Saturday, 14th December 2024

ಅಪಾಯಕಾರಿ ವಿದ್ಯಮಾನ

ಜಾಗತಿಕವಾಗಿ ವಿವಿಧ ದೇಶಗಳನ್ನು ಬಾಧಿಸುತ್ತಿರುವ ಕರೋನಾ ನಿವಾರಣೆಯ ವಿಷಯ ಕಡೆಗಣನೆಯಾಯಿತೆ? ಇದರಿಂದ
ಮತ್ತೊಮ್ಮೆ ಅಪಾಯಕಾರಿ ದಿನಗಳು ಸಮೀಸುತ್ತಿವೆಯೇ? ಎನ್ನುವ ಆತಂಕ ಎದುರಾಗಿದೆ. ಕರೋನಾ ಆರಂಭಗೊಂಡ ದಿನಗಳಲ್ಲಿ ನಿವಾರಣೆಗಾಗಿ ನೀಡಿದ ಆದ್ಯತೆ ಇಂದು ಕಡಿಮೆಯಾಗಿದೆ.

ಇದರಿಂದ ಸೋಂಕಿತರ ಪ್ರಕರಣಗಳಲ್ಲಿ ಮತ್ತೊಮ್ಮೆ ಏರಿಕೆ ಕಂಡುಬರುತ್ತಿದೆ. ಮತ್ತೊಂದೆಡೆ ಲಸಿಕೆಗಳನ್ನು ಟ್ರಯಲ್ ಪೂರ್ಣ ಗೊಳಿಸದೆಯೂ ನೀಡಲಾಗುತ್ತಿದೆ. ಇದರಿಂದ ಮುಂದೆ ಉಂಟಾಗಬಹುದಾದ ದುಷ್ಪರಿಣಾಮಗಳ ಅವಲೋಕನದಿಂದ ಆತಂಕದ
ವಾತವರಣ ಸೃಷ್ಟಿಯಾಗಿದೆ. ಜಗತ್ತಿನ ಬಹುತೇಕ ದೇಶಗಳ ಕರೋನಾ ನಿವಾರಣೆಯ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರ ಪ್ರಮುಖವಾಗಿತ್ತು. ಈ ಸಂಸ್ಥೆಯು ಅಮೆರಿಕದಲ್ಲಿರುವುದರಿಂದ ಆ ದೇಶದ ಪಾತ್ರವೂ ಸಹ ಮುಖ್ಯ. ಆದರೆ ಇತರೆ ದೇಶಗಳಿಗಿಂತ ಮೊದಲು ಅಮೆರಿಕವೇ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಆರೋಪಿಸಿ, ಅಸಮಾಧಾನ ಹೊರಹಾಕಿತ್ತು. ಕರೋನಾದಂಥ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಸ್ವಂತ ಬಲದಿಂದ ಸಕಲ ದೇಶಗಳ ಉಪಯೋಗಕ್ಕೆ ಕಾರ್ಯ ರೂಪಿಸಬೇಕಾದ ಡ್ಲ್ಯೂಎಚ್‌ಒ
ಇದೀಗ ಯಾವ್ಯಾವ ಕ್ರಮ ಕೈಗೊಂಡಿದೆ ಎಂಬುದೇ ಅಸ್ಪಷ್ಟ.

ಇಂಥ ಬೆಳವಣಿಗೆಯ ನಡುವೆ ರಷ್ಯಾ ಮತ್ತು ಚೀನಾ ದೇಶಗಳು ಮೂರನೆ ಹಂತದ ಟ್ರಯಲ್ ಪೂರ್ಣಗೊಳಿಸದೆಯೂ  ಲಸಿಕೆ ಗಳನ್ನು ನೀಡುತ್ತಿವೆ. ಚೀನಾದಲ್ಲಿ ಈಗಾಗಲೇ ಲಸಿಕೆ ಪಡೆದ ಲಕ್ಷಾಂತರ ಜನರಿಗೆ ಗೌಪ್ಯತೆ ಕಾಪಾಡುವಂತೆ ಸೂಚಿಸಿದೆ. ಆದರೆ ಎಷ್ಟರ ಮಟ್ಟಿಗೆ ಇದು ಸುರಕ್ಷಿತ ಎಂಬುದು ಮುಖ್ಯ. ಇದರ ನಡುವೆ ಭಾರತದಲ್ಲಿಯೂ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಇಡೀ ಜಗತ್ತಿನ ಗಮನ ಸೆಳೆದಿದ್ದ ಕೇರಳದಲ್ಲಿಯೇ ಇದೀಗ ಮತ್ತೊಮ್ಮೆ ಲಾಕ್‌ಡೌನ್‌ಗೆ ಚಿಂತನೆ ನಡೆದಿದೆ. ಈ ಬೆಳವಣಿಗೆಗಳಿಂದಾಗಿ ನಾನಾ ದೇಶಗಳಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣಗೊಂಡಿರುವುದು ವಿಪರ್ಯಾಸದ ಸಂಗತಿ.