ಕರೋನಾ ಸೋಂಕು ಕರ್ನಾಟಕದಲ್ಲಿ ನಿಯಂತ್ರಣಕ್ಕೆ ಬರುತ್ತಿದೆ ಎನ್ನುವ ಹೊಸ್ತಿಲಲ್ಲಿಯೇ ಇಂಗ್ಲೆಂಡ್‌ನಲ್ಲಿ ವಿಭಿನ್ನ ಆರ್‌ಎನ್‌ಐ ತಂತುವಿನ ಕರೋನಾ ವೈರಾಣು ಕಾಣಿಸಿಕೊಂಡಿದೆ.
ರಾಜ್ಯದಲ್ಲಿ ಮತ್ತೊಮ್ಮೆ ಕರೋನಾ ತುರ್ತು ಪರಿಸ್ಥಿತಿಯನ್ನು ಹೇರುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ. ಆದರೆ ಈ ಬಾರಿ ಕಳೆದ ಬಾರಿ ಸೃಷ್ಟಿಸಿದಂತೆ ಭೀತಿ ಸೃಷ್ಟಿಸುವ ಬದಲು ಜಾಗೃತಿಯೊಂದಿಗೆ ಜನರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡ ಬೇಕಿದೆ. ಕರೋನಾದ ಇನ್ನೊಂದು ಅಂಶದ ಕಾಣಿಸಿಕೊಳ್ಳುತ್ತಿದ್ದಂತೆ ಇಂಗ್ಲೆಂಡ್ ನಿಂದ ಆಗಮಿಸುವವರ ಮೇಲೆ ರಾಜ್ಯ ಸರಕಾರ ನಿಗಾವಹಿಸಲು, ಕಡ್ಡಾಯ ಕೋವಿಡ್ ಟೆಸ್ಟ್ ಮಾಡಿಸಲು ನಿರ್ಧರಿಸಿದೆ.
ಇದಿಷ್ಟೇ ಅಲ್ಲದೆ ಕೆಲವರು ಇದನ್ನು ಎರಡನೇ ಸುತ್ತಿನ ಕರೋನಾ ಎನ್ನುವ ಆತಂಕವನ್ನು ಜನರಲ್ಲಿ ಹುಟ್ಟುಹಾಕುತ್ತಿದ್ದಾರೆ. ಕಳೆದ ಬಾರಿಯೂ ಇದೇ ರೀತಿಯ ಹೇಳಿಕೆಗಳಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿ, ಕರೋನಾಕ್ಕಿಂತ ಹೆಚ್ಚು, ಕರೋನಾ ಬಂದಿದೆ
ಎಂದರೆ ಹೃದಯಾಘಾತ ಅಥವಾ ಖಿನ್ನತೆಗೆ ಒಳಗಾಗಿ ಸಾಯುವವರ ಸಂಖ್ಯೆ ಹೆಚ್ಚಳವಾಗಿತ್ತು. ಈ ಬಾರಿ ಇದನ್ನು ಮರುಕಳಿಸ ದಂತೆ ನೋಡಿಕೊಳ್ಳಬೇಕು.
ಇಡೀ ರಾಜ್ಯವೇ ಅನ್‌ಲಾಕ್ ಆಗಿರುವ ಈ ಸಮಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎನ್ನುವ ಸ್ಪಷ್ಟ ಮಾತನ್ನು ಸರಕಾರ ಹೇಳಿದೆ. ಇಂದಿನ ಪರಿಸ್ಥಿತಿಯಲ್ಲಿ ಮತ್ತೊಂದು ಲಾಕ್‌ಡೌನ್ ಅನ್ನು ಯಾರು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ನಿಜ. ಆದರೆ ಕಳೆದ ಬಾರಿಯ ತಪ್ಪುಗಳಿಂದ ಕಲಿತಿರುವ ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಅಗತ್ಯ ಕ್ರಮವಹಿ
ಸಬೇಕಿದೆ. ಇನ್ನು ಇಂಗ್ಲೆಂಡ್‌ನಿಂದ ಆಗಮಿಸುವವರಿಗೆ ಮಂಗಳವಾರದಿಂದ ಕೋವಿಡ್ ಪರೀಕ್ಷೆ ನಡೆಸಿ, ಕ್ವಾರಂಟೈನ್ ಮಾಡುವುದಾಗಿ ಸರಕಾರ ಹೇಳಿದೆ.
ಹಾಗಾದರೆ ಇಲ್ಲಿಯವರೆಗೆ ಬಂದಿರುವವರಲ್ಲಿ ಸೋಂಕಿದ್ದರೆ ಗತಿಯೇನು? ಅವರನ್ನು ಕ್ವಾರಂಟೈನ್ ಮಾಡಿಸುವ ಮಾರ್ಗಸೂಚಿ ಪಾಲನೆಯಾಗುವುದಿಲ್ಲವೇ ಎನ್ನುವ ಪ್ರಶ್ನೆಗಳು ಉದ್ಭವಿಸುತ್ತದೆ. ಇದನ್ನೆಲ್ಲ ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಗಳನ್ನು ಕೈಗೊಳ್ಳಬೇಕು.