ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆ ಏಳನೇ ಅವಧಿಗೆ ಮುಂಗಡ ಪತ್ರ ಮಂಡನೆ ಮಾಡಿದ್ದಾರೆ. ಇದು ಮುಂದಿನ ೫ ವರ್ಷಗಳ ಆರ್ಥಿಕಾಭಿವೃದ್ಧಿಯ ನೀಲ ನಕ್ಷೆಯೊಂದಿಗೆ ರೈತರು, ಬಡವರು ಮತ್ತು ಮಧ್ಯಮ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಮೀಸಲಾದ ಬಜೆಟ್ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಒಟ್ಟಾರೆ ಬಜೆಟ್ ಅಭಿವೃದ್ಧಿ ಕೇಂದ್ರಿತವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ
ಸಮತೋಲಿತ ಬಜೆಟ್ ಎನ್ನಲು ಸಾಧ್ಯವಿಲ್ಲ. ಅಭಿವೃದ್ಧಿಯ ಫಲವನ್ನು ಸಮಾನವಾಗಿ ಎಲ್ಲ ರಾಜ್ಯಗಳಿಗೆ ಹಂಚಿಕೆ ಮಾಡಬೇಕಿರುವುದು ಕೇಂದ್ರ
ಸರಕಾರದ ಕರ್ತವ್ಯ. ಈ ದೃಷ್ಟಿಯಿಂದ ನೋಡಿದರೆ ೨೦೨೪-೨೫ರ ಸಾಲಿಗೆ ಮಂಡಿಸಲಾದ ಬಜೆಟ್‌ನಲ್ಲಿ ಮೈತ್ರಿಕೂಟದ ಎರಡು ಪ್ರಮುಖ ಪಾಲುದಾರ
ಪಕ್ಷಗಳತ್ತ ಹೆಚ್ಚು ಒಲವು ತೋರಿರುವುದು ಎದ್ದು ಕಾಣುತ್ತಿದೆ.
ಅಭಿವೃದ್ಧಿ ಹೆಸರಿನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಅನುದಾನದಲ್ಲಿ ಅಗ್ರತಾಂಬೂಲ ದೊರೆತಿದೆ. ಮೈತ್ರಿಕೂಟದ ಸರಕಾರದಲ್ಲಿ ಇಂತಹ ಓಲೈಕೆಗಳು ಹೊಸದೇನೂ ಅಲ್ಲ. ತಮಿಳುನಾಡು, ಆಂಧ್ರಪ್ರದೇಶ, ಬಿಹಾರದಂತಹ ರಾಜ್ಯಗಳು ಈ ಹಿಂದೆಯೂ ದೋಸ್ತಿ ಸರಕಾರದ ಭಾಗವಾಗಿ ಕೇಂದ್ರ ದಿಂದ ಗರಿಷ್ಠ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿವೆ. ಆದರೆ ಇಷ್ಟರ ನಡುವೆಯೂ ಬರ ಪರಿಹಾರ, ನೆರೆಯಂತಹ ವಿಚಾರದಲ್ಲಿ ಕರ್ನಾಟಕ ದಂತಹ ಸಂತ್ರಸ್ತ ರಾಜ್ಯಗಳತ್ತ ನಿರ್ಮಲಾ ಸೀತಾರಾಮನ್ ಅವರು ಕೃಪಾದೃಷ್ಟಿ ತೋರಬೇಕಿತ್ತು. ಬಜೆಟ್‌ನಲ್ಲಿ ಬಡವರು, ಮಹಿಳೆಯರು, ರೈತರು ಹಾಗೂ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿರುವುದು ಸ್ವಾಗತಾರ್ಹ.
ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ, ಸೇವೆ, ನಗರ ಅಭಿವೃದ್ಧಿ, ಇಂಧನ ಹಾಗೂ ಸಂಶೋಧನೆ ಸೇರಿ ೯ ಕ್ಷೇತ್ರಗಳಿಗೆ ಆದ್ಯತೆ ನೀಡಿ ಅನುದಾನ ಹಂಚಿಕೆ ಮಾಡಿರುವ ನಿರ್ಧಾರ ಸಕಾಲಿಕವಾದುದು. ದೇಶದ ಶೇ.೬೫ರಷ್ಟು ಜನಸಂಖ್ಯೆ ೩೫ವರ್ಷದೊಳಗಿನವರಾಗಿದ್ದು, ಇವರ ಆಶೋತ್ತರಗಳನ್ನು ಈಡೇರಿಸುವ ದೃಷ್ಟಿಯಿಂದ ಶಿಕ್ಷಣ,ಉದ್ಯೋಗ, ಕೌಶಲ್ಯಾಭಿವೃದ್ಧಿಗೆ ೧.೪೮ ಲಕ್ಷ ಕೋಟಿ ಹಣ ಮೀಸಲು ಇಟ್ಟಿರುವುದು ಸರಿಯಾದ ಹೆಜ್ಜೆ. ಹೊಸ ಉದ್ಯೋಗಿಗಳಿಗೆ ಮೊದಲ ಮೂರು ತಿಂಗಳು ೫೦೦೦ ರೂಪಾಯಿ ವೃತ್ತಿ ವೇತನ ಮತ್ತು ಹೆಚ್ಚುವರಿ ಉದ್ಯೋಗ ಸೃಷ್ಟಿಗಾಗಿ ಉದ್ಯೋಗದಾತರಿಗೆ ೩೦೦೦ ರುಪಾಯಿ ಸಹಾಯ ಧನ ನಿರುದ್ಯೋಗ ನಿವಾರಣೆಗೆ ನೆರವಾಗುವುದೇ ಎಂದು ಕಾದು ನೋಡಬೇಕಾಗಿದೆ.
ಕುಸಿಯುತ್ತಿರುವ ಕೃಷಿರಂಗವನ್ನು ಮೇಲೆತ್ತಲು ೧.೫೨ ಲಕ್ಷ ಕೋಟಿ ರೂ. ಅನುದಾನ ಪ್ರಕಟಿಸಲಾಗಿದೆ. ಆದರೆ ಬಜೆಟ್‌ನ ಕಲ್ಯಾಣ ಕ್ರಮಗಳು ಯಾರನ್ನು ಮುಟ್ಟಬೇಕೋ ಅವರಿಗೆ ತಲುಪಿದರಷ್ಟೇ ಉದ್ದೇಶ ಈಡೇರಲು ಸಾಧ್ಯ.