Saturday, 14th December 2024

ಅದಾನಿ: ಸರಕಾರ ಪ್ರತಿಕ್ರಿಯಿಸಲಿ

ಭಾರತದ ಅತಿ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ವಾರ ಅದಾನಿ ಸಾಮ್ರಾಜ್ಯದ ಮೇಲೆ ಅಮೆರಿಕ ಮೂಲದ ಹಿಂಡನ್‌ಬರ್ಗ್ ರಿಸರ್ಚ್ ದಾಳಿ ನಡೆಸಿದ ನಂತರ, ಸಮೂಹದ ಎಲ್ಲ ೧೦ ಕಂಪನಿಯ ಷೇರುಗಳ ಮಾರುಕಟ್ಟೆ ಮೌಲ್ಯವು ಅರ್ಧ ದಷ್ಟು ಕುಸಿದಿದೆ.

ಹೂಡಿಕೆದಾರರು ೧೦ ಲಕ್ಷ ಕೋಟಿ ರೂಪಾಯಿಗಳ ಬೃಹತ್ ನಷ್ಟದೊಂದಿಗೆ ಚಿಂತಾ ಕ್ರಾಂತರಾಗಿ ಕುಳಿತಿದ್ದಾರೆ. ಕಳೆದ ಏಳು ವಹಿವಾಟು ಅವಧಿಗಳಲ್ಲಿ, ಎಲ್ಲ ೧೦ ಅದಾನಿ ಗ್ರೂಪ್ ಷೇರುಗಳ ಮಾರುಕಟ್ಟೆ ಬಂಡವಾಳೀಕರಣವು ಶೇ. ೫೧ಕ್ಕಿಂತ ಕಡಿಮೆ ಯಾಗಿ ರೂ ೯.೩೧ ಲಕ್ಷ ಕೋಟಿಗೆ ತಲುಪಿದೆ.

ಇದು ನಿಜಕ್ಕೂ ಆಘಾತಕಾರಿ ಸಂಗತಿ. ಸಾರ್ವಜನಿಕ ಸಂಸ್ಥೆಗಳಾದ ಎಸ್‌ಬಿಐಹಾಗೂ ಎಲ್‌ಐಸಿಗಳಲ್ಲೂ ಅದಾನಿ  ಷೇರುಗಳಿರು ವುದು ಸಾರ್ವಜನಿಕರಲ್ಲಿ ಸಹಜವಾಗಿ ಆಂತಂಕ ಮೂಡಿಸಿದೆ. ಕಳೆದರೆಡು ದಿನಗಳಿಂದ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಸಂಸತ್‌ನಲ್ಲಿ ಇದೇ ವಿಚಾರಕ್ಕೆ ಕೋಲಾಹಲ ಎಬ್ಬಿಸಿವೆ. ಅದಾನಿಗೂ ಆಡಳಿತ ಪಕ್ಷಕ್ಕೂ ಅನ್ಯೋನ್ಯ ಸಂಬಂಧವಿದೆ ಎಂದು ಆರೋಪಿಸಿವೆ. ಎಸ್‌ಬಿಐ ಹಾಗೂ ಎಲಐಸಿ ಕಚೇರಿಗಳ ಮುಂದೆ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಈ ಮೂಲಕ ಅದಾನಿ ವಿವಾದವು ದೇಶಾದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಬೆಳವಣಿಗೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಹವಣಿಸುತ್ತಿರುವುದು ಸ್ಪಷ್ಟ. ಹಾನಿಯನ್ನು ನಿಯಂತ್ರಿಸಲು ಸ್ವತಃ ಅದಾನಿ ಪ್ರಯತ್ನಿಸುತ್ತಿzರೆ. ಆದರೆ, ಈ ಹಾನಿ ಯು ಪ್ರತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಂಚನೆ-ಸಂಬಂಧಿತ ಆರೋಪಗಳ ನಂತರ ಅದಾನಿ ಎಂಟರ್ಪ್ರೈಸಸ್ ಅನ್ನು ಅದರ ಇಎಸ್ಜಿ ಸೂಚ್ಯಂಕದಿಂದ ತೆಗೆದುಹಾಕುವುದಾಗಿ ಡೌ ಜೋನ್ಸ್ ಸಸ್ಟೈನಬಿಲಿಟಿ ಇಂಡೆಕ್ಸ್
ಸಹ ಹೇಳಿರುವುದು ಮಾರುಕಟ್ಟೆಯ ಮೇಲೆ ಇನ್ನಷ್ಟು ಗಾಢ ಪರಿಣಾಮ ಬೀರುವುದು ನಿಶ್ಚಿತ.

ಏನೇ ಆದರೂ ಕಂಪನಿಗಳ ಷೇರುಗಳಲ್ಲಿನ ತೀವ್ರ ಕುಸಿತದ ಹಿನ್ನೆಲೆಯಲ್ಲಿ ಹೂಡಿಕೆದಾರರನ್ನು ರಕ್ಷಿಸಬೇಕಿದೆ. ಇವೆಲ್ಲದರ ನಡುವೆ
ಅಂತಾರಾಷ್ಟ್ರೀಯ ಬ್ಯಾಂಕರ್‌ಗಳಾದ ಕ್ರೆಡಿಟ್ ಸ್ಯೂಸ್ಸೆ ಮತ್ತು ಸಿಟಿಗ್ರೂಪ್ ಮಾರ್ಜಿನ್ ಲೋನ್‌ಗಳಿಗೆ ಅದಾನಿ ಬ್ರಾಂಡ್‌ಗಳಿಗೆ ಮೇಲಾಧಾರವಾಗಿ ಸ್ವೀಕರಿಸುವುದನ್ನು ನಿಲ್ಲಿಸಿರುವುದು ತುಸು ಗಂಭೀರ ಸಂಗತಿ. ವರದಿಯ ಬಳಿಕ ಸಹಜವಾಗಿ ಅದಾನಿ ಅವರ ಆಸ್ತಿ ಮೌಲ್ಯದಲ್ಲಿ ತೀವ್ರ ಕುಸಿತವಾಗಿದೆ. ಅದಾನಿ ಅವರು ಜಗತ್ತಿನ ಮೂವರು ಅತೀ ಶ್ರೀಮಂತರ ಪಟ್ಟಿಯಲ್ಲಿ ಇದ್ದರು. ಕಳೆದ ವಾರ ವರದಿ ಬಂದ ನಂತರ ಅವರು ಜಗತ್ತಿನ ೨೦ ಶ್ರೀಮಂತರ ಪಟ್ಟಿಯಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.

ದೇಶ ಆರ್ಥಿಕ ಪ್ರಗತಿಯ ಹಾದಿಯಲ್ಲಿರುವಾಗ ಇಂಥ ಬೆಳವಣಿಗೆಗಳು ಅನಪೇಕ್ಷಣೀಯ. ಕೇಂದ್ರ ಸರಕಾರ, ಅದಾನಿ ಪಕ್ಷಪಾತಿ
ಎಂಬ ಆರೋಪ ಮೊದಲಿಂದಲೂ ಪ್ರತಿಪಕ್ಷಗಳಿಂದ ನಡೆದೇ ಬಂದಿದೆ. ಈ ಹಿನ್ನೆಲೆಯಲ್ಲಿ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಕೇಂದ್ರ ಸರಕಾರ ಮೌನ ಮುರಿದು ತುರ್ತು ಪ್ರತಿಕ್ರಿಯೆಗೆ ಮುಂದಾಗಬೇಕಾದುದು ಅಗತ್ಯ. ಇದು ಅನಗತ್ಯ ಗೊಂದಲ, ವದಂತಿಗಳನ್ನು ತಡೆಯುತ್ತದಲ್ಲದೇ, ಸಾರ್ವಜನಿ ಕರಲ್ಲಿನ ಗೊಂದಲಕ್ಕೆ ಪರಿಹಾರ ನೀಡುತ್ತದೆ.

 
Read E-Paper click here