Friday, 13th December 2024

ಗುತ್ತಿಗೆ ಪದ್ಧತಿ ಬದಲಾಗಲಿ

ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬಳಿಕ ರಾಜ್ಯದಲ್ಲಿನ ಗುತ್ತಿಗೆದಾರರ ಗೋಳಿನ
ಕುರಿತು ಸರಣಿ ಕಥೆಗಳೇ ಹುಟ್ಟಿಕೊಳ್ಳುತ್ತಿವೆ.

ಸಂತೋಷ್‌ಗೆ ಕಾಮಗಾರಿಯ ಬಿಲ್ ಕೊಡಲು ವಿಳಂಬವಾಗಿದ್ದಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರು ನೇರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಡೆತ್‌ನೋಟ್ ನಲ್ಲಿ ಆರೋಪ ಮಾಡಿರುವುದರಿಂದ ಪ್ರತಿಪಕ್ಷಗಳ ನಾಯಕರು ಸಚಿವರ ವಿರುದ್ಧ ಮುಗಿಬಿದ್ದು, ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ತನಿಖೆ ಮಾಡಿ, ಸತ್ಯಾಂಶ ತಿಳಿಯುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಆದಷ್ಟು ಬೇಗ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಗುತ್ತಿಗೆದಾರರಾಗಲು ಇರುವ ಮಾನದಂಡಗಳು ಸರಿ ಇವೆಯೇ ಎಂಬುದರ ಬಗ್ಗೆಯೂ ಗಂಭೀರ ಚರ್ಚೆಯಾಗಬೇಕಿದೆ.

ವಾಸ್ತವವಾಗಿ ಎಂಜಿನಿಯರಿಂಗ್ ಪದವೀಧರರು ಗುತ್ತಿಗೆದಾರರ ಪ್ರಮಾಣ ಪತ್ರ ಪಡೆದು, ನ್ಯಾಯಬದ್ಧವಾಗಿ ಟೆಂಡರ್ ಮೂಲಕ ಗುತ್ತಿಗೆ ಕೆಲಸಗಳನ್ನು ಪಡೆದು, ಪೂರ್ಣಗೊಳಿಸಬೇಕು. ಆದರೆ ರಾಜ್ಯದಲ್ಲಿ ಶೇ.88ಕ್ಕೂ ಹೆಚ್ಚು ಗುತ್ತಿಗೆದಾರರು ಯಾವುದೇ ಎಂಜಿನಿಯರಿಂಗ್ ಪದವಿ ಮುಗಿಸಿಲ್ಲ ಎಂದು ಅಂಕಿ ಅಂಶಗಳು ಹೇಳುತ್ತವೆ.

ಚಿಕ್ಕ ಪುಟ್ಟ ಚರಂಡಿ ನಿರ್ಮಾಣ ಮಾಡಿಕೊಂಡಿದ್ದವನು ದಿನಕಳೆದಂತೆ ರಾಜಕೀಯ ನಾಯಕರ ಸಖ್ಯ ಬೆಳೆಸಿಕೊಂಡು ಇದ್ದಕ್ಕಿದ್ದಂತೆ ಪ್ರಥಮ ದರ್ಜೆ ಗುತ್ತಿಗೆದಾರನಾಗುತ್ತಾನೆ. ಇದರ ಹಿಂದೆ ಹಲವು ಕೈಗಳು ಕೆಲಸ ಮಾಡಿರುತ್ತವೆ ಎಂಬುದು ಬಹಿರಂಗ ಸತ್ಯ. ಹೀಗೆ ಅನ್ಯ ಮಾರ್ಗದಿಂದಲೇ ಪ್ರಥಮ ದರ್ಜೆ ಗುತ್ತಿಗೆದಾರನಾಗಲು ಆತ ಹತ್ತಾರು ಅಧಿಕಾರಿಗಳಿಗೆ, ಹತ್ತಾರು ಜನಪ್ರತಿನಿಧಿಗಳಿಗೆ ಲಂಚದ ರುಚಿ ತೋರಿಸಿರುತ್ತಾನೆ.

ಹಾಗಾದರೆ ಇಲ್ಲಿ ಗುತ್ತಿಗೆದಾರನೇ ಮೊದಲು ಭ್ರಷ್ಟಾಚಾರಿ ಅಲ್ಲವೇ? ಯಾವುದೇ ಒಂದು ಅಭಿವೃದ್ಧಿ ಶೇ.100 ರಷ್ಟು ಬಂಡವಾಳ ಹಾಕಿ ಪೂರ್ಣವಾಗಿರುವ ಉದಾಹರಣೆ ಇದೆಯೇ? ಖಂಡಿತ ಇಲ್ಲ, ಇರುವುದಕ್ಕೆ ಸಾಧ್ಯವೂ ಇಲ್ಲ. ಯಾಕೆಂದರೆ ಲಾಭದ ಉದ್ದೇಶದಿಂದಲೇ ಒಬ್ಬ ಗುತ್ತಿಗೆದಾರನು ಗುತ್ತಿಗೆ ಪಡೆದಿರುತ್ತಾನೆ ಎಂದು ಭಾವಿಸಿದರೆ, ಕನಿಷ್ಠ ಶೇ.80ರಷ್ಟು ಕಾಮಗಾರಿ ಮಾಡಿ, 20 ರಷ್ಟು ಲಾಭ ಮಾಡಿಕೊಂಡಿ ರುವವರಾದರೂ ಸಿಗುತ್ತಾರೆಯೇ? ಅಂಥವರ ಸಂಖ್ಯೆಯೂ ವಿರಳ. ಹೀಗಾಗಿ ಒಟ್ಟಾರೆ ಈ ಗುತ್ತಿಗೆದಾರರಾಗಲು ಇರುವ ಮಾನದಂಡಗಳ ಬದಲಾವಣೆ ಮಾಡಬೇಕಾದ ಅಗತ್ಯವಿದೆ. ಗುತ್ತಿಗೆ ಕೊಡುವ ಪದ್ಧತಿಯಲ್ಲೂ ಇನ್ನಷ್ಟು ಪಾರದರ್ಶಕದ ಅಗತ್ಯವಿದೆ.