ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರು ಹುತಾತ್ಮರಾದ ಮಾರ್ಚ್ 23 ರಂದು ಸರಕಾರಿ ರಜೆ ಘೋಷಿಸಿ ಪಂಜಾಬ್ ಸರಕಾರ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸ್ಮರಣಾರ್ಥವಾಗಿ ಪಂಜಾಬಿನಲ್ಲಿ
ಒಂದು ದಿನ ಭ್ರಷ್ಟಾಚಾರ ತಡೆ ಸಹಾಯವಾಣಿ ಪ್ರಾರಂಭಿಸುವುದಾಗಿ ನೂತನ ಮುಖ್ಯ ಮಂತ್ರಿ ಭಗವಂತ ಮಾನ್ ಘೋಷಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ ಕೈಗೊಂಡ ಪಂಜಾಬ್ ಸರಕಾರದ ನಡೆ ಸ್ವಾಗ ತಾರ್ಹ. ಇದೇ ಮಾದರಿಯ ವ್ಯವಸ್ಥೆಯು ತಮ್ಮ ರಾಜ್ಯಗಳಲ್ಲೂ ಬರಬೇಕು ಎಂಬುದು ಪ್ರತಿಯೊಂದು ರಾಜ್ಯದ ಜನರ ಆಶಯ ವಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿರುವ ಕರ್ನಾಟಕದಲ್ಲಿಯೂ ಇಂತಹ ವ್ಯವಸ್ಥೆ ಜಾರಿಯಾದರೆ ಲಂಚಗುಳಿತನಕ್ಕೆ ಕೊಂಚ ಮಟ್ಟಿಗಾದರೂ ತಡೆ ಬೀಳಬಹುದು. ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಹೊರದಬ್ಬಿ ಭ್ರಷ್ಟಾಚಾರ ಮುಕ್ತ ರಾಜ್ಯವನ್ನು ನಿರ್ಮಿಸುವುದು ಸದ್ಯದ ತುರ್ತಾಗಿದೆ.
ದೆಹಲಿ ಗದ್ದುಗೆ ಏರಿದ ನಂತರ ಪಂಜಾಬ್ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿ ರುವ ಎಎಪಿ ನಾಯಕ ಅರವಿಂದ ಕ್ರೇಜಿವಾಲ್ ಅವರು ನೂತನ ಶಾಸಕರಿಗೆ ‘ಕೆಲಸ ಮಾಡದಿದ್ದರೆ ತಲೆದಂಡ’ ಎಂಬ ಎಚ್ಚರಿಕೆಯ ಸೂಚನೆಯನ್ನೂ ನೀಡಿದ್ದಾರೆ. ಪಕ್ಷದ ಎಲ್ಲ ಶಾಸಕರು ಒಂದು ತಂಡವಾಗಿ ಕೆಲಸ ಮಾಡಬೇಕು. ಯಾರ ಬಗ್ಗೆಯೂ ಆಕ್ಷೇಪಾರ್ಹ ಭಾಷೆ ಬಳಸಬಾರದು. ಒರಟಾಗಿ ನಡೆದುಕೊಳ್ಳ ಬಾರದು. ಕೆಲಸದ ಮೂಲಕ ಜನರ ಮನಸ್ಸನ್ನು ಗೆಲ್ಲಬೇಕು ಎಂದು ಸಲಹೆ ನೀಡಿದ್ದಾರೆ.
ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಶಾಸಕರು ತಪ್ಪು ಮಾಡಿರುವುದು ಕಂಡುಬಂದರೆ ಕಠಿಣ ಕ್ರಮ ಜರುಗಿಸಲಾಗುವುದು. ಅವಿಧೇಯತೆಯನ್ನು ಹಾಗೂ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುವುದನ್ನು ಸಹಿಸಿಕೊಳ್ಳುವುದಿಲ್ಲ. ಅಧಿಕಾರಿಗಳ ವರ್ಗಾವಣೆಗೆ ಸಚಿವರ ಅಥವಾ ಮುಖ್ಯಮಂತ್ರಿ ಕಚೇರಿಗೆ ಹೋಗಬೇಡಿ ಎಂದು ಶಾಸಕರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿರುವುದು ಒಟ್ಟಾರೆ ಭಾರತದ ಎಲ್ಲ ರಾಜ್ಯಗಳ ಶಾಸಕರಿಗೆ ಪಾಠ ಎಂಬಂತಿವೆ. ಜನರಿಂದ ಆಯ್ಕೆಯಾದವರು ಜನರ ಸೇವಕರಾಗಬೇಕೇ ವಿನಾ ಅವರೆದುರು ಅಧಿಕಾ ರದ ದರ್ಪ ತೋರಬಾರದು. ಕೇಜ್ರಿವಾಲರ ಈ ಸೂಚನೆಯನ್ನು ಪಾಲಿಸಿದರೆ ಇದೊಂದು ಪಂಜಾಬಿನ ಮಾದರಿ ಎಂದೇ ದೇಶದೆಲ್ಲೆಡೆ ಪ್ರಸಿದ್ಧಿ ಯಾಗುತ್ತದೆ.