Wednesday, 11th December 2024

Kids Story Kannada : ಒಳ್ಳೆಯ ಬುದ್ಧಿ ತೋರಿಸಿದ ಭೋಲಾನಿಗೆ ಏನಾಯ್ತು?

Kids Story

ಅಲಕಾ ಕೆ

ಆತನ ಹೆಸರು ಭೋಲಾ. ಹೆಸರಿಗೆ ತಕ್ಕ ಹಾಗೆ ಮೋಸ, ವಂಚನೆಗಳನ್ನು ತಿಳಿಯಂಥ ಮುಗ್ಧ ಆತ. ದಿನವೂ ಕಾಡಿಗೆ ಹೋಗಿ ಕಟ್ಟಿಗೆ ಕಡಿದು ತಂದು, ಅದನ್ನ ಸಂತೆಯಲ್ಲಿ ಮಾರಿ ಬದುಕೋದರಿಂದ ಆತ ಸಂಪಾದನೆ ಮಾಡ್ತಿದ್ದ(Kids Story) . ಆದರೆ ಈ ಕೆಲಸದಿಂದ ಆತನಿಗೆ ಬರುವ ಸಂಪಾದನೆ ಸಾಕಾಗ್ತಾ ಇರಲಿಲ್ಲ. ಮುರುಕು ಗುಡಿಸಲಿನಲ್ಲಿ ಹರುಕು ಬಟ್ಟೆಯಲ್ಲೇ ಜೀವನ ಕಳೀತಾ ಇದ್ದ ಪಾಪ. ತನ್ನ ಹೆಂಡತಿ, ಮಕ್ಕಳಿಗೆ ದಿನವೂ ಹೊಟ್ಟೆ ತುಂಬಾ ಊಟ ಹಾಕಬೇಕು ಅನ್ನೋ ಅವನ ಆಸೆ ಪೂರ್ತಿ ಆಗ್ತಾನೇ ಇರಲಿಲ್ಲ. ಇದರಿಂದ ಬೇಸರವಾಗಿ, ಈ ಊರೇ ಬಿಟ್ಟು ಬೇರೆ ಊರಿಗೆ ಹೋಗೋಣ, ಅಲ್ಲಾದರೂ ಹೊಸ ಕೆಲಸ ಸಿಗಬಹುದು, ಕೈ ತುಂಬಾ ಸಂಪಾದನೆ ಆಗಬಹುದು, ಎಲ್ಲರಿಗೂ ಹೊಟ್ಟೆ ತುಂಬಾ ಊಟ ಸಿಗಬಹುದು ಅನ್ನೋ ಯೋಚನೆ ಅವನಿಗೆ ಬಂತು. ಸರಿ, ಕುಟುಂಬ ಸಮೇತ ಇನ್ನೊಂದೂರಿಗೆ ಹೊರಟ.

ಬೆಳಗಿನಿಂದ ಭೋಲಾ ಮತ್ತವನ ಕುಟುಂಬದವರು- ಅಂದ್ರೆ, ಅವನ ಹೆಂಡ್ತಿ, ಮಕ್ಕಳು ಎಲ್ಲರೂ, ಬಿಸಿಲಲ್ಲೇ ನಡೀತಾ ಇದ್ರು. ಮಧ್ಯಾಹ್ನ ಅನ್ನೋಷ್ಟರಲ್ಲಿ ಎಲ್ಲರಿಗೂ ಸುಸ್ತಾಗಿತ್ತು, ಮಾತ್ರ ಅಲ್ಲ, ಹಸಿವೂ ಆಗಿತ್ತು. ಆದರೆ ತಿನ್ನೋದಕ್ಕೆ ಅವರ ಹತ್ರ ಏನೂ ಇರಲಿಲ್ಲ. ಅಷ್ಟೊತ್ತಿಗಾಗಲೇ ಊರಂಚಿನ ಯಾವುದೋ ಕಾಡಿನ ಹತ್ರ ಬಂದಿದ್ದರು. ಅಲ್ಲಿ ಅವರಿಗೊಂದು ದೊಡ್ಡ ಮರ ಕಾಣಿಸ್ತು. ಹತ್ತಿರದಲ್ಲಿ ಸಣ್ಣದೊಂದು ತೊರೆನೂ ಹರೀತಾ ಇತ್ತು. ಸರಿ, ಆ ಮರದ ಕೆಳಗೇ ಸ್ವಲ್ಪ ಹೊತ್ತು ವಿಶ್ರಾಂತಿ ತಗೊಂಡು, ತೊರೆಯ ನೀರನ್ನೇ ಕುಡಿದು ಹೊಟ್ಟೆ ತುಂಬಿಸ್ಕೊಳ್ಳೋಣ ಅಂತ ಎಲ್ಲರೂ ಯೋಚಿಸಿದರು. ಮರದ ಕೆಳಗೆ ಹಾಗೇ ಕಾಲು ಚಾಚಿ ಮಲಗಿದ ಭೋಲಾ. ಅವನ ಮೇಲೆ ಇರುವಂಥ ಕೊಂಬೆಯಲ್ಲಿ ಬಣ್ಣದ ಹಕ್ಕಿಯೊಂದು ಕೂತಿತ್ತು. ಅದನ್ನೇ ನೋಡ್ತಾ ಇದ್ದ ಭೋಲಾ ಧಡಕ್ಕನೆ ಎದ್ದು ಕೂತ. ಪಕ್ಕದಲ್ಲೇ ಕೂತು ತೂಕಡಿಸುತ್ತಿದ್ದ ಮಕ್ಕಳನ್ನು ಎಬ್ಬಿಸಿದ.

ತನ್ನ ದೊಡ್ಡ ಮಗನಿಗೆ, “ಆ ಗಂಟಲ್ಲಿ ನನ್ನ ಕೊಡಲಿ ಇದೆ. ಅದನ್ನ ತಗೊಂಡು, ಸುತ್ತ ಮುತ್ತ ಇರೋ ಮರಗಳಿಂದ ನಾಲ್ಕು ಒಣಗಿರೋ ಸೌದೆಗಳನ್ನು ಕಡ್ಕೊಂಡು ಬಾ, ಹೋಗು” ಅಂತ ಹೇಳಿದ. ತನ್ನ ಚಿಕ್ಕ ಮಗನಿಗೆ, “ಆ ಮಡಕೆ ತಗೊಂಡೋಗಿ ತೊರೆಯಿಂದ ಸ್ವಲ್ಪ ನೀರು ತಗೊಂಡು ಬಾ” ಅಂದ. ಹೆಂಡತಿ ಹತ್ರ, “ಏನೇ, ಮೂರು ಕಲ್ಲಿಟ್ಟು ಒಲೆ ಹೂಡು. ಹಾಗೇ… ಆ ಬೆಂಕಿ ಕಲ್ಲು ಎಲ್ಲಿದೆ ನೋಡು. ಉಜ್ಜಿ ಸ್ವಲ್ಪ ಬೆಂಕಿ ಮಾಡಿದ್ರೆ ಏನಾದ್ರೂ ಬೇಯಿಸಿಕೊಂಡು ತಿನ್ನಬೋದು” ಅಂತ ಹೇಳಿದ. ಆತನ ಹೆಂಡತಿಗೆ ಅಚ್ಚರಿಯಾಯ್ತು. “ಬೇಯಿಸಿಕೊಂಡು ತಿನ್ನೋದಾ! ಬೇಯಿಸೋಕೆ ನಮ್ಮ ಹತ್ರ ಏನೂ ಇಲ್ಲವಲ್ಲ” ಅಂತ ಬೇಸರ ಮಾಡಿಕೊಂಡಳು. ಮರದ ಮೇಲೆ ಕೂತಿರುವ ಹಕ್ಕಿಯನ್ನು ತೋರಿಸಿ, ʻಶ್ಶ್…‌ʼ ಅಂತ ಬಾಯಿ ಮೇಲೆ ಬೆರಳಿಟ್ಟು ಸನ್ನೆ ಮಾಡಿದ. ಬೆಕ್ಕಿನ ಹಾಗೆ ಚೂರೂ ಗೊತ್ತಾಗದ ಹಾಗೆ ಮೆಲ್ಲನೆ ಮರ ಏರಿ, ಆ ಬಣ್ಣದ ಹಕ್ಕಿಯನ್ನು ಹಿಡಿದೇಬಿಟ್ಟ ಭೋಲಾ. ಅಷ್ಟರಲ್ಲಿ ದೊಡ್ಡ ಮಗ ಸೌದೆ ತಂದಿದ್ದ, ಚಿಕ್ಕವನು ಮಡಿಕೆಯಲ್ಲಿ ನೀರು ತಂದಿದ್ದ. ಹೆಂಡತಿ ಒಲೆ ಹೂಡಿ, ಬೆಂಕಿ ಕಲ್ಲನ್ನು ಉಜ್ಜುತ್ತಾ ಇದ್ದಳು. ಇದನ್ನೆಲ್ಲಾ ನೋಡಿದ ಹಕ್ಕಿಗೆ ಮುಂದೇನಾಗಲಿಕ್ಕೆ ಅನ್ನೋದು ಗೊತ್ತಾಗೋಯ್ತು. ಅದು ಮನುಷ್ಯರಂತೆಯೇ ಧ್ವನಿ ತೆಗೆದು ಮಾತಾಡೋದಕ್ಕೆ ಶುರು ಮಾಡ್ತು.

“ಅಯ್ಯಾ, ಪುಣ್ಯಾತ್ಮ… ನನ್ನನ್ನು ಕೊಂದ್ರೆ ಒಂದು ಮುಷ್ಟಿ ಮಾಂಸಾನೂ ಸಿಕ್ಕಲ್ಲ ನಿಂಗೆ. ಅದರಲ್ಲಿ ನಾಲ್ಕು ಹೊಟ್ಟೆ ತುಂಬೋದು ಹೇಗೆ? ನನ್ನನ್ನು ಸುರಕ್ಷಿತವಾಗಿ ಬಿಟ್ಟರೆ, ನಿನ್ನ ಬದುಕು ಹಸನಾಗುವಂಥ ಉಪಾಯವನ್ನು ಹೇಳ್ತೀನಿ” ಅಂತ ಮುದ್ದು ಮುದ್ದಾಗಿ ಮಾತಾಡ್ತು ಹಕ್ಕಿ. ಮೊದಲಿಗೆ ಅವರೆಲ್ಲರಿಗೂ ಹಕ್ಕಿಯೊಂದು ಮಾತಾಡಬಹುದು ಎನ್ನೋದೇ ಸೋಜಿಗದ ವಿಷಯವಾಗಿತ್ತು. ಆದರೀಗ ಈ ಮಾತಾಡೋ ಹಕ್ಕಿಯನ್ನು ನಂಬೋದು ಹೇಗೆ? ಹಾರೋದಕ್ಕೆ ಬಿಟ್ರೆ, ಸಿಕ್ಕಿದ್ದೂ ಇಲ್ಲದೇ ಹೋದ್ರೆ… ಅಂತ ಹೆಂಡತಿ-ಮಕ್ಕಳಿಗೆ ಆತಂಕ ಶುರುವಾಯ್ತು. ಆದರೆ ಭೋಲಾ ಎಲ್ಲರಲ್ಲೂ ಒಳ್ಳೆಯದನ್ನೇ ಹುಡುಕುವವ, ಮುಗ್ಧ. “ಸರಿ, ನಿನ್ನ ಹೋಗೋದಕ್ಕೆ ಬಿಡ್ತೀನಿ. ಅದಕ್ಕೆ ಪ್ರತಿಯಾಗಿ ನನಗೇನು ಮಾಡ್ತೀಯ ನೀನು?” ಕೇಳಿದ ಆತ.

ಇದನ್ನೂ ಓದಿ: ಯುವತಿಯರನ್ನು ಆಕರ್ಷಿಸಿದ ಓಣಂ ರೆಡಿಮೇಡ್‌ ಡಿಸೈನರ್‌ ವೇರ್ಸ್

“ನಿನ್ನ ಜೀವನಕ್ಕೆ ಅನುಕೂಲ ಆಗುವಂಥ ಏನೋ ಒಂದು ಈ ಮರದ ಪೊಟರೆಯಲ್ಲಿ ಇದೆ. ಆ ಪೊಟರೆ ಎಲ್ಲಿದೆ ಅನ್ನೋದು ತಿಳೀಬೇಕಾದ್ರೆ, ನನ್ನನ್ನ ಹಾರೋದಕ್ಕೆ ಬಿಡಬೇಕು ನೀನು” ಅಂತು ಬಣ್ಣದ ಹಕ್ಕಿ. ಹಕ್ಕಿಯನ್ನು ನೀಲಾಕಾಶಕ್ಕೆ ಬಿಟ್ಟುಬಿಟ್ಟ ಭೋಲಾ. “ಈ ಮರದ ಉತ್ತರ ದಿಕ್ಕಿನ ಕೊಂಬೆಯ ಕೆಳಗೆ ಆ ಪೊಟರೆ ಇದೆ” ಅಂತ ಹೇಳಿದ ಹಕ್ಕಿ ಹಾರಿ ಮಾಯವಾಯ್ತು. ಎಲ್ಲರೂ ಲಗುಬಗೆಯಿಂದ ಹಕ್ಕಿ ಹೇಳಿದ ದಿಕ್ಕಿನತ್ತ ಓಡಿದ್ರು. ಅಲ್ಲೊಂದು ಪೊಟರೆ ಇದ್ದಿದ್ದು ನಿಜವಾಗಿತ್ತು. ಒಳಗೆ ಫಳಫಳಾಂತ ಹೊಳೆಯುವ ಒಂದು ರತ್ನದ ಹಾರವಿತ್ತು! ʻಅರೆ! ಈ ಹಾರ ಇಲ್ಲಿಗೆ ಹೇಗೆ ಬಂತು?ʼ ಅಂತ ಯೋಚಿಸಿದ ಭೋಲಾ. ಎರಡು ದಿನಗಳ ಹಿಂದೆ ಊರಲ್ಲಿ ವ್ಯಕ್ತಿಯೊಬ್ಬ ಡಂಗುರ ಸಾರ್ತಾ ಇದ್ದಿದ್ದು ಆತನಿಗೆ ನೆನಪಾಯ್ತು.

“ನಮ್ಮ ರಾಜ್ಯದ ಮಹಾರಾಣಿಯವರ ರತ್ನದ ಹಾರ ಕಾಣೆಯಾಗಿದೆ. ಅದನ್ನು ಹುಡುಕಿ ಕೊಟ್ಟವರಿಗೆ ಸಾವಿರ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡಲಾಗುವುದು ಅಂತ ಶ್ರೀಮನ್‌ ಮಹಾರಾಜರು ತಿಳಿಸಿದ್ದಾರೆ… ಕೇಳ್ರಪ್ಪೊ ಕೇಳಿ…” ಅಂತ ಆ ವ್ಯಕ್ತಿ ಡಂಗುರ ಸಾರ್ತಾ ಇದ್ದ.

“ಹೌದಲ್ಲವೇ!! ಇದನ್ನ ನೋಡಿದರೆ ಮಹಾರಾಣಿಯವರ ರತ್ನದ ಹಾರ ಇದ್ದರೂ ಇರಬಹುದು. ಕೆಂಪು, ನೀಲಿ, ಹಸಿರು ಬಣ್ಣದ ರತ್ನಗಳು ಕಣ್ಣು ಕೋರೈಸ್ತಾ ಇರೋ ಇಂಥ ಹಾರ, ಇನ್ಯಾರ ಹತ್ತಿರ ಇರೋದಕ್ಕೆ ಸಾಧ್ಯ” ಅಂತ ಯೋಚಿಸಿದ ಭೋಲಾ, ಆ ಹಾರದ ಜೊತೆಗೆ ತನ್ನ ಕುಟುಂಬವನ್ನೂ ಕರೆದುಕೊಂಡು ನೇರ ಅರಮನೆಗೆ ಹೋದ. ಮಹಾರಾಜರ ಆಸ್ಥಾನಕ್ಕೆ ತೆರಳಿ, ಅಲ್ಲಿ ಆ ಹಾರವನ್ನು ಒಪ್ಪಿಸಿದ. ರಾಜನ ಪಕ್ಕದ ಸಿಂಹಾಸನದಲ್ಲಿ ಕುಳಿತಿದ್ದ ರಾಣಿ, ಅದು ತನ್ನದೇ ಹಾರ ಹೌದು ಅಂತ ಒಪ್ಪಿಕೊಂಡಳು. ಈ ಹಾರ ಎಲ್ಲಿ ಸಿಕ್ಕಿತು ಅಂತ ಮಹಾರಾಜ ವಿಚಾರಿಸಿದಾಗ, ತನಗೆ ಮಾತಾಡುವ ಹಕ್ಕಿ ಸಿಕ್ಕ ಕಥೆಯನ್ನೆಲ್ಲ ಭೋಲಾ ಹೇಳಿದ. ಆದರೆ ಮಾತಾಡೋ ಹಕ್ಕಿ ಎಲ್ಲಾದರೂ ಇರೋದಕ್ಕೆ ಸಾಧ್ಯಾನಾ? ರಾಜನಿಗೆ ಸಂಶಯ ಬಂತು. ತನ್ನ ಸೈನಿಕರನ್ನು ಕರೆದು, ಭೋಲಾ ಹೇಳಿದ ಊರಂಚಿನ ಕಾಡಿನಲ್ಲಿ ತೊರೆಯ ಪಕ್ಕದಲ್ಲಿ ಅಂಥದ್ದೊಂದು ಮರ, ಅದರ ಉತ್ತರ ದಿಕ್ಕಿನಲ್ಲೊಂದು ಪೊಟರೆ ಇದೆಯೇ ಅನ್ನೋದನ್ನ ನೋಡ್ಕೊಂಡು ಬನ್ನಿ ಅಂತ ಕಳಿಸಿದ. ಹೋಗಿ ಬಂದ ಸೈನಿಕರು, ಆತ ಹೇಳಿದ ಹಾಗೆಯೇ ಮರ ಮತ್ತು ಮರದಲ್ಲಿ ಪೊಟರೆ ಇದೆ ಅಂತ ತಿಳಿಸಿದರು.

ಭೋಲಾನ ಒಳ್ಳೆಯತನವನ್ನು ಮೆಚ್ಚಿಕೊಂಡ ರಾಜ, ಡಂಗುರ ಹೊಡೆಸಿದ ಹಾಗೆಯೇ ಆತನಿಗೆ ಸಾವಿರ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡಿದ. ಮಾತ್ರವಲ್ಲ, ತನ್ನರಮನೆಯಲ್ಲಿ ಆತನಿಗೊಂದು ಕೆಲಸವನ್ನೂ ನೀಡಿದ.