Saturday, 14th December 2024

ನಮ್ಮ ಕ್ಲಿನಿಕ್‌ನಲ್ಲಿ ಆಯುರ್ವೇದ ವೈದ್ಯರಿರಲಿ

ರಾಜ್ಯ ಸರಕಾರ ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಿದ ನಮ್ಮ ಕ್ಲಿನಿಕ್ ಸ್ಥಾಪನೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡಗಳ ಗುರುತಿಸ ಲಾಗಿದ್ದು, ಮೇ ತಿಂಗಳಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ಸಾಧ್ಯತೆ ಇದೆ. ನಗರದಲ್ಲಿ ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಸಣ್ಣ ಪ್ರಮಾಣದ ಚಿಕಿತ್ಸೆಗೆ ಅನುಕೂಲವಾಗಲು ೨೪೩ ಕಡೆ ನಮ್ಮ ಕ್ಲಿನಿಕ್ ಆರಂಭಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ನಲ್ಲಿ ಘೊಷಿಸಿದ ಬೆನ್ನಲ್ಲೇ ಬಿಬಿಎಂಪಿ ಆರೋಗ್ಯ ವಿಭಾಗ ನಗರದ ವಿವಿಧೆಡೆ 243 ಕಟ್ಟಡಗಳನ್ನು ಗುರುತಿಸಿದೆ.

ಈಗಾಗಲೇ ಪ್ರತಿ 50 ಸಾವಿರ ಜನಸಂಖ್ಯೆಗೆ ೧ರಂತೆ ೧೬೦ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸು ತ್ತಿವೆ. ಇನ್ನಷ್ಟು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ಪ್ರತಿ ೧೦,೦೦೦ ಜನರಿಗೆ ಒಂದರಂತೆ ನಮ್ಮ ಕ್ಲಿನಿಕ್ ತೆರೆಯಲಾಗುತ್ತಿದೆ. ಇವು ನಗರ ಪ್ರಾಥಮಿಕ ಆರೋಗ್ಯ ಉಪಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಮುಖ್ಯವಾಗಿ ಕೊಳೆಗೇರಿಗಳು, ಕಾರ್ಮಿಕ ಸ್ಥಳಗಳು, ವ್ಯಾಪಾರಿ ಸ್ಥಳ ಸೇರಿ ಹೆಚ್ಚಿನ ಜನಸಂದಣಿ ಪ್ರದೇಶಗಳಲ್ಲಿ ಸ್ಥಾಪಿಸಲು ಸರಕಾರ ನಿರ್ದೇಶಿಸಿರುವುದು ಸ್ವಾಗತಾರ್ಹ.

ಆದರೆ ಒಂದು ಕ್ಲಿನಿಕ್‌ನಲ್ಲಿ ವೈದ್ಯರು, ಶುಶ್ರೂಷಕಿ, ಫಾರ್ಮಾಸಿ, ಲ್ಯಾಬ್ ಟೆಕ್ನಿಷಿಯನ್, ಕ್ಲರ್ಕ್ ಹಾಗೂ ಗ್ರೂಪ್ ‘ಡಿ’ ನೌಕರ ಸೇರಿ ೬ ಮಂದಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ ಅಲೋಪಥಿ ವೈದ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು ಆಯುರ್ವೇದ ವೈದ್ಯರ ನೇಮಕಕ್ಕೆ ಅವಕಾಶ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ನಮ್ಮ ಆಹಾರ ಪದ್ಧತಿಯೇ ನಮ್ಮ ಆರೋಗ್ಯದ ಗುಟ್ಟಾಗಿರುವುದರಿಂದ ಜನರಲ್ಲಿ ಆಹಾರ ಅಭ್ಯಾಸದ ಬಗ್ಗೆ, ಸಿರಿಧಾನ್ಯಗಳ ಉಪ ಯೋಗದ ಬಗ್ಗೆ, ಔಷಧಿಯ ಸಸ್ಯಗಳ ಬಗ್ಗೆ, ಆಹಾರವೇ ಔಷಧ, ಅಡುಗೆ ಮನೆಯೇ ಕ್ಲಿನಿಕ್ ಎನ್ನುವ ಭಾರತೀಯ ಆಹಾರಶಾಸ್ತ್ರ ಪರಿಕಲ್ಪನೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.

ಈ ದಿಸೆಯಲ್ಲಿ ತಜ್ಞರ ಸಲಹೆ ಪಡೆದು ಬಿಎಎಂಎಸ್ ಮತ್ತು ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿ ಪಡೆದ ವೈದ್ಯರನ್ನು
ನೇಮಕ ಮಾಡಿಕೊಳ್ಳಬೇಕಿದೆ. ಈ ಮೂಲಕ, ಆಯುರ್ವೇದ ಕಲಿತ ವೈದ್ಯರ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ.