Wednesday, 11th December 2024

ಕಾಂಗ್ರೆಸ್‌ಗೆ ತುರ್ತು ಪರಿಸ್ಥಿತಿ

ಸತತ ಸೋಲುಗಳಿಂದ ಜರ್ಜತರಾಗಿರುವ ಕಾಂಗ್ರೆಸ್‌ಗೆ ಭಾನುವಾರ ಮತ್ತೊಂದು ಹೊಡೆತ ಬಿದ್ದಿದೆ. ಮುಂಬೈನಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಮಿಲಿಂದ್ ದಿಯೋರಾ ಅವರು ಪಕ್ಷಕ್ಕೆ ಗುಡ್ ಬೈ ಹೇಳಿದ್ದು, ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ.

ಮಿಲಿಂದ್ ದಿಯೋರಾ ನಿರ್ಗಮನೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತ ಬಳಗದ ಬಹುತೇಕರು ಪಕ್ಷ ತೊರೆದಂತಾಗಿದೆ. ೨೦೧೯ ರಿಂದ ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಪಕ್ಷ ತೊರೆಯುತ್ತಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ೧೦ಕ್ಕೂ ಹೆಚ್ಚು ಪ್ರಮುಖ ನಾಯಕರು ಕಾಂಗ್ರೆಸ್ ತೊರೆದಿzರೆ. ಇವರೆ ಗಾಂಧಿ ಕುಟುಂಬಕ್ಕೆ ಆಪ್ತರಾದವರು ಎಂಬುದು ಮುಖ್ಯ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಮಣಿಪುರದಿಂದ ಮಹಾರಾಷ್ಟ್ರದವರೆಗೂ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಭಾನುವಾರ ಆರಂಭಿಸಿದೆ.

ಆದರೆ, ತಮ್ಮದೇ ಪಕ್ಷದ ನಾಯಕರನ್ನು ಹಿಡಿದಿಟ್ಟುಕೊಳ್ಳಲಾಗುತ್ತಿಲ್ಲ. ಈ ವಿದ್ಯಮಾನವು ೧೩೫ ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‌ಗೆ ಇದೀಗ ತುರ್ತು ಪರಿಸ್ಥಿತಿ ಎದುರಾಗಿದೆಯಾ ಅನ್ನೋ ಅನುಮಾನ ಮೂಡಿಸಿದೆ. ದೇಶದ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷಕ್ಕಿದ್ದ ಅನುಭವ ಇನ್ಯಾವ ಪಕ್ಷಕ್ಕೂ ಇಲ್ಲ. ಕಾರಣ ಸ್ವತಂತ್ರ ಭಾರತಲ್ಲಿ ಆಡಳಿತ ಶುರುಮಾಡಿದ ಕಾಂಗ್ರೆಸ್ ಸರಿಸುಮಾರು ೭೦ ವರ್ಷ ಆಳ್ವಿಕೆ ಮಾಡಿದೆ. ಇಷ್ಟು ಅನುಭವ ಇರುವ ಪಕ್ಷದೊಳಗೆ ಇದೀಗ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆಯಾ ಎನ್ನುವ ಅನುಮಾನಗಳು ಮೂಡುವಂತಾಗಿದೆ. ಪಕ್ಷ ಬಿಟ್ಟ ಯಾವ ನಾಯಕರೂ ರಾಹುಲ್ ಗಾಂಧಿಯನ್ನು ಬೊಟ್ಟು ಮಾಡಿಲ್ಲ.

ಆದರೆ ಕಾಂಗ್ರೆಸ್ ಪಕ್ಷದ ನೀತಿ, ಸಿದ್ಧಾಂತಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸರಿಯಾದ ಗುರಿ, ಉದ್ದೇಶವಿಲ್ಲ. ಕಾಂಗ್ರೆಸ್ ನೀತಿ ಗಳಲ್ಲಿ ಸ್ಥಿರತೆ ಇಲ್ಲ. ತಮಗೆ ಬೇಕಾದ ರೀತಿಯಲ್ಲಿ, ರಾಜ್ಯದಿಂದ ರಾಜ್ಯಕ್ಕೆ ಕಾಂಗ್ರೆಸ್ ನೀತಿಗಳು ಬದಲಾಗುತ್ತದೆ ಎಂಬುದು ಬಹುತೇಕ ಆಕ್ಷೇಪ. ಯುವ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ರಾಜಕೀಯ ಅಲೆ ಸೃಷ್ಟಿಸಲು ಹೊರಟ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾದ ಅಂಶಗಳತ್ತ ಗಮನಹರಿಸಬೇಕಿದೆ. ಇಲ್ಲವಾದರೆ ದೇಶದ ದೊಡ್ಡ ಪಕ್ಷವೊಂದು ಒಬ್ಬಂಟಿಯಾದೀತು.