Friday, 13th December 2024

ಯಕ್ಷ ಬಣ್ಣದ ಮಾಯಾಲೋಕ

ಪವನ್ ಕುಮಾರ್ ಆಚಾರ್ಯ

ಯಕ್ಷಗಾನ ಕರಾವಳಿ ಜನರ ಬದುಕಿನ ಅವಿಭಾಜ್ಯ ಅಂಗ. ದಿನವೂ ಯಕ್ಷಗಾನದ ಹೊಸದೊಂದು ಪಾತ್ರದೊಳಗೆ ತಾನಾಗುವುದು ಅಷ್ಟು ಸುಲಭವಲ್ಲ. ತನ್ನೆಲ್ಲ ದುಃಖ ದುಮ್ಮಾನ ಅವಿತಿಟ್ಟು ಪ್ರೇಕ್ಷಕರನ್ನು ರಂಜಿಸುವ ಕಲಾವಿದ ನಿಜಕ್ಕೂ ಹೃದಯ ಶ್ರೀಮಂತ. ಅಂತಹ ಕಲಾವಿದನಿಂದ ಮೂಡಿದ ಲೇಖನವಿದು.

ಯಕ್ಷಗಾನದ ರಂಗಸ್ಥಳದಲ್ಲಿ (ವೇದಿಕೆ) ಕಲಾವಿದರ ಶ್ರಮ ಮುಂದೆ ಕುಳಿತು ನೋಡಿದಷ್ಟು ಸರಳವೂ ಅಲ್ಲ, ಸುಲಭವಾಗಿ ಒಲಿಯುವಂತದ್ದೂ ಅಲ್ಲ. ಕಲಾವಿದರ ಶ್ರಮ, ಕಠಿಣತೆ ಗೊತ್ತಾಗಬೇಕೆಂದರೆ ವೇದಿಕೆಯ ಹಿಂದಿನ ಚೌಕಿಮನೆಯಲ್ಲಿ (ವೇಷ ತಯಾರಿ ಮಾಡುವ ಸ್ಥಳ) ಒಮ್ಮೆ ಬಂದು ನೋಡ ಬೇಕು. ಎಲ್ಲಾ ಕಲೆಗಳಿಗೂ ರಿಹರ್ಸಲ್ ಅಥವಾ ಪ್ರಾಯೋಗಿಕ ಪ್ರದರ್ಶನಗಳು ಇದ್ದೇ ಇರುತ್ತದೆ.

ಆದರೆ, ಅದಾವುದೂ ಇಲ್ಲದೇ, ಕಟ್-ರಿಟೇಕ್ ಮಾಡದೆ, ವಿಜೃಂಭಿಸುವ ಏಕೈಕ ಕಲೆಯೆಂದರೆ ಅದು ಯಕ್ಷಗಾನ ಮಾತ್ರ. ಎಲ್ಲಾ ತೀರ್ಮಾನ ಕೈಗೊಳ್ಳುವುದು ಚೌಕಿಮನೆಯಲ್ಲಿ, ಅದೂ ಸೂತ್ರದಾರ ಭಾಗವತನ ಮುಖೇನ. ಸಿನೆಮಾಕ್ಕೆ ಡೈರೆಕ್ಟರ್ ಹೇಗೋ ಹಾಗೆ ಯಕ್ಷಗಾನದಲ್ಲಿ ಭಾಗವತನಿಗೆ ಅಗ್ರಸ್ಥಾನ.

ಯಕ್ಷಗಾನ ಪ್ರಸಂಗಗಳು ಹೆಚ್ಚಾಗಿ ಪೌರಾಣಿಕ ಕಥೆಗಳನ್ನು ಆಧರಿಸಿ ಇರುತ್ತದೆ. ಕಥೆಗೆ ಅನುಗುಣವಾಗಿ ಪಾತ್ರ ಹಂಚಿ ಕೊಡುವುದು ಭಾಗವತನ ಕರ್ತವ್ಯ. ಅದಕ್ಕೆ ಅನುಸಾರವಾಗಿ ಕಲಾವಿದರು ವೇಷ ತಯಾರಿಯಲ್ಲಿ ತೊಡಗಿಕೊಳ್ಳುತ್ತಾರೆ.

ಪಾತ್ರದ ಮುಖವರ್ಣಿಕೆಯ ಮಹತ್ವ: ಯಕ್ಷಗಾನದಲ್ಲಿ ‘ಮೇಕಪ್’ಗೆ ಮಹತ್ವ ಸ್ಥಾನ, ಅದೇ ಜೀವಾಳ. ನೃತ್ಯ, ಅಭಿನಯದ ಜತೆಗೆ ಮುಖದ ಭಾವನೆಗಳಿಗೂ ಅಧಿಕ ಪ್ರಾಶಸ್ತ್ಯವಿದೆ. ಪಾತ್ರಕ್ಕೆ ಒಪ್ಪುವ ಮುಖವರ್ಣಿಕೆ, ಪುಂಡು ವೇಷ, ಸ್ತ್ರೀ ವೇಷ, ರಾಜ ವೇಷ, ಬಣ್ಣದ ವೇಷ, ಹಾಸ್ಯ ಇವು ಪಾತ್ರವೈವಿಧ್ಯಗಳು. ಪ್ರತಿಯೊಂದಕ್ಕೂ ವಸ್ತ್ರಾಲಂಕಾರ ಗಳಿವೆ. ಪಾತ್ರಗಳಲ್ಲಿ ರಕ್ಕಸ ಮತ್ತು ದೇವ ಗಳೆಂಬ ಸ್ವಭಾವ ಗಳಿದ್ದು, ವೇಷಭೂಷಣ ಬದಲಾಗುತ್ತದೆ. ಮುಖವರ್ಣಿಕೆಗೆ ಕೆಂಪು (ಇಂಗ್ಲಿಕ), ಹಳದಿ, ಬಿಳಿ (ಸಫೇದ್), ಪಚ್ಚೆ, ನೀಲಿ (ಕೆಲವು ಕಡೆ) ಬಣ್ಣಗಳು,ಕಾಡಿಗೆ (ಎಣ್ಣೆ ಮಸಿ), ನೀರು, ತೆಂಗಿನಎಣ್ಣೆ, ಕಡ್ಡಿ, ಕರವಸ ಬಳಕೆ ಮಾಡಲಾಗುತ್ತದೆ.

ಮುಖವರ್ಣಿಕೆಯ ವಿಧಾನ: ಮೊದಲಿಗೆ ಬೇಸ್(ಗ್ರೌಂಡ್) ಹಾಕಲು ಮೂರು ಬಣ್ಣ(ಬಿಳಿ, ಹಳದಿ, ಕೆಂಪು) ಒಂದೊಂದಾಗಿ ಮಿಶ್ರಣ ಮಾಡಿ ಮೈಬಣ್ಣ ವಾದಾಗ ಮುಖಕ್ಕೆ ತಟ್ಟಬೇಕು. (ಪೂರ್ತಿಮುಖ ಕತ್ತಿನವರೆಗೆ). ಕೆಂಪು ಬಣ್ಣದಿಂದ ಕಣ್ಣಿನ ಭಾಗ, ಗಲ್ಲ, ಹಣೆ, ಮೂಗಿನ ಎರಡು ರಂದ್ರದ ಮೇಲೆ ಶೇಡ್ ಕೊಡಬೇಕು. ಪೌಡರ್ ಹಾಕಿ ಗ್ರೌಂಡ್ ಗಟ್ಟಿ ಮಾಡಬೇಕು.

ಕೆಂಪು, ಬಿಳಿಯನ್ನು ನೀರಿನಲ್ಲಿ ಕಲಸಿ ಉಬ್ಬು ಮರೆಸುವಂತೆ ಹಚ್ಚಬೇಕು. ಕಾಡಿಗೆಯಿಂದ ಕಣ್ಣು, ಉಬ್ಬು, ನಾಮದ ಮಧ್ಯ ರೇಖೆಯನ್ನು ಬೆರೆಯಬೇಕು. ಬಿಳಿ ಎಣ್ಣೆಯಲ್ಲಿ ಕಲಸಿ ನಾಮ, ಕಣ್ಣಿನ ಕೆಳಗೆ, ಗಲ್ಲದಲ್ಲಿ ಮುದ್ರೆ( ಶಂಖ, ಚಕ್ರ)ಬರೆಯಬೇಕು. ಬಿಳಿಯ ಹಿಂದೆ ನೀರಿನಿಂದ ಕೆಂಪು ರೇಖೆ ಎಳೆದರೆ ಪುಂಡು ವೇಷದ ಮುಖವರ್ಣಿಕೆ ಪೂರ್ಣ. ಹಲವು ವಿಧದ ಮುಖ ವರ್ಣಿಕೆ ಗಳಿವೆ. ಅದರಲ್ಲಿ ಪಜಿ ಬಣ್ಣ (ಬರೀ ಎಣ್ಣೆಯಲ್ಲಿ ಕಲಸಿದ ಬಣ್ಣದಿಂದ ಮಾಡುವುದು), ಪ್ರಮುಖವಾಗಿ ಬಣ್ಣದ ವೇಷ ಗಳಿಗೆ ಚಿಟ್ಟಿ (ಅಕ್ಕಿ ಹಿಟ್ಟು, ಸುಣ್ಣವನ್ನು ಪಾಕ ಮಾಡಿ ಮುಳ್ಳಿನಾ ಕೃತಿಯ ಬಣ್ಣದ ರೇಖೆಗಳು) ಇಡುವುದು ಪರಂಪರೆ.

ಬಣ್ಣದ ವೇಷ: ಅತ್ಯಂತ ಆಕರ್ಷಕ ವೇಷ ಬಣ್ಣದವೇಷ. ತಲೆಯಲ್ಲಿ ವೃತ್ತಾಕಾರದ ದೊಡ್ಡ ಕಿರೀಟ (ತಡ್ಪೆ ಕಿರೀಟ ಅಥವಾ ಕೇಸರಿ ತಟ್ಟಿ). ಪ್ರಮುಖ ರಕ್ಕಸ ಪಾತ್ರಗಳು ಬಣ್ಣದವೇಷವೇ ಆಗಿರುತ್ತದೆ. ಯಮ, ಅನುಸಾಲ್ವನಂತಹಾ ದೇವ ಪಾತ್ರಗಳು ಬಣ್ಣದ ವೇಷ ಮಾಡುವು ದುಂಟು. ಅಲ್ಲದೇ ಮುಡಿ ಕಿರೀಟವನ್ನಿಟ್ಟು ಭೀಮ, ದುಶ್ಯಾಸನನಂತಹಾ ಪಾತ್ರಗಳು ಬಣ್ಣದ ವೇಷವೇ. ವರಾಹನಂತಹಾ ಬಣ್ಣದವೇಷಗಳು ತುರಾಯಿ ಕಿರೀಟವನ್ನು ಕಟ್ಟುವ ಪದ್ಧತಿಯೂ ಇದೆ.

ಮುಖ ಮನಸ್ಸಿನ ಕೈಗನ್ನಡಿ: ಇಲ್ಲಿ ಪಾತ್ರಗಳು ಬರೀ ಮುಖವರ್ಣಿಕೆಯಲ್ಲೇ ಮಿಂಚುತ್ತದೆ. ಏಕೆಂದರೆ ಒಂದು ಉತ್ತಮ
ಮುಖ ವರ್ಣಿಕೆಯು ಕಲಾವಿದನ ಪ್ರೌಢಿಮೆ, ಅವನ ಅನುಭವವನ್ನು ಎತ್ತಿತೋರಿಸುತ್ತದೆ. ಮುಖ ಮನಸ್ಸಿನ ಕೈಗನ್ನಡಿ ಎಂಬ
ಹಾಗೆ ಪಾತ್ರದ ಅಂತರಂಗದ ಭಾವನೆಗಳು ವ್ಯಕ್ತವಾಗುವಾಗ ಮುಖವರ್ಣಿಕೆಯ ಮೂಲಕ ಅದು ಇನ್ನಷ್ಟು ಸೂಕ್ಷ್ಮವಾಗಿ
ಪ್ರೇಕ್ಷಕರ ಮನ ತಟ್ಟುತ್ತದೆ. ಬಹುತೇಕ ಯಕ್ಷಗಾನದ ಪಾತ್ರಗಳನ್ನು ಕೇವಲ ಮುಖವರ್ಣಿಕೆ ನೋಡಿಯೇ ನಮಗೆ ಗುರುತಿಸ ಬಹುದು. ಅದರಲ್ಲೂ ಸೂಕ್ಷ್ಮವ್ಯತ್ಯಾಸಗಳನ್ನು ತಿಳಿದುಕೊಂಡರೆ ಇನ್ನಷ್ಟು ಸುಲಭ.

ಪಾತ್ರದಲ್ಲಿ ಯಾರ‍್ಯಾರು?
ನೀಲಿ ಮೈಬಣ್ಣ, ಉದ್ದನಾಮ (ವೈಷ್ಣವ ನಾಮ, ಗೋವಿಂದ ನಾಮ), ಚಕ್ರ ಮುದ್ರೆ ಇದ್ದರೆ ವಿಷ್ಣು ಅಥವಾ ಕೃಷ್ಣ .
ಮೈ ಬಣ್ಣ, ಉದ್ದನಾಮ, ನಾಮದ ಮಧ್ಯೆ ಕಪ್ಪು ರೇಖೆಯಾದರೆ ಕೌರವ, ಕರ್ಣ.
ಅಡ್ಡನಾಮದ ಪಾತ್ರಗಳು ಶಿವ ಭಕ್ತರು (ಮೂರು ಅಡ್ಡ ನಾಮ ಶೈವ ನಾಮ) ಶ್ವೇತ ಕುಮಾರ, ವೀರಮಣಿ ಕೆಲವು ರಕ್ಕಸ ಪಾತ್ರ.
ಅಡ್ಡ ನಾಮದಲ್ಲಿ ಡೈಮೆಂಡ್ ಆಕೃತಿ ಬರೆದರೆ ಅದು ಅಭಿಮನ್ಯು

ಬಣ್ಣದ ವೈವಿಧ್ಯ
ರಕ್ತಬೀಜನ ಪಾತ್ರಕ್ಕೆ ಹಾರ್ಟ್ ಸಿಂಬಲ್ ನಾಮ.
ಕಾಳಿಂಗನ ಪಾತ್ರ ಹಾವಿನ ರೀತಿಯ ಬಣ್ಣ.
ಗರುಡನ ಪಾತ್ರಕ್ಕೆ ಕೊಕ್ಕು.
ಗಜಾಸುರನ ಪಾತ್ರಕ್ಕೆ ಸೊಂಡಿಲು.
ಮಖರಿಯ ಪಾತ್ರಕ್ಕೆ ಬಾಯಿ.
ಕೇಸರಿಯ ಪಾತ್ರಕ್ಕೆ ರೋಮಗಳು.
೧೨ ಸುಳಿಗಳಿರುವ ಹನುಮಂತನ ಪರಂಪರೆ ಬಣ್ಣ.