Wednesday, 11th December 2024

ಬಸ್ ಪ್ರಯಾಣ ದರ ಏರಿಕೆ ಬೇಡ

ಪ್ರಸಕ್ತ ವರ್ಷದಲ್ಲಿ ರಾಜ್ಯದ ಒಂದೆಡೆ ಬರಗಾಲದ ಛಾಯೆ ಆವರಿಸಿದ್ದರೆ, ಇನ್ನೊಂದೆಡೆ ಅತಿವೃಷ್ಟಿಯಾಗಿ ಬೆಳೆ, ಆಸ್ತಿಪಾಸ್ತಿಗಳು ಹಾನಿಗೀಡಾಗಿವೆ. ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ದಿನನಿತ್ಯದ ವಸ್ತುಗಳ ಬೆಲೆ ಏರಿಕೆಗೆ ನಲುಗಿzರೆ. ಈ ನಡುವೆ ರಾಜ್ಯ ಸರಕಾರ ಹಾಲಿನ ದರ ಹೆಚ್ಚಳ
ಮಾಡಿದೆ. ಇದೀಗ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳವಾಗುತ್ತಿದ್ದಂತೆ ತಾವೂ ನೀರಿನ ದರ ಹೆಚ್ಚಳ ಮಾಡಬಹುದು ಎಂಬುವುದನ್ನೇ ಇತರ ನಗರ ಸಂಸ್ಥೆಗಳು ಕಾದು ಕುಳಿತಿವೆ. ಈ ನಡುವೆಯೇ ಸಾರಿಗೆ ಬಸ್ ಪ್ರಯಾಣ ದರವನ್ನೂ ಹೆಚ್ಚಳ ಮಾಡುವಲ್ಲಿ ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ. ಹೀಗಾಗಿ ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಹಿಳೆಯರಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ರಾಜ್ಯ ಸರಕಾರದ ಮಹಾತ್ವಾಕಾಂಕ್ಷೆಯ ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಸಾಕಷ್ಟು ಹೆಚ್ಚಿದೆ. ಆದರೆ, ಇದೀಗ ಪ್ರಯಾಣ ದರ ಏರಿಕೆ ಮಾಡಿದರೆ ಮಹಿಳೆಯರಿಗೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.

ಪುರುಷರಿಗೆ ಹೊರೆಯಾಗಲಿದೆ. ಇದು ಒಂದೆಡೆ ಕೊಟ್ಟು ಇನ್ನೊಂದೆಡೆ ಕಿತ್ತುಕೊಂಡಂತಾಗಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದಾಗಿ ಸಾರಿಗೆ ಸಂಸ್ಥೆ ಗಳು ನಷ್ಟದಲ್ಲಿದ್ದು, ಲಾಭದತ್ತ ತರಲು ಬಸ್ ಪ್ರಯಾಣ ದರ ಅನಿವಾರ್ಯ ಎಂದು ಹೇಳಲಾಗುತ್ತಿದೆ. ಕೇಂದ್ರ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಿಸಿ ದರೆ ಅದರ ಪರಿಣಾಮ ರಾಜ್ಯದ ಜನಸಾಮಾನ್ಯರ ಮೇಲೆ ಹೇರಿದಂತಾಗುತ್ತಿದೆ. ಇದು ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂತಿದೆ. ಆದ್ದರಿಂದ ಕೇರಳ, ತಮಿಳುನಾಡಿನಲ್ಲಿ ಸಾರಿಗೆ ಸಂಸ್ಥೆಗಳಿಗೆ ರಾಜ್ಯ ಸರಕಾರವು ಸಬ್ಸಿಡಿ ನೀಡುತ್ತಿರುವಂತೆ ನಮ್ಮ ರಾಜ್ಯ ಸರಕಾರವು ಸಬ್ಸಿಡಿ ನೀಡಿ ಪ್ರಯಾಣ ದರ ಇಳಿಸಿ ಜನಸಾಮಾನ್ಯರ ಹೊರೆ ಇಳಿಸಬೇಕು.

ಸಾರಿಗೆ ಸಂಸ್ಥೆಗಳಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಅನಗತ್ಯ ಹೊಸ ಬಸ್ ಖರೀದಿ ನಿಲ್ಲಬೇಕು. ಹಲವು ರೂಟ್‌ಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬಸ್‌ಗಳು ಒಂದೇ ವೇಳೆಗೆ ಹೊರಟು ಖಾಲಿ ಓಡಾಡುತ್ತಿವೆ. ಅಂತಹ ಕಡೆಗಳಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಮಾಡಬೇಕು.