Wednesday, 9th October 2024

ಈ ಸ್ಥಿತಿಯಲ್ಲಿ ಬಂದ್ ಅಗತ್ಯವೇ?

ಕರ್ನಾಟಕ ಸೇರಿದಂತೆ ದೇಶಾದ್ಯಂತ ಕರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಮೂರನೇ ಅಲೆಯ ಆತಂಕವಿದ್ದರೂ, ಲಸಿಕಾ ಅಭಿಯಾನ ಭಾರಿ ಪ್ರಮಾಣದಲ್ಲಿ ನಡೆಯುತ್ತಿದ್ದು, ಕರೋನಾದಿಂದ ಮೃತಪಡುವವರ ಸಂಖ್ಯೆಯೂ ಇಳಿಮುಖವಾಗಿರುವು ದರಿಂದ ಕೊಂಚ ನೆಮ್ಮದಿಯಿದೆ.

ಆದರೆ ಸೋಂಕು ಕಡಿಮೆಯಾಗಿದೆ ಎನ್ನುವ ಮಾತ್ರಕ್ಕೆ ಮೈಮರೆಯಬೇಕು ಎಂದಲ್ಲ. ಈ ಎಚ್ಚರಿಕೆಯನ್ನು ಮೀರಿ, ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿವೆ. ಸೋಂಕು ಇಳಿಕೆಯಾಗಿ ಜನ ಜೀವನ ಸಹಜ ಸ್ಥಿತಿಗೆ ಬರುತ್ತಿರುವ ಈ ಹಂತದಲ್ಲಿ ಈ ರೀತಿಯ ಪ್ರತಿಭಟನೆ, ರ‍್ಯಾಲಿಗಳು ಸೋಂಕನ್ನು ಹಬ್ಬುವ ಸಾಧ್ಯತೆ ಹೆಚ್ಚಿರುತ್ತದೆ. ಈ ಪ್ರತಿಭಟನೆಗಳೇ ‘ಸೂಪರ್ ಸ್ಪ್ರೆಡರ್’ ಆದರೂ ಅಚ್ಚರಿ ಇಲ್ಲ. ಆದ್ದರಿಂದ ಈ ಹಂತದಲ್ಲಿ ರೈತರು ಭಾರತ್ ಬಂದ್ ಮಾಡಬೇಕಿತ್ತೇ? ಎನ್ನುವ ಪ್ರಶ್ನೆ ಗಳು ಎದ್ದಿವೆ.

ಕರೋನಾ ಸೋಂಕು ಹಬ್ಬುವುದು ಒಂದು ಭಾಗವಾದರೆ, ಈಗಷ್ಟೇ ವ್ಯಾಪಾರ, ವಹಿ ವಾಟು, ಶಾಲೆ-ಕಾಲೇಜುಗಳು ಆರಂಭಗೊಳ್ಳುತ್ತಿವೆ. ಕಳೆದ 18-20 ತಿಂಗಳು ಗಳಿಂದ ಕರೋನಾ ಕಾರಣಕ್ಕೆ ವ್ಯಾಪಾರ ವಹಿವಾಟು ಸಂಪೂರ್ಣ ನೆಲೆ ಕಚ್ಚಿವೆ. ಈಗ ಆರಂಭಗೊಂಡು ವ್ಯಾಪಾರ ಸಹಜ ಸ್ಥಿತಿಗೆ ಬರುತ್ತಿದ್ದು, ಪುನಃ ಬಂದ್ ಎಂದರೆ, ನಷ್ಟ ಆಗುವುದು ಖಚಿತ.

ಈ ಕಾರಣಕ್ಕಾಗಿಯೇ ಬಹುತೇಕ ಸಂಘಟನೆಗಳು, ಕೇವಲ ‘ನೈತಿಕ’ ಬೆಂಬಲಕ್ಕೆ ಸೀಮಿತವಾಗಿವೆ. ಕೇಂದ್ರ ಸರಕಾರದ ಕೃಷಿ ಕಾಯಿದೆ ಗಳನ್ನು ವಿರೋಧಿಸಿ ಹಾಗೂ ವಾಪಸು ಪಡೆಯಲು ಬಂದ್ ಮಾಡುತ್ತಿದ್ದಾರೆ. ಆದರೆ ಈಗಾಗಲೇ ಉಭಯ ಸದನದಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಪಾಸ್ ಆಗಿರುವ ಈ ಬಿಲ್ ಅನ್ನು ಹಿಂಪಡೆಯುವುದು ಸುಲಭವಲ್ಲ. ಸದ್ಯ ಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ ಎನ್ನುವುದು ರೈತರಿಗೂ ತಿಳಿದಿರುವ ವಿಚಾರ. ಆದರೂ ಪ್ರತಿಷ್ಠೆಗೆ ಬಿದ್ದು ಈ ರೀತಿಯ ಬಂದ್ ಮಾಡುವುದರಿಂದ, ಕರೋನಾ ಕಾಲದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದನ್ನು ಮರೆಯಬಾರದು.