Saturday, 14th December 2024

ಇದ್ದುದರಲ್ಲೇ ಯೋಗ್ಯರನ್ನು ಗುರುತಿಸುವುದು ಅನಿವಾರ್ಯ

ಕಳೆದ ೧೦-೧೫ ದಿನಗಳಿಂದ ರಾಜ್ಯದಲ್ಲಿ ಚುನಾವಣೆ ಕಾವು ರಂಗೇರಿತ್ತು. ರಾಷ್ಟ್ರೀಯ ನಾಯಕರ ಸರಣಿ ಸಭೆಗಳು, ಹತ್ತಾರು ಕಿ.ಮೀ ರೋಡ್ ಶೋಗಳು, ಸಿನಿಮಾ ನಟರಿಂದ ಅಬ್ಬರದ ಪ್ರಚಾರಗಳು ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಭಾರೀ ಸದ್ದು ಮಾಡಿದವು. ಅದಕ್ಕೆಲ್ಲ ಇಂದಿನಿಂದ ತೆರೆ ಬೀಳಲಿದೆ. ಆದರೆ, ಪ್ರಚಾರದ ಇಷ್ಟೂ ದಿನಗಳಲ್ಲಿ ಜನರಿಗೆ ಮುಂದಿನ ಸರಕಾರದ ಮೇಲೆ ಯಾವ ಭರವಸೆ ಬಂದಿದೆ? ಯಾವ ಪಕ್ಷ ಅಧಿಕಾರಕ್ಕೆ ಹಿತ ಎಂಬ ಸ್ಪಷ್ಟತೆ ಸಿಕ್ಕಂತಿಲ್ಲ.

ಎಲ್ಲ ಪಕ್ಷಗಳೂ ಆಶ್ವಾಸನೆಯ ಮಹಾಪೂರವನ್ನೇ ಹರಿಸಿವೆ. ಸರಕಾರದ ಖಜಾನೆಯನ್ನು ಬೀದಿಯಲ್ಲಿ ತಂದಿಡಲು ಬೇಕಾದಷ್ಟು ಆಮಿಷಗಳನ್ನು ಒಡ್ಡಿವೆ. ಆದರೆ ಒಂದೇ ಒಂದು ಪಕ್ಷದವರ ಗ್ಯಾರಂಟಿ ಕಾರ್ಡಿನಲ್ಲೂ ನಾನು ಶಾಸಕನಾಗಿ ನಿಮ್ಮ ಸೇವೆ ಮಾಡುವ ಅವಧಿ ಯಲ್ಲಿ ಅನ್ಯ ಪಕ್ಷಕ್ಕೆ ಹಾರುವುದಿಲ್ಲ, ರೆಸಾರ್ಟ್ ಸೇರಿಕೊಂಡು ಭೋಗವಿಲಾಸಗಳಲ್ಲಿ ಮೈಮರೆಯುವುದಿಲ್ಲ, ಕಮಿಷನ್ ಪಡೆಯುವುದಿಲ್ಲ, ಮಗನಿಗೆ ಸೀಟು ಕೊಡಿ ಎಂದು ದುಂಬಾಲು ಬೀಳುವುದಿಲ್ಲ, ಭ್ರಷ್ಟಾಚಾರ ಮಾಡುವುದಿಲ್ಲ, ಶಾಸಕನಾಗಿ ವೇತನ ಮತ್ತು ಬಳಿಕ ನಿವೃತ್ತಿ ವೇತನ ಪಡೆಯುವುದಿಲ್ಲ ಎಂದು ಒಬ್ಬರೂ ಭರವಸೆ ಕೊಟ್ಟಿಲ್ಲ.

ನಾಡು ಎದುರಿಸುತ್ತಿರುವ ಸವಾಲುಗಳು ಹಾಗೂ ಅವನ್ನು ನಿಭಾಯಿಸಲು ರಾಜಕೀಯವರ್ಗವು ಚುನಾವಣಾ ಸಂದರ್ಭದಲ್ಲಿ ಮುಂದಿಡುತ್ತಿರುವ ಪರಿಹಾರೋಪಾಯಗಳ ಕುರಿತೂ ಎಲ್ಲೂ ಭರವಸೆ ಸಿಕ್ಕಿಲ್ಲ. ಭರಪೂರ ಕೊಡುಗೆಗಳನ್ನು ಕೇಳಿ ಪ್ರಶ್ನಿಸಬೇಕಾದ ಜನರೂ ಬಾಯಿ ಮುಚ್ಚಿಕೊಂಡಿದ್ದಾರೆ. ಸಮಾಜದ ಈ ವ್ಯಾಪಕ ನಿರಾಸಕ್ತಿಯನ್ನು ರಾಜಕೀಯವರ್ಗ ಸ್ಪಷ್ಟವಾಗಿ ಗುರುತಿಸಿ ದಂತಿದೆ.

ಹೀಗಾಗಿ, ಚುನಾವಣೆಗೆ ಬರೀ ಎರಡು ವಾರ ಉಳಿಯಿತು ಎನ್ನುವಾಗಲಷ್ಟೇ ಬಹುಪಾಲು ಪಕ್ಷಗಳು ತಮ್ಮ ಪ್ರಣಾಳಿಕೆ ಪ್ರಕಟಿಸಿ ದವು. ಸುಲಭ ಮತ ಗಳಿಕೆ ಉದ್ದೇಶದ ಉಚಿತ ಕೊಡುಗೆಗಳನ್ನು ಮಾತ್ರ ಸಾರಿದವು. ಹೀಗಾಗಿ, ಈಗ ಜನತೆಯ ಮುಂದಿರುವ
ಆಯ್ಕೆ ಒಂದೇ. ರಾಜಕೀಯ ವರ್ಗವು ಮುಂದಿಡುವ ಪ್ರಣಾಳಿಕೆಗಳು ಹಾಗೂ ಪ್ರಚಾರದ ಬಣ್ಣದ ಮಾತುಗಳಿಗೆ ಜೋತು ಬೀಳದೆ ಜಾಗೃತ ಪ್ರಜೆಗಳಾಗುವುದು. ಎಲ್ಲ ಪಕ್ಷಗಳಲ್ಲೂ ಒಂದಿಲ್ಲೊಂದು ತೂತು ಇರುವುದಾದರೂ ಇದ್ದುದ್ದರಲ್ಲೇ ಒಬ್ಬರನ್ನು ಚುನಾ ಯಿಸುವುದು ಅನಿವಾರ್ಯ. ಹೀಗಾಗಿ ‘ಯೋಗ್ಯ’ರನ್ನು ಗುರುತಿಸಿ, ತಪ್ಪದೇ ಮತ ಚಲಾಯಿಸುವುದು.