ಕೋವಿಡ್‌ನಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ಸರಕಾರ ಪರವಾಗಿ ಒಂದಷ್ಟು ಭರವಸೆ ಗಳನ್ನು ವ್ಯಕ್ತಪಡಿಸಿದ್ದಾರೆ. ಜನರ ರಕ್ಷಣೆ ಸರಕಾರದ ಜವಾಬ್ದಾರಿ. ಈ ವಿಚಾರದಲ್ಲಿ ಸರಕಾರವು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಲಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಸೋಂಕು ಕಡಿಮೆ ಆಗಲು ವೈಜ್ಞಾನಿಕವಾಗಿ ಯಾವೆಲ್ಲ ಕ್ರಮ ತೆಗೆದುಕೊಳ್ಳಬೇಕೋ ಆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಇದನ್ನು ಅರ್ಥಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕೆಂಬುದು ಸರಕಾರದ ಮಾತು. ಆಕ್ಸಿಜನ್, ಸ್ಟಿರಾಯಿಡ್, ರೆಮಿಡಿ ಸಿವರ್ ಎಲ್ಲಾ ಔಷಧಿಗಳ ಲಭ್ಯತೆಯನ್ನೂ ಹೆಚ್ಚು ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ವೈದ್ಯರಿಗೂ ಹೆಚ್ಚುವರಿ
ಜವಾಬ್ದಾರಿ ಜತೆ ಹೆಚ್ಚುವರಿ ವೇತನ ನೀಡಲು ಚಿಂತನೆ ನಡೆಸಲಾಗಿದೆ.
ನಾನ್ ಕೋವಿಡ್ ರೋಗಿಗಳನ್ನು ಆದ್ಯತೆ ಮೇರೆಗೆ ಡಿಸ್ ಚಾರ್ಜ್ ಮಾಡಲು ಸೂಚಿಸಲಾಗಿದೆ. ಸರಕಾರದಿಂದ ಯಾವೆಲ್ಲ ಪ್ರಯತ್ನಗಳಾಗಬೇಕೋ ಅವು ನಡೆಯುತ್ತಿವೆ. ಜನರು ಚಿಕಿತ್ಸೆ ವಿಚಾರದಲ್ಲಿ ಗೊಂದಲಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವರು ಜನತೆಗೆ ಮಾಡಿರುವ ಮನವಿ. ಆದರೆ ಈ ಹೇಳಿಕೆಗೆ ಎಚ್ .ಡಿ.ಕುಮಾರ ಸ್ವಾಮಿಯವರಿಂದ ಅಪಸ್ವರ ವ್ಯಕ್ತವಾಗಿದೆ. ಸರಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆಯೇ ಹೊರತು ಈಗಾಗಲೇ ಸೋಂಕಿಗೆ ತುತ್ತಾಗಿರುವ ಜನರನ್ನು ರಕ್ಷಿಸಲು, ಅವರ ಜೀವ ಉಳಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಹೇಳಿಲ್ಲ ಎಂದು ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ಹೊಸ ಮಾರ್ಗಸೂಚಿಗಳು ವಿಪಕ್ಷ ನಾಯಕರಂಥವರಿಗೆ ಸ್ಪಷ್ಟವಾಗಿಲ್ಲ ಎಂದಾದ ಮೇಲೆ ಜನತೆಗೆ ಹೇಗೆ ಅರ್ಥವಾದೀತು. ಪ್ರಸ್ತುತ ಸನ್ನಿವೇಶದಲ್ಲಿ ಜನತೆಗೆ ಬೇಕಿರುವುದು ಮಾರ್ಗಸೂಚಿಗಳು, ಭರವಸೆಗಳು, ವಿರೋಧಗಳಿಗಿಂತ ಮುಖ್ಯವಾಗಿರುವುದು ಚಿಕಿತ್ಸೆ. ಆದ್ದರಿಂದ ಸೂಕ್ತ ಚಿಕಿತ್ಸೆಗೆ ಸಮರ್ಪಕ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಜನರ ಮನದಲ್ಲಿ ಉಂಟಾಗಿರುವ ಆತಂಕವನ್ನು
ದೂರಮಾಡಬೇಕಾದ ಸವಾಲು ಇದೀಗ ಸರಕಾರದ ಮೇಲಿದೆ.