ದೇಶದ ಅತ್ಯುನ್ನತ ಪೌರ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರವನ್ನು ಜನ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಕೇಂದ್ರ ಸರಕಾರ ಮರಣೋತ್ತರವಾಗಿ ಘೋಷಿಸುವ ಮೂಲಕ ಉತ್ತಮ ಮಾದರಿಯೊಂದನ್ನು ಸೃಷ್ಟಿ ಮಾಡಿದೆ. ಲೋಹಿಯಾ ಚಿಂತನೆಯಿಂದ ಪ್ರೇರಿತರಾಗಿದ್ದ ಠಾಕೂರ್ ಅವರು ೧೯೭೦ರಿಂದ ೧೯೭೧ರವರೆಗೆ ಹಾಗೂ ೧೯೭೭ರಿಂದ ೧೯೭೯ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು.
ಸಮಾಜವಾದಿ ಮತ್ತು ಭಾರತೀಯ ಕ್ರಾಂತಿ ದಳ ಪಕ್ಷ, ಜನತಾ ಪಾರ್ಟಿಗಳಲ್ಲಿದ್ದರು. ಅವರು ಉತ್ತರ ಭಾರತದಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿ ಗುರುತಿಸಿಕೊಂಡಿದ್ದರು. ಬಿಹಾರದ ರಾಜಕಾರಣದಲ್ಲಿ ಅಗ್ರಮಾನ್ಯರಾಗಿದ್ದರು. ಕ್ಷೌರಿಕ ಸಮುದಾಯದಲ್ಲಿ ಜನಿಸಿದ ಅವರ ಆಡಳಿತ ವಿಶೇಷವಾಗಿ ಸಮಾಜದ ವಂಚಿತ ವರ್ಗಗಳಿಗೆ ನ್ಯಾಯ ಕಲ್ಪಿಸಲು ನಾಂದಿ ಹಾಡಿತು. ಹೃದಯವಂತ ಸಮಾಜವಾದಿ ನಾಯಕ ಠಾಕೂರ್ ಅವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ರಾಷ್ಟ್ರೀಯವಾದಿ ವಿಚಾರಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು ಮತ್ತು ನಂತರ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟವನ್ನು ಸೇರಿದರು.
ಅವರ ರಾಜಕೀಯ ಸಿದ್ಧಾಂತವು ಲೋಹಿಯಾ ಚಿಂತನೆಯ ಆಧಾರಿತವಾಗಿದ್ದು, ಇದು ಕೆಳಜಾತಿಗಳ ಸಬಲೀಕರಣಕ್ಕೆ ಒತ್ತು ನೀಡಿತು. ಸರಕಾರಿ ಸೇವೆ ಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಮಾನ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದ್ದ ಮೀಸಲಿಗಾಗಿ ಕರ್ಪೂರಿ ಠಾಕೂರ್ ಫಾರ್ಮು ಲಾವನ್ನು ಪರಿಚಯಿಸಿದ್ದು., ಠಾಕೂರ್ ಅವರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದು. ಈ ನೀತಿಯು ಹಿಂದುಳಿದ ವರ್ಗಗಳಿಗೆ ಅಧಿಕಾರ ನೀಡುವು ದಲ್ಲದೆ, ಉತ್ತರ ಭಾರತದ ರಾಜಕೀಯದ ಚಹರೆಯನ್ನು ಬದಲಿಸಿ, ಪ್ರಾದೇಶಿಕ ಪಕ್ಷಗಳ ಉದಯಕ್ಕೂ ಕಾರಣವಾಯಿತು. ಈ ಬಾರಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯಾಗಿ ಆರಿಸಿದಾಗಲೂ ಇಂಥದೊಂದು ಸಂದೇಶವನ್ನು ಮೋದಿ ಸರಕಾರ ನೀಡಿದೆ.
ದಲಿತರು, ಹಿಂದುಳಿದ ಸಮುದಾಯ ಹಾಗೂ ಬುಡಕಟ್ಟು ಜನಾಂಗದ ನಾಯಕರು ರಾಷ್ಟ್ರ ರಾಜಕೀಯದಲ್ಲಿ ಮುಚೂಣಿಯಲ್ಲಿ ನಿಂತಾಗ, ಭಾರತ ರತ್ನದಂಥ ಪುರಸ್ಕಾರಗಳನ್ನು ಪಡೆದಾಗ, ಅದು ದುರ್ಬಲರಲ್ಲಿ ತಾವೂ ಈ ದೇಶ ಕಟ್ಟಿದವರು ಎಂಬ ಸ್ವಾಭಿಮಾನದ ಭಾವವನ್ನು ಮೂಡಿಸುತ್ತದೆ. ಇದು
ಇಂದಿನ ಅಗತ್ಯ. ಕೇಂದ್ರ ಸರಕಾರ ಈ ಉದ್ದೇಶದಲ್ಲಿ ಯಶಸ್ವಿಯಾಗಿದೆ.