Wednesday, 11th December 2024

ವಾಯು ಮಾಲಿನ್ಯ ವರದಿ ಆತಂಕಕಾರಿ

ವಾಯುಮಾಲಿನ್ಯದ ಕುರಿತು ವಿಶ್ವಸಂಸ್ಥೆಯು 117 ದೇಶಗಳ 6000 ನಗರಗಳಲ್ಲಿ ಅಧ್ಯಯನವೊಂದನ್ನು ನಡೆಸಿ, ಸೋಮವಾರ ವರದಿ ಬಿಡುಗಡೆ ಮಾಡಿದೆ.

ಆ ಪ್ರಕಾರ ವಿಶ್ವದಲ್ಲಿ ಶೇ.99ರಷ್ಟು ಮಂದಿ ಅತಿಹೆಚ್ಚು ಮಾಲಿನ್ಯಕಾರಕ ಗಾಳಿಯನ್ನು ಉಸಿರಾಡುತ್ತಿದ್ದಾರೆ. ವಾಯು ಮಾಲಿನ್ಯದಿಂದ ಪ್ರತಿ ವರ್ಷ ವಿಶ್ವದಾದ್ಯಂತ 70 ಲಕ್ಷ ಮಂದಿ ಅಕಾಲಿಕವಾಗಿ ಬಲಿಯಾಗುತ್ತಿದ್ದಾರೆ ಎನ್ನಲಾಗಿದೆ. ನಿಜಕ್ಕೂ ಇದು ಆತಂಕಕಾರಿ ವಿಷಯ ವಾಗಿದ್ದು, ವಾಯು ಮಾಲಿನ್ಯ ಮತ್ತು ಹವಾಮಾನ ಬದಲಾವಣೆ ಸಮಸ್ಯೆಗಳ ನಿಯಂತ್ರಣಕ್ಕಾಗಿ ಮಾಲಿನ್ಯಕಾರವಾದ ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ತ್ವರಿತವಾಗಿ ತಗ್ಗಿಸಬೇಕಿದೆ.

ಕಳೆದ ವರ್ಷ ಲಾಕ್ ಡೌನ್ ಮತ್ತು ಪ್ರಯಾಣದ ಮೇಲೆ ವಿಧಿಸಿದ ನಿರ್ಬಂಧಗಳಿಂದ ವಾಯು ಗುಣಮಟ್ಟವು ಕೊಂಚ ಸುಧಾರಣೆ ಕಂಡಿತ್ತು. ಆದರೆ, ನಂತರದ ದಿನಗಳಲ್ಲಿ ಮತ್ತೆ ವಾಯುಮಾಲಿನ್ಯ ಹೆಚ್ಚಾಗಿದೆ. ಜಗತ್ತಿನ ಪ್ರತಿಯೊಂದು ದೇಶದ ನಾಗರಿಕರು ವಾಯು ಮಾಲಿನ್ಯದ ಸಮಸ್ಯೆಗೆ ಸಿಲುಕು ತ್ತಿದ್ದಾರೆ. ಬಡ ದೇಶಗಳಲ್ಲಿ ವಾಯು ಮಾಲಿನ್ಯದ ಸಮಸ್ಯೆ ಇತರ ದೇಶಗಳಿಗಿಂತ ತುಸು ಹೆಚ್ಚಾಗಿಯೇ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ 20 ವರ್ಷಗಳಲ್ಲಿ ಉಸಿರಾಡಲೂ ಶುದ್ಧ ಗಾಳಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುವ ಆತಂಕವಿದೆ. ಘನಮೀಟರ್ ಗಾಳಿಯಲ್ಲಿರುವ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆಯನ್ನು ಆಧರಿಸಿ ಗಾಳಿಯ ಗುಣಮಟ್ಟವನ್ನು ಆರು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಈ ಕಣಗಳ ಸಂಖ್ಯೆ ಕಡಿಮೆ ಆದಷ್ಟೂ ಗಾಳಿಯ ಗುಣಮಟ್ಟ ಉತ್ತಮವಾಗಿರುತ್ತದೆ.

ಪ್ರತಿ ಘನಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ (ಪಿ.ಎಂ) ಸಂಖ್ಯೆ ೫೦ರಷ್ಟಿದ್ದರೆ, ಗಾಳಿಯ ಗುಣಮಟ್ಟ ಉತ್ತಮ ಎನ್ನಲಾಗುತ್ತಿದೆ. ಈ ಕಣಗಳ ಸಂಖ್ಯೆ 401ರಿಂದ 500ರವರೆಗೆ ಇದ್ದರೆ ಅತಿ ಅಪಾಯಕಾರಿ ಎಂದು ವರ್ಗೀಕರಿಸ ಲಾಗಿದೆ. ಅಧ್ಯಯನಕ್ಕೊಳಪಟ್ಟ 6000 ನಗರಗಳಲ್ಲಿ ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆ 500 ಆಸುಪಾಸಿನಲ್ಲಿದೆ. ಹೀಗಾಗಿ ಜಗತ್ತಿನ ಎಲ್ಲ ರಾಷ್ಟ್ರಗಳು ನಿಸರ್ಗಕ್ಕೆ ವಿರೋಧ ವಾಗಿರುವ ಕೈಗಾರಿಕೆಗಳನ್ನು ನಿಯಂತ್ರಿಸಬೇಕಿದೆ.

ಜನರು ಕೂಡ ಅನಗತ್ಯ ವಾಹನ ಬಳಕೆ, ಪ್ಲಾಸ್ಟಿಕ್ ಬಳಕೆಗಳನ್ನು ಬಿಡಬೇಕಿದೆ. ಈಗ ಆಗಿರುವ ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರಲು ಅರಣ್ಯೀ ಕರಣದಿಂದ ಮಾತ್ರ ಸಾಧ್ಯ. ಹೀಗಾಗಿ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸುವುದರಿಂದ ವಾಯುಮಾಲಿನ್ಯ ನಿಯಂತ್ರಣ ಮಾಡಬೇಕಿದೆ. ಇಲ್ಲವಾದಲ್ಲಿ ಮಲೀನಗೊಂಡ ಪರಿಸರದಲ್ಲಿಯೇ ಬದುಕಿ ಸಾಯಬೇಕಾದ ಪರಿಸ್ಥಿತಿ ಎದುರಾ ದೀತು.