ನಿಷೇಧಿತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ ಐ) ಸಂಘಟನೆ ಸೇರುವಂತೆ ಕೋರಿದ ಗೋಡೆಬರಹ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಪಟ್ಟಣದಲ್ಲಿ ಕಾಣಿಸಿಕೊಂಡಿದೆ. ೯ಕ್ಕೂ ಹೆಚ್ಚು ಕಡೆ ನೀಲಿ ಮತ್ತು ಕೆಂಪು ಬಣ್ಣದಲ್ಲಿ ಬರೆದು, ಅದಕ್ಕೆ ಚುಕ್ಕೆ ಗುರುತು ಇರಿಸಲಾಗಿದೆ.
ನಿಷೇಧಿತ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಅಂಗ ಸಂಸ್ಥೆಯಾಗಿರುವ ಸಿಎಫ್ಐ ಪರ ಜನನಿಬಿಡ ಪ್ರದೇಶಗಳಲ್ಲೇ ಗೋಡೆಬರಹ ಕಾಣಿಸಿಕೊಂಡಿದೆ. ಕೇಂದ್ರ ಸರಕಾರ ೫ ವರ್ಷ ಕಾಲ ಪಿಎಫ್ ಐ, ಸಿಎಫ್ಐ ಸಂಘಟನೆಗಳನ್ನು ನಿಷೇಧಿಸಿದ್ದರೂ ಅಲ್ಲಲ್ಲಿ ಆ ಸಂಘಟನೆಗಳ ಕಾರ್ಯ ಕರ್ತರು ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಗೋಡೆ ಬರಹಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ. ಇತ್ತೀಚೆಗೆ ಜೆಎನ್‌ಯು ಕ್ಯಾಂಪಸ್‌ನ ಗೋಡೆಗಳಲ್ಲೂ ಬ್ರಾಹ್ಮಣ ವಿರೋಧಿ ಘೋಷಣೆಗಳನ್ನು ಬರೆದಿರುವ ಕೃತ್ಯ ನಡೆದಿದೆ.
ಜೆಎನ್‌ಯು ಕ್ಯಾಂಪಸ್‌ನಲ್ಲಿ ದೇಶವಿರೋಧಿ ಮತ್ತು ಸಮಾಜವಿರೋಧಿ ಚಟುವಟಿಕೆಗಳು ಪದೇ ಪದೆ ನಡೆಯುತ್ತಲೇ ಇವೆ. ಈ ಗೋಡೆಬರಹ ಚಾಳಿಯು ಸಮಾಜದಲ್ಲಿ ಶಾಂತಿ ಕದಡುವ ಮೊದಲ ಪ್ರಯತ್ನವಾಗಿದೆ. ಹಾಗಾಗಿ ಪೊಲೀಸರು ತಪ್ಪಿತಸ್ಥರನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಭಾರತದ ಸಂವಿಧಾನವು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಬದುಕುವ ಹಕ್ಕನ್ನು ನೀಡಿದೆ. ಆದರೆ ದೇಶದ ಕೆಲವು ಸಮಾಜವಿರೋಧಿಗಳು ದೇಶವನ್ನು ಹೇಗೆ ವಿಭಜಿಸುತ್ತಾರೆ, ದೇಶದಲ್ಲಿ ಜಾತಿವಾದ ಹೇಗೆ ಧ್ರುವೀಕರಣಗೊಳ್ಳುತ್ತದೆ ಮತ್ತು ಅದರಿಂದ ದೇಶಕ್ಕೆ ಹೇಗೆ ಹಾನಿಯಾಗುತ್ತಿದೆ ಎಂಬುದು ಸಮಾಜದ ಸಮಷ್ಟಿ ಹಿತವನ್ನು ಬಯಸುವವರಿಗೆ ಗೋಚರಿಸುತ್ತಿದೆ.
ಸಾರ್ವಜನಿಕ ಸ್ಥಳದಲ್ಲಿ, ಶೈಕ್ಷಣಿಕ ಕೇಂದ್ರದಲ್ಲಿ ಇಂತಹ ದೇಶವಿರೋಧಿ ಮತ್ತು ಸಮಾಜವಿರೋಧಿ ಚಟುವಟಿಕೆಗಳು ನಡೆಯು ತ್ತಿರುವುದು ದುರದೃಷ್ಟಕರ. ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಜೆಎನ್‌ಯು ಕ್ಯಾಂಪಸ್‌ನ ಉನ್ನತಿಗಾಗಿ ಸರಕಾರವು ಜನರ ತೆರಿಗೆ ಹಣದಿಂದ ಭಾರಿ ಮೊತ್ತದ ಹಣ ನೀಡುತ್ತದೆ. ಆದರೆ ಅದು ಇಂತಹ ಸಮಾಜದ್ರೋಹಿಗಳನ್ನು ಬೆಳೆಸಲು ವಿನಿಯೋಗ ವಾಗುತ್ತಿರುವುದು ದುಃಖದ ಸಂಗತಿ. ಗೋಡೆಬರಹವು ಮೇಲ್ನೋಟಕ್ಕೆ ಒಂದು ಸಣ್ಣ ಘಟನೆ ಎನಿಸಿದರೂ ಅದರ ಪರಿಣಾಮ ದೊಡ್ಡದಾಗಿರುತ್ತದೆ. ಆದ್ದರಿಂದ ಈ ಗೋಡೆಬರಹಗಳ ಹಿಂದಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಗೋಡೆಬರಹದ ಕೆಟ್ಟ ಚಾಳಿ ಮುಂದುವರಿಯದಂತೆ ನೋಡಿಕೊಳ್ಳಬೇಕಿದೆ.