Tuesday, 10th December 2024

Vishweshwar Bhat Column: ಎರಡು ಭಾರತಗಳ ಮತದಾರರು

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್‌

ಭಾರತದ ಮತದಾರನ ಮನಸ್ಸನ್ನು ಅರಿಯುವುದು ಸುಲಭವಲ್ಲ. ಮತ ಎಣಿಕೆ ಆರಂಭವಾಗುವ ತನಕ ಮತದಾರನ ಒಲವು ಯಾವ ಕಡೆಗಿದೆ ಎಂಬುದನ್ನು ಲೆಕ್ಕ ಹಾಕುವುದು ಸಾಧ್ಯವಿಲ್ಲ. ಇಡೀ ದೇಶಕ್ಕೆ ಅನ್ವಯವಾಗುವ ಏಕಸ್ವರೂಪದ ಜನಾದೇಶ ಬಂದಿರುವ ನಿದರ್ಶನಗಳು ಕಮ್ಮಿ. ತುರ್ತುಪರಿಸ್ಥಿತಿಯ ನಂತರ 1977ರಲ್ಲಿ ಉತ್ತರ ಭಾರತದ ಮತದಾರ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದರೆ, ದಕ್ಶಿಣ ಭಾರತದ ಮತದಾರ ಆ ಪಕ್ಷವನ್ನು ಬೆಂಬಲಿಸಿದ್ದನ್ನು ಮರೆಯುವಂತಿಲ್ಲ. ಅಂದರೆ ಉತ್ತರ ಭಾರತ-ದಕ್ಷಿಣ ಭಾರತದ ಮತದಾರರ ಮಧ್ಯೆ ವ್ಯತಿರಿಕ್ತ ತೀರ್ಪು ವ್ಯಕ್ತವಾಗಿತ್ತು.

ಆ ಚುನಾವಣೆಯಲ್ಲಿ ಕಾಂಗ್ರೆಸ್ 154 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಆ ಪೈಕಿ ಕೇವಲ ಇಬ್ಬರು ಹಿಂದಿ ಬೆಲ್ಟ್ ಅಥವಾ ಉತ್ತರ ಭಾರತದಿಂದ ಆಯ್ಕೆಯಾಗಿದ್ದರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಿಂದ 92 ಸದಸ್ಯರು ಆಯ್ಕೆಯಾಗಿದ್ದರು. ಉತ್ತರ ಭಾರತ ಕಾಂಗ್ರೆಸ್ಸನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರೆ, ದಕ್ಷಿಣ ಭಾರತ ಇಂದಿರಾ ಗಾಂಧಿಯವರನ್ನು ಬೆಂಬಲಿಸಿತ್ತು.

ನರ್ಮದಾ ನದಿಯ ಉತ್ತರದ ದಿಕ್ಕಿಗೆ ಸಂಪೂರ್ಣ ಜನತಾ ಅಲೆ, ಆದರೆ ದಕ್ಷಿಣದಲ್ಲಿ ಮಾತ್ರ ಆ ಅಲೆಯೇ ಕಣ್ಮರೆ.
ದಕ್ಷಿಣ ಭಾರತದಲ್ಲಿ ತುರ್ತುಪರಿಸ್ಥಿತಿಯ ಬಿಸಿ ಅಷ್ಟೇನೂ ತಟ್ಟದಿರುವುದೇ ಇದಕ್ಕೆ ಕಾರಣ ಎಂದು ಕೆಲವರು ಹೇಳುವುದುಂಟು. ಆದರೆ ಇದು ಸಂಪೂರ್ಣ ನಿಜವಲ್ಲ. ತುರ್ತುಪರಿಸ್ಥಿತಿಯ ಕೇಂದ್ರಸ್ಥಾನ ದಿಲ್ಲಿಯಾಗಿತ್ತು
ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತುರ್ತುಪರಿಸ್ಥಿತಿಯ ಅತಿರೇಕಗಳು ದಕ್ಷಿಣ ಭಾರತದಲ್ಲೂ ಅನುಭವಕ್ಕೆ ಬಂದಿತ್ತು. ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ರಾಜಕೀಯ ನಾಯಕರು, ಇಂದಿರಾ ವಿರೋಧಿಗಳು ಮತ್ತು
ಪತ್ರಕರ್ತರನ್ನು ಸಾಕಷ್ಟು ಸಂಖ್ಯೆಯಲ್ಲಿ ಜೈಲಿಗೆ ಹಾಕಲಾಗಿತ್ತು.

ಕೇರಳದಲ್ಲಿ ರಾಜನ್ ಕೊಲೆ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿತು. ತುರ್ತುಪರಿಸ್ಥಿತಿ ಮತ್ತು ಇಂದಿರಾ ಗಾಂಧಿ ಯವರನ್ನು ವಿರೋಧಿಸಿದವರೆಲ್ಲ ಸೆರೆವಾಸ ಅನುಭವಿಸಿದ್ದರು. ಬಲವಂತವಾಗಿ ಕುಟುಂಬ ಯೋಜನೆಯ ಕಾರ್ಯ ಕ್ರಮದ ಅಡಿಯಲ್ಲಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿದ ಪ್ರಕರಣಗಳು ದಕ್ಷಿಣ ಭಾರತದಲ್ಲಿ ಕಮ್ಮಿಯಿತ್ತು. ಅದೇ ಉತ್ತರ ಭಾರತದಲ್ಲಿ ಇದಕ್ಕೆ ಭಾರಿ ವಿರೋಧ ವ್ಯಕ್ತವಾಯಿತು. ಆದರೆ ಇದೊಂದೇ ಮುಖ್ಯ ಕಾರಣವಾಗಲು ಸಾಧ್ಯವಿಲ್ಲ. ತುರ್ತುಪರಿಸ್ಥಿತಿಯ ಬಿಸಿ ಇಡೀ ದೇಶಕ್ಕೆ ತಟ್ಟಿದರೂ, ದಕ್ಷಿಣ ಭಾರತದ ಮತದಾರರೇಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಇದಕ್ಕೆ ಅಂದು ಅಧಿಕಾರ ದಲ್ಲಿದ್ದ ಕರ್ನಾಟಕ, ಆಂಧ್ರ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ ಆಡಳಿತ ವೈಖರಿ ಮತ್ತು ಕಾರ್ಯಕ್ರಮಗಳು ಕಾರಣವಾ ಎಂಬುದು ಸಹ ಚರ್ಚಾಸ್ಪದ.

ಕರ್ನಾಟಕದಲ್ಲಿ 28 ಕ್ಷೇತ್ರಗಳ ಪೈಕಿ 26ರಲ್ಲಿ ಕಾಂಗ್ರೆಸ್ ಭಾರಿ ವಿಜಯ ಸಾಧಿಸಿತ್ತು. ಬೆಂಗಳೂರು ದಕ್ಷಿಣದಲ್ಲಿ ಭಾರತೀಯ ಲೋಕದಳದ ಕೆ.ಎಸ್.ಹೆಗಡೆ ಮತ್ತು ಹಾಸನದಲ್ಲಿ ಅದೇ ಪಕ್ಷದಿಂದ ಎಸ್ .ನಂಜೇಶ ಗೌಡ ಆರಿಸಿ ಬಂದಿದ್ದರು. ಕಾಂಗ್ರೆಸ್ ಶೇ.56.8ರಷ್ಟು ಮತಗಳನ್ನು ಗಳಿಸಿತ್ತು. ಕೆನರಾ ಕ್ಷೇತ್ರದಲ್ಲಿ ರಾಮಕೃಷ್ಣ ಹೆಗಡೆಯವರಂಥ ನಾಯಕರ ವಿರುದ್ಧ ಅಷ್ಟಾಗಿ ಯಾರಿಗೂ ಗೊತ್ತಿಲ್ಲದ ಬಾಳು ಪುರ್ಸು ಕದಂ ಎಂಬ ಅಭ್ಯರ್ಥಿ ಗೆದ್ದು ಬಂದರು. ತುರ್ತುಪರಿಸ್ಥಿತಿ ಹೇರಿಕೆ ಇಂದಿರಾ ವರ್ಚಸ್ಸಿಗೆ ಕಳಂಕವನ್ನುಂಟು ಮಾಡಿದರೂ, ಅವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಾಗಿ ಇಂದಿರಾ ನಿಷ್ಠರು ನಂಬಿದ್ದರು.

ಚುನಾವಣಾ ಪ್ರಚಾರ ನಿಮಿತ್ತ ದಕ್ಷಿಣ ಭಾರತದಲ್ಲಿ ಇಂದಿರಾ ಎಲ್ಲಿ ಹೋದರೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. 340 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಇಂದಿರಾ ನಿರೀಕ್ಷಿಸಿದ್ದರು. ದಕ್ಷಿಣ ಭಾರತದಂತೆ ಉತ್ತರ ಭಾರತವೂ ತಮ್ಮ ಪರವಾಗಿ ಮತ ಹಾಕಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಉತ್ತರ ಭಾರತದ ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದರು. ದಕ್ಷಿಣ ಭಾರತದ ಮತದಾರರು ಇಂದಿರಾ ಕೈ ಹಿಡಿದಿದ್ದರು.

ಇದನ್ನೂ ಓದಿ: Vishweshwar Bhat Column: ಯಾವುದೂ ಹಠಾತ್‌ ಸಂಭವಿಸುವುದಿಲ್ಲ, ಮುನ್ಸೂಚನೆ ನೀಡಿಯೇ ಬರುತ್ತದೆ !