Monday, 9th December 2024

ಚಿರತೆ ಕಾಟ: ಪರಿಹಾರ ಕಲ್ಪಿಸಿ

ಇತ್ತೀಚಿನ ದಿನಗಳಲ್ಲಿ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಳಗಾವಿ, ಹಾವೇರಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಚಿರತೆ ಹಾವಳಿ ತೀವ್ರವಾಗಿದೆ.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಮನೆಗೆ ತೆರಳುತ್ತಿದ್ದ ೧೧ ವರ್ಷದ ಬಾಲಕ ಜಯಂತ್ ಮೇಲೆ ಚಿರತೆ ದಾಳಿ ಮಾಡಿ ಎಳೆದೊಯ್ದು ಕೊಂದಿದ್ದು, ಒಂದೇ ತಾಲೂಕಿನಲ್ಲಿ ಕಳೆದ ಮೂರು ತಿಂಗಳಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಹಿಂದೆ ಅರಣ್ಯಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಚಿರತೆ ದಾಳಿಯಾಗುತ್ತಿತ್ತು. ಈಗ ಬೆಂಗಳೂರಿನ ಸುತ್ತಮುತ್ತ ಪ್ರದೇಶಗಳಲ್ಲೂ ಚಿರತೆ ದಾಳಿಯಾಗುತ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ರಾಜ್ಯದಲ್ಲಿ ಚಿರತೆ ಸಂತತಿ ಗಣನೀಯವಾಗಿ ಹೆಚ್ಚಳವಾಗಿರುವುದು ಮತ್ತು ಅರಣ್ಯ ಪ್ರದೇಶಗಳಲ್ಲಿ ಮಾನವನ ಹಸ್ತಕ್ಷೆಪ ಹೆಚ್ಚುತ್ತಿರುವುದು ಚಿರತೆ-ಮನುಷ್ಯ ಸಂಘರ್ಷಕ್ಕೆ ಕಾರಣವಾಗಿದೆ.

ಇಕೋ ಟೂರಿಸಂ ಹೆಸರಿನಲ್ಲಿ ಅರಣ್ಯದಲ್ಲಿ ಮಾನವ ಹಸ್ತಕ್ಷೆಪ ಹೆಚ್ಚುತ್ತಿದೆ. ರೆಸಾರ್ಟ್, ಟ್ರೆಕ್ಕಿಂಗ್, ಜಲಸಾಹಸಿ ಕ್ರಿಡೆಗಳ ಹೆಸರಿನಲ್ಲಿ ದಟ್ಟ ಕಾಡೊಳಗೂ ಜನರು ಲಗ್ಗೆ ಇಡುವಂತಾಗಿದೆ. ಇದರಿಂದ ಏಕಾಂತಕ್ಕೆ ಭಂಗ ಬಂದು ವನ್ಯಮೃಗಗಳು ನಾಡಿನತ್ತ ನುಗ್ಗುತ್ತಿವೆ. ಅಲ್ಲದೆ, ನಗರಗಳ ಹೊರವಲಯದ ಕಾಡಂಚಿನಲ್ಲಿ ಮಾಂಸದ ತ್ಯಾಜ್ಯಗಳ ಬೇಕಾಬಿಟ್ಟಿ ವಿಲೇವಾರಿ ಸಹ ಚಿರತೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಲು ಕಾರಣವಾಗಿದೆ. ನಾಡಂಚಿನಲ್ಲಿ ಸಮೃದ್ಧವಾಗಿ ದೊರೆಯುವ ನಾಯಿಗಳು, ಕುರಿ-ಕೋಳಿಗಳಿಂದ ಆಕರ್ಷಿತವಾಗುವ ಚಿರತೆಗಳು, ಏನೂ ಸಿಗದಿದ್ದಾಗ ಆಹಾರ ಅರಸಿ ಮನುಷ್ಯರ ಮೇಲೆ ದಾಳಿ ನಡೆಸುತ್ತಿವೆ.

ಊರಿನಲ್ಲಿ ಚಿರತೆ ಹಾವಳಿ ಹೆಚ್ಚಿದ ಸಂದರ್ಭಗಳಲ್ಲಿ ಅರಣ್ಯ ಇಲಾಖೆ ಬೋನುಗಳನ್ನು ಇರಿಸಿ ಹಿಡಿಯುವ ಕೆಲಸಕ್ಕೆ ಮುಂದಾಗುತ್ತದೆ. ಈ ರೀತಿ ಹಿಡಿದ ಚಿರತೆಗಳನ್ನು ಏನು ಮಾಡಲಾಗುತ್ತಿದೆ, ಎಲ್ಲಿಬಿಡಲಾಗುತ್ತಿದೆ ಎಂಬುದು ಪಾರದರ್ಶಕವಾಗಿಲ್ಲ. ಹಿಡಿದ ಚಿರತೆಗಳನ್ನು ದೂರದ ಕಾಡಿಗೆ ಬಿಡಲಾ ಗುತ್ತಿದೆ ಎಂದು ಇಲಾಖೆ ಹೇಳುತ್ತದೆ. ಆದರೆ, ಹೀಗೆ ಬಿಟ್ಟ ಚಿರತೆಗಳು ಮೂಲ ಸ್ಥಳಕ್ಕೆ ಮರಳಿ ಬರುತ್ತಿವೆಯೇ ಎಂಬ ಕುರಿತೂ ಸ್ಪಷ್ಟತೆ ಇಲ್ಲ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಸಮಸ್ಯೆಗೆ ನಿರ್ದಿಷ್ಟ ಪರಿಹಾರ ಕಲ್ಪಿಸಬೇಕಿದೆ. ಮತ್ತೆ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.