Friday, 13th December 2024

ಕೋವಿಡ್ 3ನೇ ಅಲೆ: ಎಚ್ಚೆತ್ತುಕೊಳ್ಳಲಿ ಸರಕಾರ

ಕರೋನಾ ಎರಡನೇ ಅಲೆಯ ಆರ್ಭಟ ತಗ್ಗಿ ನಿಟ್ಟುಸಿರು ಬಿಡುತ್ತಿರುವ ಬೆನ್ನಲ್ಲೇ ಮೂರನೇ ಅಲೆಯ ಎಚ್ಚರಿಕೆ ಸಂದೇಶಗಳು ಕೇಳಿಬರುತ್ತಿವೆ. ಆದರೆ ಮಳೆಯ ಆರ್ಭಟ, ರಾಜಕೀಯ ಸ್ಥಿತ್ಯಂತರಗಳ ಮೇಲಾಟದ ನಡುವೆ ಅದು ಮರೆಯಾಗುತ್ತಿದೆ. ಎರಡನೇ ಅಲೆ ಪ್ರಾರಂಭದಿಂದಲೂ ಮತ್ತು ಈಗಲೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದು ಮಹಾರಾಷ್ಟ್ರ ಮತ್ತು ಕೇರಳದಲ್ಲಿ.

ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ಸಮೀಕ್ಷೆಯ ವರದಿ ಪ್ರಕಾರ, ಕೇರಳದಲ್ಲಿ ಪ್ರತಿ ಆರು ಪ್ರಕರಣಗಳಲ್ಲಿ ಒಂದು ಪ್ರಕರಣ ಪತ್ತೆಯಾದರೆ, ಮಹಾರಾಷ್ಟ್ರದಲ್ಲಿ ಪ್ರತಿ ಹನ್ನೆರಡು ಪ್ರಕರಣಗಳಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಇವೆರಡೂ ಕರ್ನಾಟಕದ ನೆರೆಯ ರಾಜ್ಯಗಳೇ ಆಗಿರುವುದರಿಂದ ಮೂರನೇ ಅಲೆ ದೂರದಲ್ಲೋ ಇದೆ ಎಂದು ಭಾವಿಸಿ ಮೈಮರೆಯುವಂತಿಲ್ಲ.

ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡಿದ್ದರೂ ಸಚಿವ ಸಂಪುಟ ರಚನೆಯಾಗಿಲ್ಲ. ಮುಖ್ಯಮಂತ್ರಿಗಳು ಒಬ್ಬರೇ ಎಲ್ಲ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡು 3ನೇ ಅಲೆ ಎದುರಿಸುವುದು ಕಷ್ಟದ ಸಾಹಸ. ಕರೋನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಜನರು ಚಾಲ್ತಿಯಲ್ಲಿರುವ ನಿಯಮ ಗಳನ್ನು ಗಾಳಿಗೆ ತೂರುತ್ತಿದ್ದಾರೆ.

ಹಿಂದಿನ ದಿನಗಳ ಭೀಕರ ಅನಾಹುತಗಳು ಮರುಕಳಿಸಬಾರದು. ಎಲ್ಲವನ್ನೂ ಸರಕಾ ರವೇ ನೋಡಿಕೊಳ್ಳಲಿ ಎಂಬ ಮನೋಭಾವನೆಯಿಂದ ಹೊರಬಂದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ ಸೇರಿದಂತೆ ಮತ್ತಿತರ ಕರೋನಾ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕರೋನಾ ಓಡಿಸಲು ಸಹಕಾರ ನೀಡಬೇಕಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ, ಬೆಡ್ ವ್ಯವಸ್ಥೆ ಸೇರಿದಂತೆ ಮತ್ತಿತರ ವೈದ್ಯಕೀಯ ಪರಿಹಾರಗಳತ್ತ ಈಗಿನಿಂದಲೇ ಕಾರ್ಯಪ್ರವರ್ತರಾಗಬೇಕಿದೆ.