ ಗುರುಗಳಲ್ಲಿ (teachers) ದೇವರನ್ನು ಕಾಣುತ್ತೇವೆ. ಭಕ್ತಿ, ವಿಶ್ವಾಸದಿಂದ ಅವರಿಗೆ ಗೌರವವನ್ನು ಕೊಡುತ್ತೇವೆ. ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ (Teachers Day 2024) ಮೂಲಕ ನಮ್ಮ ಜೀವನಕ್ಕೆ ಮಾರ್ಗದರ್ಶನ ತೋರಿದ ಎಲ್ಲ ಗುರುಗಳನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಅವರು ಕಲಿಸಿರುವ ಜೀವನ ಪಾಠವನ್ನು ಸ್ಮರಿಸಿಕೊಳ್ಳುತ್ತೇವೆ.

ವಿದ್ವಾಂಸರು, ತತ್ವಜ್ಞಾನಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ (Dr Sarvepalli Radhakrishnan) ಅವರ ಅಪಾರ ಕೊಡುಗೆಗಳು ಮತ್ತು ಸಾಧನೆಗಳನ್ನು ಗುರುತಿಸಿ ಅವರ ಜನ್ಮ ದಿನವಾದ ಸೆಪ್ಟೆಂಬರ್ 5ರಂದು ಪ್ರತಿ ವರ್ಷ ದೇಶಾದ್ಯಂತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

1888ರಲ್ಲಿ ಜನಿಸಿದ ಅವರು 1962ರಿಂದ 1967ರ ವರೆಗೆ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

ಬಡ ತೆಲುಗು ಬ್ರಾಹ್ಮಣ ಕುಟುಂಬದಿಂದ ಬಂದ ಡಾ. ರಾಧಾಕೃಷ್ಣನ್ ಅವರು ತಮ್ಮ ಸಂಪೂರ್ಣ ಶಿಕ್ಷಣವನ್ನು ವಿದ್ಯಾರ್ಥಿ ವೇತನದ ಮೂಲಕ ಪೂರ್ಣಗೊಳಿಸಿದರು. ತತ್ತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಅವರು 1917 ರಲ್ಲಿ ‘ದಿ ಫಿಲಾಸಫಿ ಆಫ್ ರವೀಂದ್ರನಾಥ ಟ್ಯಾಗೋರ್’ ಪುಸ್ತಕವನ್ನು ಪ್ರಕಟಿಸಿದರು.

Teacher's Day 2024

1931 ರಿಂದ 1936 ರವರೆಗೆ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಅವರು ಮದನ್ ಮೋಹನ್ ಮಾಳವೀಯ ಅವರ ಅನಂತರ 1939ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಉಪಕುಲಪತಿಯಾದರು.

ಜೀವನದುದ್ದಕ್ಕೂ ಡಾ. ರಾಧಾಕೃಷ್ಣನ್ ಅವರು ಅದ್ಭುತ ವಿದ್ಯಾರ್ಥಿ ಮತ್ತು ಪ್ರೀತಿಯ ಶಿಕ್ಷಕರಾಗಿದ್ದರು. 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದಾಗ ಅವರ ಜನ್ಮದಿನವನ್ನು ವಿಶೇಷ ದಿನವಾಗಿ ಆಚರಿಸಲು ಅವರ ವಿದ್ಯಾರ್ಥಿಗಳು ಅವರನ್ನು ಸಂಪರ್ಕಿಸಿದರು. ಸಮಾಜಕ್ಕೆ ಶಿಕ್ಷಕರು ನೀಡಿರುವ ಅಮೂಲ್ಯ ಕೊಡುಗೆಯನ್ನು ಗುರುತಿಸಲು ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನಾಗಿ ಆಚರಿಸಬೇಕು ಎಂದು ಡಾ. ರಾಧಾಕೃಷ್ಣನ್ ಅವರಿಗೆ ಮನವಿ ಮಾಡಿದರು.

Teacher's Day 2024

ರಾಷ್ಟ್ರಪತಿಯಾಗಿ, ಉಪರಾಷ್ಟ್ರಪತಿಯಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಡಾ. ರಾಧಾಕೃಷ್ಣನ್ ಅವರು ತಮ್ಮ ಹಲವಾರು ಸಾಧನೆಗಳ ಹೊರತಾಗಿಯೂ ತಮ್ಮನ್ನು ಯಾವಾಗಲೂ ಶಿಕ್ಷಕರೆಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದರು.

ಭಾರತದ ಮೊದಲ ಉಪರಾಷ್ಟ್ರಪತಿಯನ್ನು ಗೌರವಿಸಲು ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರ ನಿರ್ಣಾಯಕ ಪಾತ್ರವನ್ನು ಗುರುತಿಸಲು ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲು ನಿರ್ಣಯಿಸಲಾಯಿತು.

ಪಂಡಿತ್ ಜವಾಹರಲಾಲ್ ನೆಹರು ಅವರು ಡಾ. ರಾಧಾಕೃಷ್ಣನ್ ಅವರ ಬಗ್ಗೆ ಮಾತನಾಡುತ್ತಾ, ಅವರು ನಮ್ಮ ದೇಶಕ್ಕೆ ಹಲವಾರು ರೀತಿಯಲ್ಲಿ ಸೇವೆಗಳನ್ನು ಸಲ್ಲಿಸಿದ್ದಾರೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರು ಒಬ್ಬ ಮಹಾನ್ ಶಿಕ್ಷಕ. ಅವರಿಂದ ನಾವು ಹೆಚ್ಚು ಕಲಿತಿದ್ದೇವೆ ಮತ್ತು ಕಲಿಯುತ್ತೇವೆ. ಒಬ್ಬ ಶ್ರೇಷ್ಠ ದಾರ್ಶನಿಕನನ್ನು ಹೊಂದಿರುವುದು ಭಾರತದ ಸೌಭಾಗ್ಯವಾಗಿದೆ. ಒಬ್ಬ ಮಹಾನ್ ಶಿಕ್ಷಣ ತಜ್ಞ, ಮಹಾನ್ ಮಾನವತಾವಾದಿ ಅವರಾಗಿದ್ದರು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *