ಭಾರತೀಯರ ಪಾಲಿಗೆ ಕ್ರಿಕೆಟ್ ಒಂದು ಪ್ರತ್ಯೇಕ ಧರ್ಮ ಎಂಬ ಮಾತಿದೆ. ಜಾತಿ, ಮತ, ಭಾಷೆ, ಪ್ರಾದೇಶಿಕ ಎಲ್ಲೆಗಳನ್ನು ಮೀರಿ, ಗೆದ್ದಾಗ ಎಲ್ಲರೂ ಒಂದಾಗಿ ಸಂಭ್ರಮಿಸುವ, ಸೋತಾಗ ಎಲ್ಲರೂ ಬೇಸರಿಸುವ ಕ್ರೀಡೆ ಎಂದರೆ ಅದು ಕ್ರಿಕೆಟ್. ಇದಕ್ಕೆ ನಿದರ್ಶನ ಎಂಬಂತೆ, ೧೭ ವರ್ಷಗಳ ಬಳಿಕ ಟಿ-೨೦ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳ ಮಹಾ ಪೂರ ಹರಿದು ಬರುತ್ತಿದೆ. ಜನರು ತಾವೇ ಕಪ್ ಗೆದ್ದಷ್ಟು ಸಂಭ್ರಮಿಸುತ್ತಿದ್ದಾರೆ.
ಇದೀಗ ವಿಜೇತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ೧೨೫ ಕೋಟಿ ರೂ.ಗಳ ಭರ್ಜರಿ ಬಹುಮಾನ ಘೋಷಿಸಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐಗೆ ಇದು ದೊಡ್ಡ ಮೊತ್ತವೇನೂ ಅಲ್ಲ. ಆದರೆ ಇತರೇ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ
ದೇಶದ ಲಕ್ಷಾಂತರ ಕ್ರೀಡಾಪಟುಗಳ ಪಾಲಿಗಿದು ಬಹು ದೊಡ್ಡ ಮೊತ್ತ. ರೈಲು, ವಿಮಾನಪ್ರಯಾಣಕ್ಕೆ ದುಡ್ಡಿಲ್ಲದೆ, ಸ್ಪರ್ಧೆಯನ್ನೇ ಕೈ ಬಿಡುವ ಸಾವಿರಾರು ಪ್ರತಿಭಾವಂತ ಕ್ರೀಡಾಪಟುಗಳಿಗಂತೂ ಇದು ಕನಸಿನ ಮೊತ್ತ.
ಇದೇ ತಿಂಗಳ ೨೬ರಿಂದ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ. ಕಳೆದ ಒಲಿಂಪಿಕ್ಸ್ ನಲ್ಲಿ ಭಾರತ ಉತ್ತಮ ನಿರ್ವಹಣೆ ತೋರಿತ್ತು. ಆದರೆ ೧೪೦ ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶಕ್ಕೆ ಈ ತನಕ ಎರಡಂಕೆಯ ಪದಕ ಪಡೆಯಲೂ ಸಾಧ್ಯವಾಗಿಲ್ಲ ಎನ್ನುವುದು ಬೇಸರದ ವಿಚಾರ. ಬಿಸಿಸಿಐ ನೀಡಿದ ಬಹುಮಾನದ ಶೇ. ಒಂದರಷ್ಟು ಪ್ರೋತ್ಸಾಹಧನ ಸಿಕ್ಕಿದರೂ ದೇಶದ ಸಾವಿರಾರು ಪ್ರತಿಭೆಗಳಿಗೆ ಸಂಜೀವಿನಿಯಾಗುತ್ತಿತ್ತು. ರಾಷ್ಟ್ರೀಯ ಕ್ರೀಡೆಯಾದ ಹಾಕಿ, ಲಕ್ಷಾಂತರ ಅಭಿಮಾನಿಗಳಿರುವ -ಟ್ಬಾಲ್, ಕಬಡ್ಡಿಯಂತಹ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಈ ಕ್ರೀಡೆಯಿಂದಲೇ ತಮ್ಮ ಜೀವನ ನಡೆಸಲು ಸಾಧ್ಯವಿಲ್ಲ.
ಇದೇ ರೀತಿ ನೂರಾರು ವೈಯಕ್ತಿಕ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಲ್ಲಿ ಕೆಲವೇ ಕೆಲವು ಮಂದಿ ರೈಲ್ವೆ, ಬ್ಯಾಂಕಿಂಗ್ ನಂತಹ ಸರಕಾರಿ ಹುದ್ದೆ ಗಳಲ್ಲಿದ್ದುಕೊಂಡು ತಮ್ಮ ಕ್ರೀಡಾ ಜೀವನವನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ವಿಶ್ವದ ಶ್ರೀಮಂತ ಕ್ರೀಡಾಮಂಡಳಿಗಳಲ್ಲಿ ಒಂದಾದ ಬಿಸಿಸಿಐ, ಟೀಮ್ ಇಂಡಿಯಾ ಗೆದ್ದ ಸಂಭ್ರಮದಲ್ಲಿ ದೇಶದ ಎಲ್ಲ ತಾಲ್ಲೂಕುಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ನೆರವು ಘೋಷಿಸಬಹುದಿತ್ತು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದವರಿಗೆ ಬಹುಮಾನ ನೀಡುವ ಘೋಷಣೆ ಮಾಡಬಹುದಿತ್ತು.
ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಪ್ರಮುಖ ಕ್ರೀಡಾಕೂಟಗಳಿಂದ ದೂರವುಳಿಯುವ ಕ್ರೀಡಾಪಟುಗಳ ನೆರವಿಗಾಗಿಯೇ ಪ್ರತ್ಯೇಕ ದತ್ತಿನಿಧಿಯೊಂದನ್ನು ಸ್ಥಾಪಿಸಬಹುದಿತ್ತು. ಬಿಸಿಸಿಐ ದೇಶದ ಉಳಿದ ಕ್ರೀಡೆಗಳಿಗೆ ಪೋಷಕ ಸಂಸ್ಥೆಯಾದರೆ, ಕ್ರೀಡಾಲೋಕದಲ್ಲಿ ಅಚ್ಚರಿಯನ್ನೇ ಸಾಧಿಸಬಹುದು. ಒಲಿಂಪಿಕ್ಸ್ ನಲ್ಲಿ ಕೊರಿಯಾ, ಚೀನಾದಂತಹ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ನಿಲ್ಲಲೂ ಸಾಧ್ಯವಿದೆ.