Friday, 13th December 2024

ನೈತಿಕತೆ ಕುಗ್ಗಿಸುವ ಕೆಲಸವಾಗದಿರಲಿ

ಕಳೆದ ನೂರು ವರ್ಷದಿಂದ ಒಲಿಂಪಿಕ್ಸ್‌ನ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಬಂಗಾರದ ಕೊರತೆಯನ್ನು ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ನೀಗಿಸಿದ್ದಾರೆ. ಈ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದ್ದು, ನೀರಜ್ ಸಾಧನೆಗೆ ಶಹಬಾಸ್‌ಗಿರಿ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಸಾಮಾನ್ಯ ರವರೆಗೆ ಚೋಪ್ರಾ ಅವರ ಈ ಸಾಧನೆ ಸ್ವರ್ಣಕ್ಷಾರದಲ್ಲಿ ಬರೆದಿಡುವಂತಹದ್ದು ಎನ್ನುವ ಮಾತನ್ನು ಆಡುತ್ತಿದ್ದಾರೆ.

ಆದರೆ ಕೆಲವರು ಮಾತ್ರ, ಕೇವಲ ಒಂದು ಬಂಗಾರದ ಪದಕಕ್ಕೆ ಇಷ್ಟು ಸಂಭ್ರಮಿಸಬೇಕೇ? 130 ಕೋಟಿ ಜನಸಂಖ್ಯೆಯಿರುವ ಭಾರತಕ್ಕೆ ಒಂದು ಬಂಗಾರ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚು ಸಾಕೇ ಎನ್ನುವ ಕೊಂಕನ್ನು ತಗೆಯುತ್ತಿದ್ದಾರೆ. ಒಂದು ರೀತಿ ಅವರು ಹೇಳುತ್ತಿರುವುದು ಸತ್ಯವಿರಬಹುದು. ನಮಗಿಂತ ಹತ್ತು ಪಟ್ಟು ಸಣ್ಣ ರಾಷ್ಟ್ರಗಳು ನಮಗಿಂತ ಹೆಚ್ಚು ಸಾಧನೆ ಮಾಡುವಾಗ, ನಮ್ಮ ಕ್ರೀಡಾಳುಗಳು ಇನ್ನಷ್ಟು ಸಾಧನೆ ಮಾಡಬೇಕು ಎನ್ನುವುದು ಒಪ್ಪುವಂತಹ ವಾದ. ಆದರೆ ಈ ರೀತಿಯ ಹೇಳಿಕೆ ನೀಡುವ ಮೊದಲು, ಹಿಂದಿನ ಒಲಿಂಪಿಕ್ಸ್‌ನಲ್ಲಿ ನಮ್ಮ ಸಾಧನೆ ಏನು ಎನ್ನುವುದನ್ನು ನೋಡಬೇಕಿದೆ.

ಹಂತ-ಹಂತವಾಗಿ ಭಾರತ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದನ್ನು ಬೆಂಬಲಿಸುವುದನ್ನು ಬಿಟ್ಟು ಈ ರೀತಿಯ ಕೊಂಕು ಮಾತುಗಳ ಮೂಲಕ ಆಟಗಾರರ ಮನಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡ ಬಾರದು. ಕಳೆದೊಂದು ಶತಮಾನದಿಂದ ಆಗದ ಕನಸನ್ನು ನೀರಜ್ ಚೋಪ್ರಾ ನನಸು ಮಾಡಿದ್ದಾರೆ. ಇನ್ನು ಅನೇಕರು ಭಾರತೀಯರಿಗೆ ತಿಳಿಯದೇ ಇರುವ ಆಟಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಗಮನದಲ್ಲಿರಿಸಿಕೊಂಡು ಮುಂದಿನ ಒಲಿಂಪಿಕ್ಸ್‌ನಲ್ಲಿ ಇನ್ನಷ್ಟು ಸಾಧನೆಯನ್ನು ನಮ್ಮ ಆಟಗಾರರು ಮಾಡಲಿ ಎನ್ನುವ ಬೆಂಬಲವನ್ನು ನೀಡಬೇಕೆ ಹೊರತು, ಅವರ ನೈತಿಕತೆಯನ್ನು ಕುಗ್ಗಿಸುವ ಕೆಲಸವಾಗಬಾರದು.