Sunday, 1st December 2024

‌Vishweshwar Bhat Column: ವಿಶ್ವದ ಅತಿದೊಡ್ಡ‌ ಮರುಭೂಮಿ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಜಗತ್ತಿನ ಅತಿದೊಡ್ಡ ಮರುಭೂಮಿ ಯಾವುದು ಎಂದು ಯಾರನ್ನೇ ಕೇಳಿದರೂ, ಅವರ ಪೈಕಿ ಅನೇಕರು ಥಟ್ಟನೆ ‘ಸಹಾರಾ’ ಎಂದು
ಉದ್ಗರಿಸುತ್ತಾರೆ. ಆದರೆ ಈ ಉತ್ತರ ಅರ್ಧ ಸರಿ, ಅರ್ಧ ತಪ್ಪು. ಅರ್ಧ ಸರಿ ಯಾಕೆಂದರೆ, ಸಹಾರಾ ಮರುಭೂಮಿ ಜಗತ್ತಿನ ಅತ್ಯಂತ ದೊಡ್ಡ ಬಿಸಿ
ಮರುಭೂಮಿ ಎಂಬುದೇನೋ ನಿಜ. ಆದರೆ ಈ ಪ್ರಶ್ನೆಗೆ ಸರಿಯಾದ ಉತ್ತರ ‘ಅಂಟಾರ್ಕ್ಟಿಕಾ’ ಅಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. ಇದಕ್ಕೆ ಮೂಲಕಾರಣ ಮರುಭೂಮಿ ಅಂದರೆ ಏನು ಎಂಬುದನ್ನು ತಪ್ಪಾಗಿ ತಿಳಿದು ಕೊಂಡಿರುವುದೇ ಆಗಿದೆ. ಹಾಗಾದರೆ ಮರುಭೂಮಿ ಎಂದರೇನು? ಅನೇಕರು ಮರುಭೂಮಿಯನ್ನು ಬಿಸಿಯಾಗಿರುವ ಅಥವಾ ಉಷ್ಣ ಪ್ರದೇಶ ಎಂದೂ, ಮರಳಿನಿಂದ ಕೂಡಿದ ಪ್ರದೇಶವೆಂದೂ ಭಾವಿಸಿದ್ದಾರೆ.

ಆದರೆ ವಿಜ್ಞಾನದಲ್ಲಿ ‘ಮರುಭೂಮಿ’ ಎಂಬ ಪದಕ್ಕೆ, ‘ವರ್ಷದಲ್ಲಿ 250 ಮಿ.ಮೀ.ಗಿಂತ ಕಡಿಮೆ ಮಳೆಯಾಗುವ ಸ್ಥಳ’ ಎಂಬ ವ್ಯಾಖ್ಯಾನವಿದೆ. ಅಂದರೆ, ಮರುಭೂಮಿಯು ಉಷ್ಣವಾಗಿರಬಹುದು ಅಥವಾ ತಂಪಾಗಿರಬಹುದು, ಆದರೆ ಅಲ್ಲಿ ಮಳೆ ಪ್ರಮಾಣ 250 ಮಿ.ಮೀ.ಗಿಂತ ಕಡಿಮೆ ಯಿರುತ್ತದೆ. ಯಾವ ಪ್ರದೇಶದಲ್ಲಿ 250 ಮಿ.ಮೀ. ಅಥವಾ ಅದಕ್ಕಿಂತ ಕಡಿಮೆ ಮಳೆಯಾಗುವುದೋ ಅದು ಮರುಭೂಮಿ ಎಂದು ಕರೆಯಿಸಿಕೊಳ್ಳು ತ್ತದೆ. ಅಂಟಾರ್ಕ್ಟಿಕಾ ಶಾಶ್ವತವಾಗಿ ಹಿಮದಿಂದ ಆವೃತವಾಗಿದ್ದು, ಪ್ರಪಂಚದ ಅತಿ ದೊಡ್ಡ ಮರುಭೂಮಿ ಯಾಗಿದೆ. ಯಾಕೆಂದರೆ ಅಲ್ಲಿ ಮಳೆಯೇ ಆಗುವುದಿಲ್ಲ. ಒಂದು ವೇಳೆ ಆದರೂ ಅದು 50 ಮಿ.ಮೀ. ಅನ್ನು ಮೀರುವುದಿಲ್ಲ.

ಅಂಟಾರ್ಕ್ಟಿಕಾ ಸುಮಾರು 14 ದಶಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ವ್ಯಾಪಿಸಿದೆ. ಇದು ಸುಮಾರು ಶೇ.98ರಷ್ಟು ಹಿಮದಿಂದ ಆವೃತವಾಗಿದೆ. ಅತ್ಯಂತ ತಂಪು ಪ್ರದೇಶವಾಗಿರುವ ಅಂಟಾರ್ಕ್ಟಿಕಾದಲ್ಲಿ ತಾಪಮಾನ ಮೈನಸ್ 89 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವುದುಂಟು. ಈ ಕಾರಣದಿಂದ ಅಂಟಾರ್ಕ್ಟಿಕಾವನ್ನು ‘ಮಹಾ ಮರುಭೂಮಿ’ ಎಂದು ಕರೆಯಲಾಗುತ್ತದೆ. ಉತ್ತರ ಆಫ್ರಿಕಾದಲ್ಲಿ ರುವ ಸಹಾರಾ ಮರುಭೂಮಿ 9.2 ದಶಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ವ್ಯಾಪಿಸಿದೆ. ಇದು ಬಹುಶಃ ಜನಪ್ರಿಯ ಮರುಭೂಮಿಯೂ ಆಗಿದೆ. ಇಲ್ಲಿ ಉಷ್ಣಾಂಶವು ಬೇಸಗೆಯಲ್ಲಿ 50 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುತ್ತದೆ. ಸಹಾರಾದಲ್ಲಿ ಸಾವಿರಾರು ವರ್ಷಗಳಿಂದ ಜನರು ವಾಸಿಸುತ್ತಿದ್ದಾರೆ.

ಅಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳೂ ವಾಸಿಸುತ್ತಿವೆ. ಅಂಟಾರ್ಕ್ಟಿಕಾ ಮತ್ತು ಸಹಾರಾ ಎರಡೂ ಮರುಭೂಮಿಗಳೇ ಎಂದಂತಾಯಿತು. ಮಳೆ ಬೀಳುವ
ಪ್ರಮಾಣ ಕಮ್ಮಿಯಾಗಿರುವುದರಿಂದ ಮತ್ತು ಹೆಚ್ಚಿನ ಭೂಪ್ರದೇಶ ಹೊಂದಿರುವುದರಿಂದ ಅಂಟಾರ್ಕ್ಟಿಕಾವನ್ನೇ ‘ವಿಶ್ವದ ಅತಿದೊಡ್ಡ ಮರುಭೂಮಿ’
ಎಂದು ಕರೆಯಬಹುದು. ಜಗತ್ತಿನ ಬಿಸಿ ಮರುಭೂಮಿ ಯಾವುದು ಎಂದು ಕೇಳಿದರೆ, ಆಗ ‘ಸಹಾರಾ ಮರುಭೂಮಿ’ ಸರಿ ಉತ್ತರವಾಗಬಲ್ಲದು.
ಅಂಟಾರ್ಕ್ಟಿಕಾ ಮರುಭೂಮಿ ಮಂಜಿನಿಂದ ಸಂಪೂರ್ಣ ಆವೃತವಾಗಿರುವುದರಿಂದ, ಭೂಮಿಯ ಸರಾಸರಿ ಶೇ.70ರಷ್ಟು ತಾಜಾ, ಪರಿಶುದ್ಧ ನೀರು ಅಲ್ಲಿನ ಹಿಮದಲ್ಲಿ ಸಂಗ್ರಹವಾಗಿದೆ. ಇಲ್ಲಿಯ ತೀವ್ರ ತಂಪು, ಕಡಿಮೆ ತೇವಾಂಶ ದಿಂದಾಗಿ, ಇಲ್ಲಿ ಕೇವಲ ಕೆಲವು ಬಾಕ್ಟೀರಿಯಾ, ಶೈವಲ, ಪಾಚಿ, ಹಾವಸೆ, ಪೆಂಗ್ವಿನ್ ಹಾಗೂ ಸೀಲ್ ಪ್ರಾಣಿಗಳು ಮಾತ್ರ ಜೀವಿಸುತ್ತವೆ.

ಅಂಟಾರ್ಕ್ಟಿಕಾ ದಲ್ಲಿ ವರ್ಷಗಟ್ಟಲೆ ಮಳೆಯಾಗುವುದೇ ಇಲ್ಲ. ಕೆಲವು ಸಲ ಎರಡು-ಮೂರು ವರ್ಷವಾದರೂ ಮಳೆಯಾಗದೇ ಇರುವುದುಂಟು. ಒಂದು ವೇಳೆ ಅಂಟಾರ್ಕ್ಟಿಕಾ ಸಂಪೂರ್ಣವಾಗಿ ಕರಗಿದರೆ, ಭೂಮಿಯ ಸಮುದ್ರ ಮಟ್ಟವು ಸುಮಾರು 58 ಮೀಟರ್ ಏರಬಹುದು. ಇದು ತೀರ ಪ್ರದೇಶಗಳಿಗೆ ಅಪಾಯ. ನೀರಿನ ಮಟ್ಟ ಕೇವಲ ನಾಲ್ಕೈದು ಮೀಟರ್ ಏರಿದರೇ ಸಾವಿರಾರು ದ್ವೀಪಗಳು ಮುಳುಗುವ ಸಾಧ್ಯತೆ ಇರುವಾಗ, 58 ಮೀಟರ್ ಏರಿದರೆ ಏನಾಗಬಹುದು ಎಂಬುದನ್ನು ಊಹಿಸುವುದೂ ಕಷ್ಟ. ಇನ್ನು ಸಹಾರಾ ಮರುಭೂಮಿ ಅದೆಷ್ಟು ದೊಡ್ಡದಾಗಿದೆಯೆಂದರೆ, ಅದು ಚೀನಾ ದೇಶದಷ್ಟು ಬೃಹತ್ತಾಗಿದೆ. ಸಹಾರಾ ಮರುಭೂಮಿಯು ವಾಸಯೋಗ್ಯವಲ್ಲ. ಅಲ್ಲಿ ಒಂಟೆ, ಫೆನೆಕ್ ಫಾಕ್ಸ್‌, ಮರಳು ಸರ್ಪಗಳು ಮತ್ತು ನೂರಾರು ಬಗೆಯ ಸಸ್ಯಗಳು ಮಾತ್ರ ಬದುಕುತ್ತವೆ.

ಇದನ್ನೂ ಓದಿ: vishweshwar bhat column: ಯಾರಿಗೆ ಆಗಲಿ, ಕುಳಿತು ಕೈಕುಲುಕಬಾರದು. ಕೈಕುಲುಕುವಾಗ ಎದ್ದು ನಿಲ್ಲಬೇಕು!