Friday, 13th December 2024

ಕಲ್ಲಿದ್ದಲು ಕೋಲಾಹಲ

ದೇಶದೆಲ್ಲೆಡೆ ಈಗ ವಿದ್ಯುತ್ ಸಮಸ್ಯೆಯ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಕಲ್ಲಿದ್ದಲಿನ ಕೊರತೆ. ಇನ್ನು ಮೂರ‍್ನಾಲ್ಕು ದಿನಗಳಿಗೆಗೆ ಆಗುವಷ್ಟು ಮಾತ್ರ ಕಲ್ಲಿದ್ದಲು ಲಭ್ಯವಿದೆ ಎಂಬ ಸುದ್ದಿ ಕಳೆದ ವಾರ ಬಂದಾಗ ಇಡೀ ದೇಶಾದ್ಯಂತ ತಲ್ಲಣ, ಕೋಲಾಹಲ ಉಂಟಾಯಿತು.

ಬಹುಪಾಲ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಆಧಾರಿತ. ಹೀಗಾಗಿ ಅಲ್ಲೆಲ್ಲ ವಿದ್ಯುತ್ ಉತ್ಪಾದನೆ ಕುಂಠಿತ ಗೊಂಡಿತು. ಕೇಂದ್ರ ಕಲ್ಲಿದ್ದಲು ಖಾತೆ ಸಚಿವರು ಇಂದು ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದು ಇನ್ನೂ 23 ದಿನಗಳಿಗೆ ಬೇಕಾದಷ್ಟು ಕಲ್ಲಿದ್ದಲು ಪೂರೈಕೆ ಇದೆ, ಭಯ ಬೇಡ ಎಂದಿದ್ದಾರೆ.

ಆದರೆ ಇದಕ್ಕೆ ಕಾರಣ ಏನು ಎಂಬುದನ್ನು ಯೋಚಿಸಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲಿನ ಬೆಲೆ ಹೆಚ್ಚಿ, ಪೂರೈಕೆ ಕಡಿಮೆಯಾಯಿತು. ಇತ್ತ ದೇಶದಲ್ಲಿ ಮುಂಗಾರಿನ ಕಾರಣ ಆಂತರಿಕ ಉತ್ಪಾದನೆಯೂ ಕುಂಠಿತ ವಾಗಿತ್ತು. ಇದೀಗ ಮುಂಗಾರು ಮುಕ್ತಾಯವಾಗುತ್ತಿರುವದರಿಂದ ಪೂರೈಕೆ ಸುಧಾರಿಸಲಿದೆ ಎಂಬ ಆಶಾಭಾವ ಇದೆ. ಇದೆಲ್ಲ ಸರಿಯೇ. ಆದರೆ ಈ ಪರಿಸ್ಥಿತಿ ಏಕೆ ನಿರ್ಮಾಣವಾಯಿತು ಎಂಬುದೂ ಮುಖ್ಯ. ಅಭಾವ ಉಂಟಾಗುವ ಅಂದಾಜು ಸರಕಾರಕ್ಕೆ ಇರಲಿಲ್ಲವೆ? ಇದ್ದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು.

ಕಲ್ಲಿದ್ದಲು ಕೊರತೆಯಾದರೆ ವಿದ್ಯುತ್ ಉತ್ಪಾದನೆ ಕಡಿಮೆಯಾಗಿ ಅದರಿಂದ ಬೇರೆ ಬೇರೆ ರೀತಿಯ ಪರಿಣಾಮವೂ ಆಗುತ್ತದೆ. ಕಲ್ಲಿದ್ದಲು ಅಭಾವದಿಂದಾಗಿ ವಿದ್ಯುತ್ ಪೂರೈಕೆಗೆ ವ್ಯತ್ಯಯವಾಗುತ್ತದೆ ಎಂಬ ಸುದ್ದಿಗಳನ್ನು ಸ್ವತಃ ವಿದ್ಯುತ್ ಸರಬರಾಜು ಕಂಪನಿಗಳೇ ಹಬ್ಬಿಸಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂಬುದು ವಿದ್ಯುತ್ ಸಚಿವರ ಆರೋಪ. ಇದು ನಿಜವಾಗದ್ದರೆ ಸಲ್ಲದ ನಡವಳಿಕೆ ಎಂದೇ ಹೇಳಬೇಕಾಗುತ್ತದೆ. ಇದೇ ಸಮಯ ಎಂದುಕೊಂಡು ಪ್ರತಿಪಕ್ಷಗಳೂ ಸರಕಾರದ ಮೇಲೆ ಮುಗಿಬಿದ್ದಿವೆ. ದೆಹಲಿ ಕಗ್ಗತ್ತಲಿಗೆ ಸರಿಯಲಿದೆ ಎಂದು ಅಲ್ಲಿನ ಉಪಮುಖ್ಯಮಂತ್ರಿ ಹೇಳಿದ್ದಾರೆ.

ಆದರೆ ಈ ರೀತಿಯ ಹೇಳಿಕೆಗಳು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಸಮಸ್ಯೆ ಇದ್ದರೂ ಅದನ್ನು ಸೂಕ್ತವಾಗಿ ಹೇಗೆ ಪರಿಹರಿಸಬಹುದು ಎಂಬುದರ ಬಗ್ಗೆ ಎಲ್ಲರೂ ಗಮನಹರಿಸಬೇಕೇ ಹೊರತು ಗೊಂದಲ ಸೃಷ್ಟಿಸಬಾರದು. ಇದರಿಂದ ಯಾರಿಗೂ ಲಾಭವಿಲ್ಲ. ಸರಕಾರ ಕೂಡ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು.