ಇಂದು ದೇಶದೆಲ್ಲೆಡೆ 151ನೇ ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಈ ದೇಶ ಕಂಡ ಮಹಾತ್ಮರೊಬ್ಬರ ಆಚರಣೆಯನ್ನು ಸಂಭ್ರಮ ದಿಂದ ಆಚರಿಸುವುದು ಅವರಿಗೆ ಸಲ್ಲಿಸುವ ಗೌರವವಾದರೂ, ಆಶಯಗಳ ಅನುಸರಣೆಗೆ ಆದ್ಯತೆ ನೀಡುವುದೇ ಮುಖ್ಯ. ಕೇಂದ್ರ ಸರಕಾರ ಮಹಾತ್ಮ ಗಾಂಧಿಯವರ 150ನೇ ವರ್ಷಾಚರಣೆಗೆ ಬಹುದೊಡ್ಡ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸ ಬೇಕೆಂಬ ಆಶಯದಿಂದ ಸ್ವಚ್ಛ ಭಾರತ ಅಭಿಯಾನವನ್ನು ಜಾರಿಗೊಳಿಸಿತು.
2014ರಲ್ಲಿ ಒಂದು ರಾಷ್ಟ್ರೀಯ ಚಳವಳಿಯ ರೂಪದಲ್ಲಿ ಕರೆ ನೀಡಲಾದ ಈ ಅಭಿಯಾನದ ಅನುಷ್ಠಾನಕ್ಕಾಗಿ ಕೇಂದ್ರ ಸರಕಾರ
ಬಹಳಷ್ಟು ಆದ್ಯತೆ ನೀಡಿತು. 2019ನೇ ಸಾಲಿನಲ್ಲಿ ಜರುಗುವ 150ನೇ ವರ್ಷದ ಆಚರಣೆ ವೇಳೆಗೆ ಸ್ವಚ್ಛ ಮತ್ತು ಆರೋಗ್ಯಕರ ಭಾರತವನ್ನು ನಿರ್ಮಿಸುವುದು ಈ ಯೋಜನೆಯ ಬಹುಮುಖ್ಯ ಉದ್ದೇಶ. ಕೇಂದ್ರ ಸರಕಾರ ಜನರ ಸಹಭಾಗಿತ್ವದಲ್ಲಿ ರೂಪಿಸಿದ ಈ ಯೋಜನೆಗೆ ಬಹಳಷ್ಟು ಪ್ರಶಂಸೆ ಹಾಗೂ ಬೆಂಬಲ ವ್ಯಕ್ತವಾಯಿತು. ಪ್ರಧಾನಿ ಮೋದಿಯವರು ಘೋಷಿಸಿದ ಅನೇಕ ಯೋಜನೆ ಗಳು ಹಾಗೂ ಅಪಾರ ಪ್ರಮಾಣದ ಅನುದಾನಗಳಿಗಿಂತಲೂ ಹೆಚ್ಚಿನ ಜನಮನ್ನಣೆ ವ್ಯಕ್ತವಾಗಿದ್ದು, ಇದೇ ಸ್ವಚ್ಛ ಭಾರತ ಅಭಿಯಾನಕ್ಕಾಗಿ.
ಗಾಂಧಿ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಜಾರಿಗೊಳಿಸಿದ ಸ್ವಚ್ಛ ಭಾರತ್ ಅಭಿಯಾನ ಬಹಳಷ್ಟು ಯಶಸ್ವಿಯಾಗಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಸ್ವಚ್ಛ ಭಾರತವನ್ನು ಕಾಣಬೇಕಾದರೆ ಜನರ ಸಹ ಭಾಗಿತ್ವ ಮತ್ತಷ್ಟು ಅಗತ್ಯ ಮತ್ತು ಅನಿವಾರ್ಯ. ಗಾಂಧಿ ಜಯಂತಿ ಆಚರಣೆಗೆ ಕೇಂದ್ರ ಸರಕಾರ ಸಲ್ಲಿಸಿದ ಬಹುದೊಡ್ಡ ಗೌರವ ಈ ಅಭಿಯಾನ. ಇದೀಗ ಮತ್ತೊಮ್ಮೆ ಗಾಂಧಿ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ, ಸ್ವಚ್ಛ ಭಾರತವನ್ನು ಪರಿಪೂರ್ಣಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಗಳು ಆರಂಭಗೊಳ್ಳಬೇಕಿದೆ.