Wednesday, 11th December 2024

ವಿಶ್ವ ಅಂಡಾಶಯದ ಕ್ಯಾನ್ಸರ್ ದಿನ – ಅಂಡಾಶಯ ಕ್ಯಾನ್ಸರ್‌ ಬಗ್ಗೆ ನಿಮಗೆ ತಿಳಿಯದ ಮಾಹಿತಿ…

ಅಂಡಾಶಯ ಕ್ಯಾನ್ಸರ್‌ ಅತ್ಯಂತ ಅಪಾಯಕಾರಿ ಕ್ಯಾನ್ಸರ್‌ಗಳಲ್ಲಿ ಒಂದು. ಮಹಿಳೆಯರನ್ನು ಬಾಧಿಸುವ ಈ ಕ್ಯಾನ್ಸರ್‌ ಪ್ರತಿ ವರ್ಷ ಹೆಚ್ಚಳದ ಹಾದಿ ಹಿಡಿದಿದೆ. ೪೦ ವರ್ಷ ಮೇಲ್ಪಟ್ಟವರಲ್ಲಿ ಕಾಡುವ ಈ ಸಮಸ್ಯೆ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಇಲ್ಲವಾದರೆ ಇದು ಕ್ಯಾನ್ಸರ್‌ ಆಗಿ ಮಾರ್ಪಡುತ್ತದೆ. ಇನ್ನು, ೬೦ ವರ್ಷ ಮೇಲ್ಪಟ್ಟ ಮಹಿಳೆಯರು ಕಡ್ಡಾಯವಾಗಿ ಅಂಡಾಶಯದ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವ ಮೂಲಕ ಈ ಕ್ಯಾನ್ಸರ್‌ನಿಂದ ತಪ್ಪಿಸಿಕೊಳ್ಳಬಹುದು.

ಆದರೆ, ಬಹಳಷ್ಟು ಮಹಿಳೆಯರು ಅಂಡಾಶಯ ಕ್ಯಾನ್ಸರ್‌ನ ರೋಗ ಲಕ್ಷಣವನ್ನು ನಿರ್ಲಕ್ಷಿಸುವುದರಿಂದ ಕ್ಯಾನ್ಸರ್‌ ಅಂತಿಮ ಹಂತಕ್ಕೆ ತಲುಪಿಬಿಡುತ್ತದೆ. ನಂತರ ಯಾವ ಚಿಕಿತ್ಸೆಯೂ ಈ ಕ್ಯಾನ್ಸರ್‌ಗೆ ಕೆಲಸ ಮಾಡುವುದಿಲ್ಲ. ಹೀಗಾಗಿ ಪ್ರತಿಯೊಬ್ಬ ಮಹಿಳೆ ಯರು ಅಂಡಾಶಯ ಕ್ಯಾನ್ಸರ್‌ನ ಬಗ್ಗೆ ತಿಳಿದುಕೊಳ್ಳಲೆಂದು ಫೊರ್ಟಿಸ್‌ ಆಸ್ಪತ್ರೆ ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ ಆಂಕೊಲಾಜಿ ನಿರ್ದೇಶಕಿ ಡಾ. ನಿತಿ ರೈಜಾಡಾ ಸಲಹೆ ನೀಡಿದ್ದಾರೆ.

ಅಂಡಾಶಯ ಕ್ಯಾನ್ಸರ್‌ನ ಲಕ್ಷಣಗಳಿವು:
ಅಂಡಾಶಯ ಕ್ಯಾನ್ಸರ್‌ ಕೆಲವೊಮ್ಮೆ ಯಾವುದೇ ರೋಗ ಲಕ್ಷಣಗಳಿಲ್ಲದೇ ಕಾಣಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ, ಇನ್ನೂ ಕೆಲವರಲ್ಲಿ ಕಡಿಮೆ ಲಕ್ಷಣಗಳಿಂದ ಗೋಚರಿಸುತ್ತದೆ.
• ಹೊಟ್ಟೆ ಉಬ್ಬುವುದು
• ಸ್ವಲ್ಪ ಪ್ರಮಾಣದ ಊಟ ತಿಂದ ಕೂಡಲೇ ಹೊಟ್ಟೆ ತುಂಬಿದಂತ ಅನುಭವ
• ಅತಿಯಾದ ತೂಕ ಇಳಿಕೆ
• ಆಯಾಸ
• ಬೆನ್ನುನೋವು
• ಮಲಬದ್ಧತೆ
• ಆಗಾಗ್ಗೆ ಮೂತ್ರ ವಿಸರ್ಜನೆ
ಇದು ಸಾಮಾನ್ಯ ಲಕ್ಷಣವಾದ್ದರಿಂದ ಮಹಿಳೆಯರು ಹೆಚ್ಚಾಗಿ ತಲೆ ಕೆಡೆಸಿಕೊಳ್ಳುವುದಿಲ್ಲ. ಆದರೆ ಇದು ಅಂಡಾಶಯ ಕ್ಯಾನ್ಸರ್‌ನ ಲಕ್ಷಣಗಳಾಗಿರುತ್ತವೆ.

ಅಂಡಾಶಯದ ಕ್ಯಾನ್ಸರ್ ಅನುವಂಶಿಕವೇ?
ಅಂಡಾಶಯ ಕ್ಯಾನ್ಸರ್‌ ಕುಟುಂಬದ ಹಿನ್ನೆಲೆಯಿಂದ ಬರುವ ಕಾಯಿಲೆ ಎಂದು ಹೇಳಲಾಗುತ್ತದೆ. ಅದರಲ್ಲೂ ದೋಷಯುಕ್ತ ಜಿನ್‌ನಿಂದಲೂ ಅಂದರೆ ತಾಯಿ ಯಿಂದಲೂ ಮಗಳಿಗೆ ಈ ಕ್ಯಾನ್ಸರ್‌ ಕೆಲವೊಮ್ಮೆ ಹರಡುವ ಸಾಧ್ಯತೆ ಇರುತ್ತದೆ. ಶೇ.೨೫ರಷ್ಟು ಅಂಡಾಶಯ ಗಡ್ಡೆಗಳಿಗೆ ದೋಷಪೂರಿತ ಜಿನ್‌ಗಳು ಸಹ ಕಾರಣವಾಗಿವೆ. ಇನ್ನೂ ಕೆಲವರಲ್ಲಿ ಕಾಣಿಸಿಕೊಳ್ಳುವ ಅಂಡಾಶಯ ಕ್ಯಾನ್ಸರ್‌ಗೆ ನಿಖರ ಕಾರಣವಿಲ್ಲ. ಬದಲಾದ ಜೀವನಶೈಲಿಯೂ ಇದಕ್ಕೆ ಕಾರಣ ಇರಬಹುದು ಎನ್ನಲಾಗಿದೆ. BRCA1 ರೂಪಾಂತರ ಹೊಂದಿರುವ ಮಹಿಳೆಯರು ಶೇ. 35 ರಿಂದ 70 ರಷ್ಟು ಅಂಡಾಶಯದ ಕ್ಯಾನ್ಸರ್‌ನ ಜೀವಿತಾವಧಿಯ ಅಪಾಯವನ್ನು ಹೊಂದಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಅಪಾಯಕಾರಿ ಅಂಶಗಳು ಯಾವುವು?
ಅಂಡಾಶಯದ ಕ್ಯಾನ್ಸರ್ ಹಲವಾರು ಅಂಶಗಳಿಂದ ಉಂಟಾಗಬಹುದು, ಅವುಗಳೆಂದರೆ:
• ವಯಸ್ಸಾಗುವಿಕೆಯಿಂದ ಅಂಡಾಶಯದ ಕ್ಯಾನ್ಸರ್‌ ಬೆಳವಣಿಗೆಗೆ ಕಾರಣವಾಗಬಹುದು. ಅದರಲ್ಲೂ ೫೦ ವರ್ಷ ಮೇಳ್ಪಟ್ಟವರಲ್ಲಿ ಈ ಅಪಾಯ ಹೆಚ್ಚು.
• ಅನುವಂಶಿಕ ಜೀನ್ ಬದಲಾವಣೆಗಳು.
• ಅಂಡಾಶಯದ ಕ್ಯಾನ್ಸರ್‌ ಕುಟುಂಬದ ಹಿನ್ನೆಲೆ ಇರುವುದು.
• ಬೊಜ್ಜು: ಅಧಿಕ ತೂಕ ಅಥವಾ ಬೊಜ್ಜು ಇದ್ದರೆ ಅಂಡಾಶಯದ ಕ್ಯಾನ್ಸರ್ ಸಾಧ್ಯತೆ ಹೆಚ್ಚು.
• ಎಂಡೊಮೆಟ್ರಿಯೊಸಿಸ್.
• ಮುಟ್ಟಿನ ಏರಿಳಿತ
• ಗರ್ಭವತಿ ಆಗದೇ ಇರುವವರಲ್ಲಿಯೂ ಸಾಧ್ಯತೆ ಹೆಚ್ಚು.

ಅಂಡಾಶಯದ ಕ್ಯಾನ್ಸರ್ ತಡೆಯುವುದು ಹೇಗೆ?
ಅಂಡಾಶಯದ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ. ಆದಾಗ್ಯೂ, ನಿಮ್ಮ ಅಪಾಯವನ್ನು ಕಡಿಮೆ ಮಾಡಲು ಕೆಲ ಕ್ರಮ ಅನುಸರಿಸಿ.
• ಜನನ ನಿಯಂತ್ರಣ ಮಾತ್ರೆಗಳು ತೆಗೆದುಕೊಳ್ಳುವುದುನ್ನು ಕಡಿಮೆ ಮಾಡಿ. ಇದು ಕೆಲವೊಮ್ಮೆ ನಿಮಗೆ ಸೈಡ್‌ಎಫೆಕ್ಟ್‌ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ.
• ಈ ಮೊದಲೇ ಕುಟುಂಬದಲ್ಲಿ ಅಂಡಾಶಯ ಕ್ಯಾನ್ಸರ್‌ ಇರುವ ಬಗ್ಗೆ ಮೊದಲು ವೈದ್ಯರಿಗೆ ತಿಳಿಸಿ, ಸಲಹೆ ಪಡೆದುಕೊಳ್ಳಿ.
• ಜೀನ್ ರೂಪಾಂತರಗಳು ಅಂಡಾಶಯದ ಕ್ಯಾನ್ಸರ್‌ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳಲು ಹಿಂಜರಿಯದಿರಿ.

ಅಂಡಾಶಯದ ಕ್ಯಾನ್ಸರ್‌ಗೆ ಲಭ್ಯವಿರುವ ಚಿಕಿತ್ಸೆಗಳು
ಅಂಡಾಶಯ ಕ್ಯಾನ್ಸರ್‌ಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿಯ ಸಂಯೋಜಿತ ಚಿಕಿತ್ಸೆ ನೀಡಲಾಗುತ್ತದೆ. ಕೆಲವೊಮ್ಮೆ ತೀವ್ರತೆಯನ್ನು ಆಧರಿಸಿ ಒಂದು ಅಥವಾ ಎರಡೂ ಅಂಡಾಶಯಗಳು ಅಥವಾ ಗರ್ಭಾಶಯವನ್ನು ತೆಗೆದು ಹಾಕಲಾ ಗುವ ಸಾಧ್ಯತೆ ಇರುತ್ತದೆ. ಇಲ್ಲವಾದರೆ, ಸುಧಾರಿತ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ಜಾಗೃತಿ ಇರಲಿ
ಪ್ರತಿಯೊಬ್ಬ ಮಹಿಳೆಯರು ಅಂಡಾಶಯ ಕ್ಯಾನ್ಸರ್‌ನ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ೫೦ ವರ್ಷ ಮೇಲ್ಪಟ್ಟವರಲ್ಲಿ ಮೇಲೆ ತಿಳಿಸಿರುವ ಲಕ್ಷಣ ಕಂಡು ಬಂದರೆ ತಡ ಮಾಡದೇ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಿ. ಇಲ್ಲವಾದರೆ ಪ್ರಾಣಕ್ಕೆ ಎರವಾಗಬಹುದು.