ಬೆಳಕಿನ ಹಬ್ಬ ದೀಪಾವಳಿಯು ಸಮೀಪಿಸುತ್ತಿದ್ದು, ಈ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಸಾಮಾನ್ಯ. ಪಟಾಕಿ ಸಿಡಿತ ಸಂದರ್ಭ ದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಸಂಕಷ್ಟ ಕಟ್ಟಿಟ್ಟ ಬುತ್ತಿ.
ಪಟಾಕಿ ಸಿಡಿತದಿಂದ ಕೈ ಕಾಲಿಗೆ ಗಾಯವಾಗುವ ಪ್ರಕರಣಗಳಷ್ಟೆ ಅಲ್ಲ, ಶಾಶ್ವತವಾಗಿ ಕಣ್ಣು ಕಳೆದುಕೊಂಡ ಉದಾಹರಣೆಗಳೂ ಇವೆ. ಪ್ರತಿ ವರ್ಷ ನೂರಾರು ಜನರು ಪಟಾಕಿ ಯಿಂದ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಇವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಕಳೆದ ವರ್ಷ ಮಿಂಟೋ, ನಾರಾಯಣ ನೇತ್ರಾಲಯ, ಅಗರ್ವಾಲ್ ಕಣ್ಣಿನ ಆಸ್ಪತ್ರೆ ಯಲ್ಲಿ೧೦೦ಕ್ಕೂ ಅಧಿಕ ಜನರು ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಅವಘಡದಿಂದ ಕಣ್ಣಿನ ಚಿಕಿತ್ಸೆಗೆ ಒಳಗಾಗಿದ್ದರು. ಪಟಾಕಿ ಇಲ್ಲದೆ ದೀಪಾವಳಿ ಆಚರಿಸುವುದು ಒಳ್ಳೆಯದು.
ಒಂದು ವೇಳೆ ಪಟಾಕಿ ಹೊಡೆದರೂ ಬಗ್ಗೆ ಜಾಗೃತಿ ಇರಲಿ. ಪಟಾಕಿ ಹಚ್ಚುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಪಟಾಕಿಯನ್ನು ಕೈಯಲ್ಲಿ ಹಿಡಿದು ಹಚ್ಚಿ, ಅನಾಹುತಕ್ಕೆ ದಾರಿ ಮಾಡಿಕೊಡಬೇಡಿ. ಪಾದರಕ್ಷೆ ತೊಟ್ಟು, ಕನ್ನಡಕ ಧರಿಸಿ ಪಟಾಕಿ ಹಚ್ಚಿ. ಜತೆಗೆ ಒಂದು ಬಕೆಟ್ ನೀರು ಜತೆಗಿರಲಿ. ಪಟಾಕಿ ಹಚ್ಚುವಾಗ ನೈಲಾನ್, ಪಾಲಿ ಸ್ಟರ್, ಸಿಲ್ಕ್ ಬಟ್ಟೆಗಳಿಂದ ದೂರವಿರು ವುದು ಒಳ್ಳೆಯದು. ಪಟಾಕಿ ಹಚ್ಚಲು ಗಾಜಿನ ವಸ್ತುಗಳನ್ನು ಬಳಸದಿರಿ. ಆರಿ ಹೋದ ಪಟಾಕಿ ಅಥವಾ ಸರಿಯಾಗಿ ಹಚ್ಚಿಕೊಳ್ಳದ ಪಟಾಕಿಗಳನ್ನು ಮತ್ತೆ ಹಚ್ಚಲು ಪ್ರಯತ್ನಿಸಬೇಡಿ.
ಐಎಸ್‌ಐ ಗುರುತಿರುವ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಿ. ಪಟಾಕಿ ಹೊಡೆಯುವಾಗ ಉದ್ದನೆಯ ಕಡ್ಡಿ ಬಳಸಿ. ಗುಡಿಸಲುಗಳು ಮತ್ತು ಮನೆಗಳಿಂದ ದೂರದಲ್ಲಿರುವ ತೆರೆದ ಸ್ಥಳಗಳಲ್ಲಿ ಮಾತ್ರ ಹಗುರವಾದ ರಾಕೆಟ್‌ನಂತಹ ಮದ್ದುಗಳನ್ನು ಹಚ್ಚಿ. ಜನದಟ್ಟಣೆಯ ಪ್ರದೇಶ, ಪಟಾಕಿ ಅಂಗಡಿಗಳ ಮುಂದೆ, ಆಸ್ಪತ್ರೆಗಳ ಬಳಿ, ವೃದ್ಧಾಶ್ರಮಗಳು, ಪೆಟ್ರೊಲ್ ಬಂಕ್ ಬಳಿ
ಪಟಾಕಿ ಸಿಡಿಸಬೇಡಿ. ಪಟಾಕಿ ಹೊಡೆದ ಕೈಯಲ್ಲಿ ಕಣ್ಣನ್ನು ಒರೆಸಿಕೊಳ್ಳಬೇಡಿ. ಪಟಾಕಿ ಕಿಡಿ ಕಣ್ಣಿಗೆ ತಗುಲಿದರೆ ನೀರಿನಿಂದ ಕೂಡಲೇ ಕಣ್ಣನ್ನು ಸ್ವಚ್ಛಗೊಳಿಸಿ.
ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಅಥವಾ ದೊಡ್ಡವರು ಜತೆಗಿರಬೇಕು. ಅಸ್ತಮಾ, ಅಲರ್ಜಿ ಇರುವವರು ಪಟಾಕಿಯಿಂದ ದೂರವಿರಿ. ಪ್ರಮುಖವಾಗಿ ಹೆಚ್ಚು ಹೊಗೆ ಬರುವ ಪಟಾಕಿಗಳಿಂದ ದೂರವಿದ್ದರೆ ಕ್ಷೇಮ. ಬೆಳಕಿನ ಹಬ್ಬದಿಂದ ಬಾಳಲ್ಲಿ ಕತ್ತಲೆ ಆವರಿಸದಂತೆ ನೋಡಿಕೊಳ್ಳಿ.