Wednesday, 11th December 2024

ದೇಶದ ಬಹುದೊಡ್ಡ ವಿವಾದಕ್ಕೆ ಮುಕ್ತಿ

ಅಯೋಧ್ಯೆ ರಾಮ ಮಂದಿರ ವಿವಾದ ಮತ್ತು ಬಾಬ್ರಿ ಮಸೀದಿ ಧ್ವಂಸ ಪ್ರಕರಣಗಳು ದೇಶವನ್ನು ಬಹುತೇಕವಾಗಿ ಕಾಡಿದ ಮತ್ತು ಬಹುಕಾಲದ ಬಹುದೊಡ್ಡ ವಿವಾದಗಳು. ಈ ವಿವಾದದ ಕಾರಣ ದೇಶದಲ್ಲಿ ಮೂರು ದಶಕಗಳ ಕಾಲ ಅಶಾಂತಿಯ ವಾತವರಣ ಸೃಷ್ಟಿಯಾಗಿದ್ದು ದುರಂತ.

ಇದು ಅನ್ಯಧರ್ಮೀಯರ ನಡುವೆ ಕಂದಕ ಸೃಷ್ಟಿಯಾಗಲು ಕಾರಣವಾಗಿದ್ದಷ್ಟೇ ಪ್ರಮಾಣದಲ್ಲಿ ರಾಜಕೀಯ ಪಕ್ಷಗಳ ಆರೋಪ – ಪ್ರತ್ಯಾರೋಪಗಳ ವಸ್ತುವಾಗಿ ಪರಿಣಮಿಸಿದ್ದು ದೇಶದ ಬಹುದೊಡ್ಡ ದುರಂತ. ಈ ಸಂಘರ್ಷವನ್ನು ಕೊನೆಗಾಣಿಸುವಲ್ಲಿ ಮಹತ್ವವಾದ ದಿನ 2019ರ ನವೆಂಬರ್ 9. ಅದು ಅಯೋಧ್ಯೆ ಭೂವಿವಾದ ಪ್ರಕರಣ ಕುರಿತು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠದಲ್ಲಿ ಸತತ 40 ದಿನಗಳ ಕಾಲ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದ ಮಹತ್ವ ದಿನ.

ಅಂದಿನ ತೀರ್ಪನ್ನು ಇಡೀ ದೇಶವೇ ಸಂಭ್ರಮದಿಂದ ಸ್ವಾಗತಿಸಿತು. ಆ ದಿನವೇ ದೇಶದ ಬಹು ದೊಡ್ಡ ವಿವಾದವೊಂದು ಬಗೆಹರಿದಂತಾಯಿತು. ಆದರೂ ಅಯೋಧ್ಯೆ ಭೂವಿವಾದ ಪರಿಹಾರವಾದರೂ, ಅದರ ಹಿನ್ನೆಲೆಯಲ್ಲಿ ಉಂಟಾದ ಗಲಭೆಯ ತೀರ್ಪು ಬಾಕಿ ಉಳಿದಿದ್ದರಿಂದ ದೇಶದಲ್ಲಿ ವಿವಾದ ಇನ್ನೂ ಜೀವಂತವಾಗಿತ್ತು.

ಇದೀಗ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯ ತೀರ್ಪು ಹೊರಬಿದ್ದಿದ್ದು, ವಿವಾದಕ್ಕೆ ಸಂಪೂರ್ಣ ಮುಕ್ತಿ ಸಿಕ್ಕಂತಾಗಿದೆ. ಅಯೋಧ್ಯೆಯಲ್ಲಿ ಒಂದೆಡೆ ರಾಮ ಮಂದಿರ ಹಾಗೂ ಮತ್ತೊಂದೆಡೆ ಮಸೀದಿ ಕಾರ್ಯಗಳು ಭರದಿಂದ ಸಾಗುತ್ತಿರುವ ಸಂದರ್ಭದಲ್ಲಿ ದೇಶಕಂಡ ಬಹುದೊಡ್ಡ
ವಿವಾದವೊಂದು ಅಂತ್ಯಕಂಡಂತಾಗಿದೆ.