ಬ್ರಿಟನ್‌ನಲ್ಲಿ ಹೊಸ ವಿಧದ ಸಾರ್ಸ್-ಕೋವಿ-2 ವೈರಸ್ ಕಾಣಿಸಿಕೊಂಡಿರುವುದರಿಂದ ನಿರ್ಮಾಣವಾಗಿದ್ದ ಗೊಂದಲಕ್ಕೀಗ ತೆರೆ ಬಿದ್ದಿದೆ. ಹೊಸ ರೀತಿಯ ಸೋಂಕು ಭಾರತಕ್ಕೆ ಪ್ರವೇಶಿಸಿಲ್ಲ.
ಆತಂಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಸೋಂಕು ಪತ್ತೆಯಾದರೂ, ತಡೆಗಾಗಿ ಸನ್ನದ್ಧವಾಗಿರುವು ದಾಗಿ ಸ್ಪಷ್ಟ ಸಂದೇಶವನ್ನು ಪ್ರಕಟಿಸಿದೆ. ಇದರಿಂದ ಜನತೆಯಲ್ಲಿ ಎರಡನೆ ಹಂತದ ಕರೋನಾ ಆತಂಕ ದೂರಾ ದಂತಾಗಿದೆ. ಇದೇ ಪರಿಸ್ಥಿತಿಯ ಲಾಭ ಪಡೆದು ಅನಗತ್ಯ ಗೊಂದಲಗಳು ನಿರ್ಮಾಣವಾಗುತ್ತಿರುವ ವೇಳೆ ರಾಜ್ಯ ಸರಕಾರವು ಸಹ ಶಾಲೆಗಳ ಆರಂಭದ ಬಗ್ಗೆ ಸ್ಪಷ್ಟ ನಿಲುವನ್ನು ತಿಳಿಸಿದೆ.
ಕೇಂದ್ರ ಸರಕಾರ ಸೋಂಕು ಓಡಿಸಲು ಸನ್ನದ್ಧ ಎಂದರೆ, ರಾಜ್ಯ ಸರಕಾರ ಶಾಲೆಗಳ ಆರಂಭಕ್ಕೆ ಬದ್ಧ ಎಂದು ತಿಳಿಸಿದೆ. ಇದರಿಂದ ಪೂರ್ವ ನಿಗದಿಯಂತೆ ರಾಜ್ಯಾದ್ಯಂತ ಜನವರಿ 1 ರಿಂದ ಶಾಲೆಗಳು ಆರಂಭವಾಗಲಿದೆ. ಶಾಲೆಗಳ ಪುನರಾರಂಭ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಳಿಗೆ ಕಾರಣವಾಗುವುದು ಮಾತ್ರವಲ್ಲದೆ ನಾನಾ ಸಮಸ್ಯೆಗಳನ್ನೂ ನಿವಾರಿಸಲಿದೆ. ಶಾಲೆಗಳ ಸ್ಥಗಿತದಿಂದ
ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿ ಹಾಗೂ ಮಾನಸಿಕ ಸಮಸ್ಯೆಗಳಂಥ ಹೊಸ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿವೆ.
ಈ ರೀತಿಯ ಸಮಸ್ಯೆಗಳ ನಿವಾರಣೆಯಲ್ಲಿಯೂ ಶಾಲೆಗಳ ಆರಂಭ ಪ್ರಮುಖ ಪಾತ್ರವಹಿಸಲಿದೆ. ಸೋಂಕು ಹರಡುವಿಕೆ ತಡೆಗಾಗಿ ಸರಕಾರ ಸಕಲ ಸಿದ್ಧತೆಗಳನ್ನು ನಡೆಸುತ್ತಿರುವ ವೇಳೆಯಲ್ಲಿ ಗೊಂದಲಗಳಿಗಿಂತ ಸುರಕ್ಷತೆಗೆ ಆದ್ಯತೆ ನೀಡುವ ಅವಶ್ಯಕತೆ ಇದೆ. ಈ ವೇಳೆ ಪೋಷಕರ ಜವಾಬ್ದಾರಿಯೂ ಪ್ರಮುಖ. ಪೋಷಕರು ಗೊಂದಲಗಳಿಗೆ ಒಳಗಾಗದೆ, ಮಕ್ಕಳಲ್ಲಿ ಸುರಕ್ಷತೆಯ ಕ್ರಮಗಳನ್ನು ತಿಳಿಸಿಕೊಡುವ ಮೂಲಕ ಶಾಲೆಗಳ ಆರಂಭಕ್ಕೆ ಆಸಕ್ತಿವಹಿಸಬೇಕಿರುವುದು ಇಂದಿನ ಬಹುಮುಖ್ಯ ಅವಶ್ಯಕತೆ.