ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಇದೀಗ ಮತ್ತೆ ಗಡಿ ಖ್ಯಾತೆ ತೆಗೆದಿದೆ. ಮಹಾರಾಷ್ಟ್ರ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದೆ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತಿದ್ದಂತೆಯೇ ಎರಡೂ ರಾಜ್ಯಗಳ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ, ಅಲ್ಲಿನ ಜನಪ್ರತಿನಿಧಿಗಳು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತ ಗಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ.
ಆ ರಾಜ್ಯಕ್ಕೆ ಹೋದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರುತ್ತಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸರ್ವ ಪಕ್ಷ ಸಭೆ ಕರೆದು ಈ ಬಾರಿ ಸರಿಯಾದ ಖಡಕ್ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಆದರೆ ಈ ಹೇಳಿಕೆ ಬರೀ ಹೇಳಿಕೆಯಾಗಿ ಉಳಿಯ ಬಾರದು.
ಹಾಗೆ ನೋಡಿದರೆ ಗಡಿ ಸಮಸ್ಯೆ ಬಗೆಹರಿಯಲು ಸಕಾಲ. ಏಕೆಂದರೆ ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ಕಡೆ ಇರುವುದು ಬಿಜೆಪಿ ನೇತೃತ್ವದ ಸರಕಾರಗಳು. ಅಲ್ಲದೆ, ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವದ ಸರಕಾರವೇ ಇದೆ. ಹೀಗಾಗಿ, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಪ್ರಧಾನಿ ಮನಸ್ಸು ಮಾಡಿದರೆ ಸಮಸ್ಯೆ ಕ್ಷಣಾರ್ಧದಲ್ಲಿ ಒಂದೇ ಸಭೆಯಲ್ಲಿ ಮುಗಿಯುತ್ತದೆ. ಒಂದು ವೇಳೆ ಮೂರೂ ಕಡೆ ಒಂದೇ ಪಕ್ಷದ ನೇತೃತ್ವದ ಸರಕಾರ ಇದ್ದರೂ ಗಡಿ ವಿವಾದ ಬಗೆಹರಿಯು ತ್ತಿಲ್ಲ, ಸಮಸ್ಯೆ ಮತ್ತೆ ಮತ್ತೆ ಸದ್ದು ಮಾಡುತ್ತ ಕಗ್ಗಂಟಾಗುತ್ತಿದೆ ಎಂದಾದರೆ ಅದು ಇನ್ನೆಂದಿಗೂ ಬಗೆಹರಿಯುವುದಿಲ್ಲ.
ಆದ್ದರಿಂದ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಲ್ಲದೆ, ಸಾಮರಸ್ಯ ಕದಡುವಂತಹ ಘಟನೆಗಳಿಗೆ ಅವಕಾಶ ನೀಡಬಾರದು ಹಾಗೂ ಕರ್ನಾಟಕದ ಬಸ್, ಜನರು ಮತ್ತು ಅವರ ಆಸ್ತಿಗಳಿಗೆ ರಕ್ಷಣೆ ನೀಡಬೇಕು. ಜನರ ದಿಕ್ಕು ತಪ್ಪಿಸಿ, ಗಡಿಯಲ್ಲಿ ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡುವ ದುಷ್ಕರ್ಮಿಗಳನ್ನು ಬಂಧಿಸಬೇಕು. ಆ ಮೂಲಕ ಗಡಿ ಜಿಲ್ಲೆಗಳಲ್ಲಿ ಶಾಶ್ವತ ಶಾಂತಿ ಸ್ಥಾಪನೆಯಾಗುವಂತೆ ನೋಡಿಕೊಳ್ಳಬೇಕು.