Friday, 13th December 2024

ಸ್ಥಳೀಯ ಭಾಷೆಗಳಲ್ಲೇ ಬ್ಯಾಂಕಿಂಗ್ ಸೇವೆ ಲಭ್ಯವಾಗಲಿ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕು ಎಂದು ಸಂಸದೀಯ ಸಮಿತಿಯು ರಾಷ್ಟ್ರಪತಿಗೆ ವರದಿ ಸಲ್ಲಿಸಿದ್ದು ಸ್ವಾಗತಾರ್ಹ. ಆದರೆ ಅದಕ್ಕೂ ಮೊದಲು ಬ್ಯಾಂಕಿಂಗ್ ಸೇವೆಗಳಲ್ಲಿ ಸ್ಥಳೀಯ ಭಾಷೆ ಬಳಕೆ ಜಾರಿ ಮಾಡಬೇಕಾದ ಅಗತ್ಯವಿದೆ. ಈ ಕುರಿತು ಹಲವು ವರ್ಷಗಳಿಂದಲೂ ಚರ್ಚೆಯಾಗುತ್ತಿದ್ದರೂ, ಈವರೆಗೂ ಅನುಷ್ಠಾನವಾಗಿಲ್ಲ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳ ಸಿಬ್ಬಂದಿ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಸೇವೆ ಒದಗಿಸದ ಕಾರಣಕ್ಕೆ ಗ್ರಾಹಕರು ತೊಂದರೆಗೆ ಸಿಲುಕಿದ ಪ್ರಸಂಗಗಳು ನಡೆದಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಿಷಯವನ್ನು ಬ್ಯಾಂಕ್‌ಗಳ ಒಕ್ಕೂಟದ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಬ್ಯಾಂಕ್‌ಗಳಲ್ಲಿ ನಿತ್ಯ ಗ್ರಾಹಕರ ಜತೆ ವ್ಯವಹರಿಸಬೇಕಾದವರು ಅಲ್ಲಿನ ಭಾಷೆಯನ್ನು ಕಲಿತಿರಬೇಕು, ಅಂತಹ ವ್ಯವಸ್ಥೆಯನ್ನು ಬ್ಯಾಂಕ್‌ಗಳು ರೂಪಿಸಬೇಕು ಎಂದು ಹೇಳಿದ್ದಾರೆ. ಅವರು ಸೂಚನೆ ನೀಡಿದ ನಂತರದ ಲ್ಲಿಯೂ ಬ್ಯಾಂಕ್ ಶಾಖೆಗಳ ಮಟ್ಟದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.

ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಸೇವೆ ಸರಿಯಾಗಿ ಸಿಗದೆ ಸಮಸ್ಯೆ ಸೃಷ್ಟಿಯಾಗುತ್ತಿರುವುದಕ್ಕೆ ಎರಡು ಮುಖ್ಯ ಕಾರಣಗಳು ಇವೆ. ಒಂದು, ಬ್ಯಾಂಕಿಂಗ್ ಹುದ್ದೆಗಳಿಗೆ ನಡೆಯುವ ನೇಮಕಗಳಲ್ಲಿನ ದೋಷಗಳು. ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ಗಳು ಪಾಲಿಸಿಕೊಂಡು ಬಂದಿರುವ ಸಿಬ್ಬಂದಿಯ ವರ್ಗಾವಣೆ ನೀತಿ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನಡೆಯುವ ನೇಮಕ ಪ್ರಕ್ರಿಯೆಯು ಕನ್ನಡದ ಅಥವಾ ದಕ್ಷಿಣ ಭಾರತದ ಅಭ್ಯರ್ಥಿಗಳಿಗೆ ಅನುಕೂಲಕರ ಆಗುವಂತೆ ಇಲ್ಲ.

ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪ ಸರಿಯಾಗದ ಹೊರತು ಬ್ಯಾಂಕಿಂಗ್ ವ್ಯವಸ್ಥೆಗೆ ದಕ್ಷಿಣದ ರಾಜ್ಯಗಳಿಂದ ಹೆಚ್ಚಿನವರು ಸೇರ್ಪಡೆ ಆಗುವುದಿಲ್ಲ. ಹಿಂದಿ ಭಾಷಿಕ ಪ್ರದೇಶಗಳ ಅಥವಾ ಈಶಾನ್ಯ ರಾಜ್ಯಗಳ ನೌಕರರನ್ನು ದಕ್ಷಿಣದ ರಾಜ್ಯಗಳಿಗೆ ನೇಮಕ ಮಾಡುವ ಮೊದಲು, ಅವರಿಗೆ ಇಲ್ಲಿನ ಭಾಷೆಯನ್ನು ಕಲಿಸುವ ಕೆಲಸವನ್ನು ಬ್ಯಾಂಕ್ ಗಳೇ ಮಾಡಬೇಕು. ಹಾಗೆ ಮಾಡಲು ಸಾಧ್ಯವಿಲ್ಲ ಎಂದಾದರೆ, ತಮ್ಮ ವರ್ಗಾವಣೆ ನೀತಿಯನ್ನು ಅವು ಪುನರ್‌ವಿಮರ್ಶೆಗೆ ಒಡ್ಡಬೇಕು. ಬ್ಯಾಂಕಿಂಗ್
ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸದೇ ಇದ್ದರೆ ಸ್ಥಳೀಯ ಭಾಷೆಗಳಲ್ಲಿ ಸೇವೆ ಲಭ್ಯವಾಗುವುದಿಲ್ಲ.

ಆದ್ದರಿಂದ ಅದಕ್ಕೆ ಪೂರಕವಾಗಿ ಕಾಯ್ದೆ, ಕಾನೂನುಗಳನ್ನು ಜಾರಿಗೆ ತರಬೇಕಾದ ಅಗತ್ಯವಿದೆ.