ವರ್ಷಾರಂಭದಿಂದಲೂ ರಾಜ್ಯದಲ್ಲಿ ಧರ್ಮ ಸಮರ ನಡೆಯುತ್ತಿದೆ. ಅದಕ್ಕೆ ಯಾವ ತಾರ್ಕಿಕ ಅಂತ್ಯವೂ ಸಿಗುವಂತೆ ಕಾಣುತ್ತಿಲ್ಲ. ರಾಜ್ಯದ
ಶಾಂತಿ ಸುಭಿಕ್ಷೆಯನ್ನು ಗಮನದಲ್ಲಿರಿಸಿ ತೆಗೆದುಕೊಳ್ಳಲೇ ಬೇಕಾದ ಕೆಲವು ಕಠಿಣ ಕ್ರಮಗಳನ್ನು ರಾಜ್ಯ ಸರಕಾರ ತೆಗೆದುಕೊಳ್ಳುತ್ತಿಲ್ಲ. ತೆಗೆದುಕೊಂಡರೂ ಅದು ತಡವಾಗುತ್ತಿದೆ. ಈಗ ಮುನ್ನೆಲೆಗೆ ಬಂದಿರುವ ಆಜಾನ್ ವಿವಾದದ ವಿಷಯದಲ್ಲೂ ಸರಕಾರ ಬಹಳ ತಡವಾಗಿ ಎಚ್ಚೆತ್ತುಕೊಂಡು ಮಂಗಳವಾರ ಕೆಲವು ನಿಯಮಗಳನ್ನು ಜಾರಿ ಮಾಡಿದೆ.
ಅದರ ಪ್ರಕಾರ ರಾಜ್ಯದಲ್ಲಿ ಧ್ವನಿವರ್ಧಕ ಅಳವಡಿಸಲು ಎಲ್ಲ ಧಾರ್ಮಿಕ ಕೇಂದ್ರಗಳು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಒಂದೊಮ್ಮೆ ಈಗಾಗಲೇ ಅಕ್ರಮವಾಗಿ ಧ್ವನಿವರ್ಧಕ ಅಳವಡಿಸಿದ್ದರೆ ಅದಕ್ಕೆ ಅನುಮತಿ ಪಡೆಯಲು 15 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು. ಧ್ವನಿವರ್ಧಕಕ್ಕೆ ಅನುಮತಿ ನೀಡಲು ಸಮಿತಿಯೊಂದನ್ನು ರಚಿಸುವ ನಿರ್ಣಯವಾಗಿದೆ. ಸುಪ್ರಿಂ ಕೋರ್ಟ್ ಆದೇಶ ಈಗಲೂ ಪಾಲನೆ ಆಗದಿದ್ದರೆ ನಿರ್ದಾ ಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಸರಕಾರ ಹೇಳಿದೆ.
ಆದರೆ ಇದನ್ನೆಲ್ಲ ಜಾರಿಗೆ ತರುವಲ್ಲಿ ಎದುರಿಸಬಹುದಾದ ಸಂದಿಗ್ಧ ಪರಿಸ್ಥಿತಿಗಳನ್ನು ಸರಕಾರ ಹೆಜ್ಜೆ ಹಿಮ್ಮೆಟ್ಟದೆ ಎದುರಿಸಬೇಕಿದೆ. ಸರಕಾರದ ಕೆಲವು ದ್ವಂದ್ವ ನಿಲುವು ಗಳನ್ನು ನೋಡಿದರೆ ಅದು ಹೆಜ್ಜೆ ಹಿಮ್ಮೆಟ್ಟದೆ ಇದ್ದೀತೆ ಎಂಬ ಅನುಮಾನ ಯಾರಿಗೂ ಕಾಡೀತು. ಇಂಥ ಪರಿಸ್ಥಿತಿಯನ್ನು ಸರಕಾರ ಸಾಂವಿಧಾನಿಕ ನೆಲೆಗಟ್ಟಿನ ಮೇಲೆ ಎದುರಿಸಿದಾಗ ಮಾತ್ರ ಅದು ರಾಜ್ಯದಲ್ಲಿ ಸುಪ್ರಿಂ ಕೋರ್ಟ್‌ನ ಆದೇಶವನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ.
ನ್ಯಾಯಾಲಯದ ಆದೇಶವನ್ನು ಮೀರುವ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲಿ ಸಿದ್ಧಾಂತ, ಧರ್ಮ ಮತ್ತು ಮತೀಯ ವಿಚಾರ ಗಳು ಅಡ್ಡ ನಿಲ್ಲಬಾರದು. ಆಯಾಯಾ ಸಮಯಕ್ಕೆ ನಿಗದಿ ಪಡಿಸಿದ ಡೆಸಿಬಲ್ ಕ್ರಮಾಂಕ ಮೀರಿ ಧ್ವನಿವರ್ಧಕ ಶಬ್ದ ಹೊರ ಹಾಕಿದರೆ ಅದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪೊಲೀಸರ ಗಮನಕ್ಕೆ ತರುವ ಜವಾಬ್ದಾರಿಯನ್ನು ಪ್ರಜೆಗಳೂ ಹೊತ್ತುಕೊಳ್ಳ ಬೇಕಿದೆ. ಈ ವಿಷಯ ಕರ್ನಾಟಕಕ್ಕೆ ಸೀಮಿತವಲ್ಲ.
ಸಂವಿಧಾನದಡಿ ಆಡಳಿತ ನಡೆಸುತ್ತಿರುವ ಎಲ್ಲ ರಾಜ್ಯಗಳ ಬದ್ಧ ಕರ್ತವ್ಯ ಧ್ವನಿವರ್ಧಕಕ್ಕೆ ಸಂಬಂಧಪಟ್ಟ ನ್ಯಾಯಾಲಯದ ಆದೇಶವನ್ನು ಹಿಂದುಮುಂದು ನೋಡದೆ ಪಾಲನೆಗೆ ಹಚ್ಚುವುದು.