Saturday, 14th December 2024

Vishweshwar Bhat Column: ಗುಜ್ರಾಲ್‌ ಟಿವಿ ಸಂದರ್ಶನ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ನರೇಂದ್ರ ಮೋದಿಯವರು ಪ್ರಧಾನಿಯಾಗಿ ಹತ್ತು ವರ್ಷಗಳಾದರೂ ಮಾಧ್ಯಮ ಪ್ರತಿನಿಧಿಗಳಿಂದ ಸುರಕ್ಷಿತ ಅಂತರ ಕಾಪಾಡಿಕೊಂಡಿದ್ದರ ಬಗ್ಗೆ ಬರೆದಿದ್ದೆ. ಪ್ರಧಾನಿ ಕಾರ್ಯಾಲಯದಲ್ಲಿ ಹಲವು ಅಧಿಕಾರಿಗಳಿದ್ದಾರೆ. ಆದರೆ ಮಾಧ್ಯಮ ಕಾರ್ಯದರ್ಶಿ ಮಾತ್ರ ಇಲ್ಲ. ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯವರ ತಂಡದಲ್ಲಿ
ಮಾಧ್ಯಮ ಕಾರ್ಯದರ್ಶಿ ಇಲ್ಲದಂತಾಗಿದೆ. ಪ್ರಧಾನಿಯವರು ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡದಿರುವು ದರಿಂದ, ವಿದೇಶ ಪ್ರವಾಸಕ್ಕೂ ಅವರನ್ನು ಕರೆದುಕೊಂಡು ಹೋಗದಿರುವುದರಿಂದ ಮತ್ತು ಪತ್ರಿಕಾಗೋಷ್ಠಿಯನ್ನೂ ಉದ್ದೇಶಿಸಿ ಮಾತಾಡದಿರುವುದರಿಂದ ಅವರಿಗೆ ಅಂಥ ಹುದ್ದೆಯ ಅಗತ್ಯ ಕಂಡುಬಂದಿರಲಿಕ್ಕಿಲ್ಲ.

ನನಗೆ ಈ ಮಾತನ್ನು ಹೇಳುವಾಗ ಲೇಖಕ, ರಾಜತಾಂತ್ರಿಕ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಪವನ್ ಕೆ.ವರ್ಮ
ಅವರು ದಿವಂಗತ ಮಾಜಿ ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್ ಬಗ್ಗೆ ಹೇಳಿದ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ಗುಜ್ರಾಲ್ ಅವರಿಗೆ ಪತ್ರಕರ್ತರ ಜತೆ ಹರಟೆ ಹೊಡೆಯುವುದೆಂದರೆ ಇಷ್ಟ. ಅವರು ಪ್ರಧಾನಿಯಾಗುವುದಕ್ಕಿಂತ ಮೊದಲು, ಆಯ್ದ ಪತ್ರಕರ್ತರನ್ನು ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರಿಗೆ ಗುಂಡು ಪಾರ್ಟಿಗೆ ಆಹ್ವಾನಿಸು ತ್ತಿದ್ದರು.

ಅದರಲ್ಲೂ ಕೆಲವು ಸಂಪಾದಕರನ್ನು ನಿಯಮಿತವಾಗಿ ಭೇಟಿ ಮಾಡುತ್ತಿದ್ದರು. ಕೆಲವು ಪ್ರತಿಷ್ಠಿತ ಪತ್ರಿಕೆಗಳ ರಾಜಕೀಯ ಸಂಪಾದಕರು, ವಿದೇಶಾಂಗ ವ್ಯವಹಾರ ವಿಭಾಗದ ಮುಖ್ಯಸ್ಥರು ಸಂದರ್ಶನ ಬಯಸಿದರೆ, ಇಲ್ಲವೆನ್ನುತ್ತಿ
ರಲಿಲ್ಲ. ಅದಕ್ಕಾಗಿ ಸಮಯ ಮಾಡಿಕೊಳ್ಳುತ್ತಿದ್ದರು. ದೇವೇಗೌಡರ ಸರಕಾರ ಪತನವಾದ ಬಳಿಕ ಪ್ರಧಾನಿಯಾದ ಗುಜ್ರಾಲ, ಆಗಲೂ ಪತ್ರಕರ್ತರ ಜತೆ ಸಂಪರ್ಕ ಕಾಪಾಡಿಕೊಂಡಿದ್ದರು. ಆ ದಿನಗಳಲ್ಲಿ ದಿಲ್ಲಿ ಪತ್ರಿಕಾವಲಯದಲ್ಲಿ
ಪ್ರಭಾವಿ ಎಂದು ಕರೆಯಿಸಿಕೊಂಡಿದ್ದ ವೀರ್ ಸಾಂಘವಿ, ಪ್ರಧಾನಿಯವರ ಸಂದರ್ಶನ ಕೋರಿ, ನೋಯಿಡಾ ದಲ್ಲಿರುವ ಟಿವಿ ಸ್ಟುಡಿಯೋಕ್ಕೆ ಆಹ್ವಾನಿಸಿ ದರು. ಸಾಮಾನ್ಯವಾಗಿ ಪ್ರಧಾನಿಯಾದವರು ಪತ್ರಿಕಾ ಕಾರ್ಯಾಲಯ ಗಳಿಗಾಗಲಿ, ಟಿವಿ ಸ್ಟುಡಿಯೋಗಳಿಗಾಗಲಿ ಹೋಗುವುದಿಲ್ಲ.

ಪ್ರಧಾನಿಯವರು ಇದ್ದಲ್ಲಿಯೇ ಸಂದರ್ಶನಕ್ಕೆ ಪೂರಕ ವ್ಯವಸ್ಥೆ ಏರ್ಪಡಿಸುತ್ತಾರೆ. ಪತ್ರಕರ್ತರೂ ಪ್ರಧಾನಿಯವರಿಗೆ ಸ್ಟುಡಿಯೋಕ್ಕೆ ಬನ್ನಿ ಎಂದು ವರಾತ ಮಾಡುವುದಿಲ್ಲ. ಆದರೆ ಸಾಂಘವಿ, ಗುಜ್ರಾಲ್ ಅವರನ್ನು ಆಹ್ವಾನಿಸಿದಾಗ,
ಪ್ರಧಾನಿ ಇಲ್ಲ ಎನ್ನಲಿಲ್ಲ. ಪ್ರಧಾನಿಯವರ ಭೇಟಿ ಎಂದ ಮೇಲೆ ಶಿಷ್ಟಾಚಾರ ಪಾಲಿಸಲೇಬೇಕಲ್ಲ. ಗುಜ್ರಾಲ್ ಅವರು ಸಫ್ದರ್‌ಜಂಗ್ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೋಗಿ, ಅಲ್ಲಿಂದ ಹೆಲಿಕಾಪ್ಟರಿನಲ್ಲಿ ನೋಯಿಡಾಕ್ಕೆ ಹೋದರು.

ನೋಯಿಡಾ ಇರುವುದು ಉತ್ತರ ಪ್ರದೇಶದಲ್ಲಿ. ಹೀಗಾಗಿ ಆ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿ ಯವರ ಸ್ವಾಗತಕ್ಕೆ ಬರಬೇಕಿತ್ತು. ಅವರು ತಮ್ಮ ಹಿರಿಯ ಸಂಪುಟ ದರ್ಜೆ ಸಚಿವರೊಬ್ಬರನ್ನು ಕಳುಹಿಸಿಕೊಟ್ಟಿದ್ದರು. ಅವರು
ಪ್ರಧಾನಿಯವರನ್ನು ಸ್ವಾಗತಿಸಿ, ಟಿವಿ ಸ್ಟುಡಿಯೋಕ್ಕೂ ಆಗಮಿಸಿದರು. ಪ್ರಧಾನಿಯವರು ಟಿವಿ ಸಂದರ್ಶನ ಮುಗಿಸಿ, ಹೆಲಿಕಾಪ್ಟರಿನಲ್ಲಿ ಪುನಃ ಸಫ್ದರ್ ಜಂಗ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ನಂತರ ಕಾರಿನಲ್ಲಿ ಪ್ರಧಾನಿ
ನಿವಾಸಕ್ಕೆ ಆಗಮಿಸಿದರು. ಇಷ್ಟಕ್ಕೆ ಅರ್ಧ ದಿನ ಕಳೆದಿತ್ತು. ಪ್ರಧಾನಿಯಾದವರು ಒಂದು ಟಿವಿ ಸಂದರ್ಶನಕ್ಕೆ ಅರ್ಧ ದಿನ ವ್ಯಯಿಸುವಷ್ಟು ಆರಾಮವಾಗಿ ಇರುತ್ತಾರಾ ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಆಗುವುದಿಲ್ಲ.

ಅದು ಸಾಮಾಜಿಕ ಜಾಲತಾಣಗಳು ಇಲ್ಲದ ದಿನಗಳು. ಈಗ ಹಾಗೆ ಮಾಡಿದರೆ, ಪ್ರಧಾನಿಯವರನ್ನು ಹುರಿದು ಮುಕ್ಕಿಬಿಡುತ್ತಿದ್ದರು. ಗುಜ್ರಾಲ್ ಬಿಂದಾಸ್ ವ್ಯಕ್ತಿ. ಅವರೇನೂ ವೃತ್ತಿ ರಾಜಕಾರಣಿ ಅಲ್ಲ. ತಾವು ಪ್ರಧಾನಿಯಾಗಿದ್ದು
ಆಕಸ್ಮಿಕ ಎಂಬುದು ಗೊತ್ತಿತ್ತು. ಅಲ್ಲದೇ ಆ ಪದವಿಯಲ್ಲಿ ತಾವು ಹೆಚ್ಚು ದಿನ ಇರುವುದಿಲ್ಲ ಎಂಬುದೂ ಗೊತ್ತಿತ್ತು.

ಇದನ್ನೂ ಓದಿ: Vishweshwar Bhat Column: ಪರಿಚಯಕ್ಕೂ ಮುನ್ನ ಬೇರೆಯವರು, ಮಾತಿಗಿಳಿದ ಮೇಲೆ ನಮ್ಮವರು !