Wednesday, 11th December 2024

‌Vishweshwar Bhat Column: ಫಿಡೊ ಎಂಬ ನಾಯಿ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಇಟಲಿಯ ಪ್ಲಾರೆ ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿ ಬೋರ್ಗೋ ಸ್ಯಾನ್ ಲೊರೆಂಝೋ ಎಂಬ ಸಣ್ಣ ಊರಿದೆ. ಆ ಊರಿನ ಜನಸಂಖ್ಯೆ 15000 ಇದ್ದಿರಬಹುದು. ಈ ಊರು ತನ್ನ ಭೌಗೋಳಿಕ ಸೌಂದರ್ಯದಿಂದ ಪ್ರಸಿದ್ಧವಾಗಿದೆ.

ಪ್ಲಾರೆಗೆ ಬಂದವರು ಬೋರ್ಗೋ ಸ್ಯಾನ್ ಲೊರೆಂಝೋಕ್ಕೆ ಒಂದು ನಾಯಿಯ ಸ್ಮಾರಕ ನೋಡಲು ಆಗಮಿಸುತ್ತಾರೆ ಅಂದರೆ ಆಶ್ಚರ್ಯವಾಗಬಹುದು. ಆ ಊರಿನಲ್ಲಿ ಫಿಡೊ ಎಂಬ ಇಟಾಲಿಯನ್ ನಾಯಿಯ ಸ್ಮಾರಕವಿದೆ. ಆ ನಾಯಿ 17 ವರ್ಷಗಳ ಕಾಲ ಬದುಕಿತ್ತು. ಫಿಡೊ ತನ್ನ ಯಜಮಾನನಿಗೆ ಅಚಲ ನಿಷ್ಠೆಯನ್ನು ಪ್ರದರ್ಶಿಸಿದ್ದರ ದ್ಯೋತಕವಾಗಿ ಆ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಆ ನಾಯಿಯ ಕುರಿತು ಅನೇಕ ಇಟಾಲಿಯನ್ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳು ಹಾಗೂ ಪತ್ರಿಕೆಗಳಲ್ಲಿ ಸಾವಿರಾರು ಲೇಖನಗಳು ಪ್ರಕಟವಾಗಿರಬಹುದು. 1941ರಲ್ಲಿ ಫಿಡೊ, ಬೊರ್ಗೊ ಸ್ಯಾನ್ ಲೊರೆಂಝೋ ಪುರಸಭೆಯ ಸಣ್ಣ ಪಟ್ಟಣದಲ್ಲಿ ಒಂದು ಬೀದಿ ನಾಯಿಯಾಗಿತ್ತು.

ಅದೇ ವರ್ಷ ಒಂದು ರಾತ್ರಿ, ಕಾರ್ಲೋ ಸೊರಿಯಾನಿ ಎಂಬ ಇಟ್ಟಿಗೆಗೂಡು ಕೆಲಸಗಾರ, ಬಸ್ ನಿಲ್ದಾಣದಿಂದ ಮನೆಗೆ ಹೋಗುತ್ತಿzಗ, ರಸ್ತೆ ಬದಿಯ ಕಂದಕದಲ್ಲಿ ಗಾಯಗೊಂಡು ಬಿದ್ದಿದ್ದ ನಾಯಿಯನ್ನು ನೋಡಿದ. ನಾಯಿ ಯಾರ
ದ್ದು ಎಂದು ತಿಳಿಯದೆ, ಸೊರಿಯಾನಿ ಮನೆಗೆ ಕರೆದೊಯ್ದು ಶುಶ್ರೂಷೆ ಮಾಡಿ ಪ್ರೀತಿಯಿಂದ ಸಾಕಿದ. ಸೊರಿಯಾನಿ ಮತ್ತು ಅವನ ಪತ್ನಿ ನಾಯಿ ಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದರು. ಅದಕ್ಕೆ ಫಿಡೋ (ಲ್ಯಾಟಿನ್ ಭಾಷೆ ಯಲ್ಲಿ ಫಿಡೊ ಅಂದ್ರೆ ನಿಷ್ಠಾವಂತ ಎಂದರ್ಥ) ಎಂದು ನಾಮಕರಣ ಮಾಡಿದರು. ಫಿಡೋ ಚೇತರಿಸಿಕೊಂಡ ನಂತರ, ಸೊರಿಯಾನಿ ಪ್ರತಿದಿನ ಕೆಲಸಕ್ಕೆ ಹೋಗುವಾಗ ಆತನನ್ನು ಹಿಂಬಾಲಿಸಲಾರಂಭಿಸಿತು.

ಸಂಜೆ ಬಸ್ಸಿನಿಂದಿಳಿದು ಹಿಂತಿರುಗಿದಾಗ, ಫಿಡೋ ಸೊರಿಯಾನಿಯನ್ನು ಸ್ವಾಗತಿಸಿ ಮನೆಗೆ ಹಿಂಬಾಲಿಸುತ್ತಿತ್ತು. ಇದು 9 ವರ್ಷಗಳವರೆಗೆ ನಡೆಯಿತು. 1943ರಲ್ಲಿ ಬೋರ್ಗೋ ಸ್ಯಾನ್ ಲೊರೆಂಝೋ ಎರಡನೇ ಮಹಾಯುದ್ಧದ ಸಮಯ
ದಲ್ಲಿ ಮಿತ್ರರಾಷ್ಟ್ರಗಳ ಬಾಂಬ್ ದಾಳಿಗೆ ತುತ್ತಾಯಿತು. ಆ ಸಮಯದಲ್ಲಿ ಸೊರಿಯಾನಿ ಸತ್ತುಹೋದ. ಅದೇ ದಿನ ಸಂಜೆ, ಫಿಡೋ ಬಸ್ ನಿಲ್ದಾಣದಲ್ಲಿ ಎಂದಿನಂತೆ ಕಾಣಿಸಿಕೊಂಡಿತು. ಆದರೆ ಸೊರಿಯಾನಿ ಇಳಿಯುವುದನ್ನು
ನೋಡಲಿಲ್ಲ. ಫಿಡೋ ನಂತರ ಮನೆಗೆ ಹಿಂದಿರುಗಿತು, ಆದರೆ 14 ವರ್ಷಗಳ ಕಾಲ (5000ಕ್ಕಿಂತ ಹೆಚ್ಚು ಬಾರಿ), ಸಾಯುವ ದಿನದವರೆಗೆ, ಪ್ರತಿದಿನ ಸ್ಟಾಪ್‌ಗೆ ಹೋಗುತ್ತಿತ್ತು. ತನ್ನ ಯಜಮಾನ ಬರಬಹುದು ಎಂದು ನಿತ್ಯವೂ ಕನವರಿಸುತ್ತಿತ್ತು. ಫಿಡೋ ಸ್ವಾಮಿನಿಷ್ಠೆಯ ಪರಾಕಾಷ್ಠೆಯ ಕಥೆ ಕೇವಲ ಆ ಊರಿಗೆ ಮಾತ್ರವಲ್ಲ, ಇಟಲಿಯ ಆಚೆಗೂ ಹರಡಿತು. ಸಾಯಂಕಾಲವಾಗುತ್ತಿದ್ದಂತೆ ಯಜಮಾನನ ದಾರಿ ನೋಡಲು ಬಸ್ ನಿಲ್ದಾಣಕ್ಕೆ ಬರುವುದನ್ನು
ನೋಡಲು ಸಾವಿರಾರು ಜನ ಸೇರುತ್ತಿದ್ದರು. ಅದರ ಜೀವಿತಾವಧಿಯಲ್ಲಿ ಮಾಧ್ಯಮದ ಆಸಕ್ತಿಯೂ ಬೆಳೆಯಿತು.

ಇಟಾಲಿಯನ್ ನಿಯತಕಾಲಿಕೆಗಳು ಫಿಡೊ ಕಥೆಯನ್ನು ಪ್ರಕಟಿಸಿದವು. ಇದು ಹಲವಾರು ನ್ಯೂಸ್ ರೀಲ್‌ಗಳಲ್ಲಿ
ಕಾಣಿಸಿಕೊಂಡಿತು. 1958ರಲ್ಲಿ ಫಿಡೊ ತೀರಿಕೊಂಡಾಗ, ಲೊರೆಂಝೋ ಊರಿನ ಜನ ಕಂಬನಿ ಮಿಡಿದರು. ಸ್ವತಃ ಆ ಊರಿನ ಮೇಯರ್ ಶೋಕಸಭೆಯನ್ನು ಏರ್ಪಡಿಸಿದ. ಫಿಡೊ ನಿಧನ ವಾರ್ತೆ ಇಟಲಿಯ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು. ‘ಟೈಮ’ ಮ್ಯಾಗಜಿನ್ ಕೂಡ ಲೇಖನ ಪ್ರಕಟಿಸಿತು. ಫಿಡೊ ಸಾಯುವುದಕ್ಕಿಂತ ಒಂದು ವರ್ಷ ಮುಂಚೆಯೇ, ಆ ಊರಿನ ಜನ ಅದರ ನೆನಪಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಿದ್ದರು.

ಫಿಡೊ ತಾನು ಬದುಕಿರುವಾಗಲೇ, ತನ್ನ ಸ್ಮಾರಕವನ್ನು ನೋಡಲಿ ಎಂದು ಅವರ ಆಶಯವಾಗಿತ್ತು. ಕವಿ ಡಾಂಟೆ ವೃತ್ತದ ಸನಿಹ ಊರಿನ ಕೇಂದ್ರ ಭಾಗದಲ್ಲಿ ಫಿಡೊಗೆ ಸ್ಮಾರಕವನ್ನು ನಿರ್ಮಿಸಲಾಯಿತು. ನಾಯಿಯ ಪ್ರತಿಮೆಯ ಕೆಳಗೆ To Fido, example of loyalty ಎಂದು ಬರೆಯಲಾಗಿದೆ. ಸೊರಿಯಾನಿ ಪತ್ನಿ ಮತ್ತು ಫಿಡೊ ಸಮ್ಮುಖದಲ್ಲಿಯೇ ಆ ಪ್ರತಿಮೆಯನ್ನು ಮೇಯರ್ ಉದ್ಘಾಟಿಸಿದ್ದು ವಿಶೇಷ. ಫಿಡೊ ಇದನ್ನೆ ಕಣ್ತುಂಬಿಕೊಳ್ಳಲಿ ಎಂದು ಊರಿನವರೆಲ್ಲ ಬಯಸಿದ್ದರು.

ಇದನ್ನೂ ಓದಿ: Vishweshwar Bhat Column: ವಾಟರ್‌ ಲ್ಯಾಂಡಿಂಗ್‌ ಅಂದರೇನು ?