ಎಎಐ ಸಂಶೋಧನೆಯಾಗಿ ಸಾರ್ವಜನಿಕರ ಬಳಕೆಗೆ ಬಂದಾಗ ಅದನ್ನು ಎಲ್ಲರೂ ಹಾಡಿ ಹೊಗಳಿದ್ದರು. ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಬಹಿರಂಗಗೊಳ್ಳುವವರೆಗೂ ಎಐನ ಅಪಾಯಗಳು ಗೊತ್ತಾಗಿರಲಿಲ್ಲ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಮಹಿಳೆಯರು ಮತ್ತು ಯುವತಿಯರ ಭವಿಷ್ಯದ ಬಗ್ಗೆ ಚಿಂತೆ ಹುಟ್ಟುಹಾಕಿದೆ. ಅಧ್ಯಯನ ವೊಂದರ ಪ್ರಕಾರ, ಆನ್‌ಲೈನ್‌ನಲ್ಲಿ ಸುಮಾರು ಶೇ.೯೬ರಷ್ಟು ಡೀಪ್ ಫೇಕ್ ವೀಡಿಯೊಗಳು ಮಹಿಳೆ ಯರನ್ನು ಅಶ್ಲೀಲವಾಗಿ ಚಿತ್ರಿಸುತ್ತವೆ ಎನ್ನಲಾಗಿದೆ.
ಇದು ತಂತ್ರಜ್ಞಾನದ ಉಪಯೋಗಗಳು ಎಷ್ಟಿವೆಯೋ ದುರುಪಯೋಗಗಳೂ ಅದಕ್ಕಿಂತಲೂ ಹೆಚ್ಚಾಗಿಯೇ ಇವೆ ಎಂಬುದನ್ನು ತೋರಿಸಿವೆ. ಹಾಗಾಗಿ ಇದರಿಂದ ಎಂದಿಗಾ ದರೂ ಅಪಾಯವೇ. ರಶ್ಮಿಕಾ ಮಂದಣ್ಣ ಅವರ ಪ್ರಕಣದಿಂದ ಎಚ್ಚೆತ್ತ ಕೇಂದ್ರ ಸರಕಾರವು ಸಾಮಾಜಿಕ ಜಾಲತಾಣಗಳಾದ ಎಕ್ಸ್, ಇನ್ಸ್ಟಾಗ್ರಾಂ, ಫೇಸ್‌ಬುಕ್‌ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಐಟಿ ನಿಯಮಗಳ ಅಡಿಯಲ್ಲಿ ದೂರು ಸ್ವೀಕರಿಸಿದ ೨೪ ಗಂಟೆಗಳ ಒಳಗೆ ತಿರುಚಿದ ಚಿತ್ರಗಳನ್ನು ತೆಗೆದುಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಸಾಮಾಜಿಕ ಜಾಲತಾಣಗಳ ನಿಯಮ ಮತ್ತು ನಿಬಂಧನೆಗಳು, ಗೌಪ್ಯತೆ ನೀತಿ ಅಥವಾ ಬಳಕೆದಾರರ ಒಪ್ಪಂದವನ್ನು ಖಚಿತಪಡಿಸಿಕೊಳ್ಳುವುದು, ಇನ್ನೊಬ್ಬ ವ್ಯಕ್ತಿಯನ್ನು ಹೋಲುವ ಚಿತ್ರ ಅಥವಾ ವಿಡಿಯೊವನ್ನು ರಚಿಸದಂತೆ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಬಳಕೆದಾರರಿಗೆ ಮಾಹಿತಿ ನೀಡಬೇಕು ಎಂದು ಹೇಳಿದೆ. ಆದರೆ ಇದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆ ಎಂಬುದು ಪ್ರಶ್ನೆ. ಆದ್ದರಿಂದ ಈ ಎಐ ಕುರಿತ ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಕಾನೂನು ಗಳನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾದುದು ಹಾಗೂ ಇರುವ ಕಾನೂನು ಗಳನ್ನುಕಟ್ಟುನಿಟ್ಟಾಗಿ ಜಾರಿ ಮಾಡಬೇಕಾದುದು ಅಗತ್ಯವಾಗಿದೆ. ಮುಗ್ಧ ಹೆಣ್ಣು ಮಕ್ಕಳು ಈ ಪೀಡೆಗೆ ಬಲಿಯಾಗುವ ಮುನ್ನವೇ ಎಚ್ಚೆತ್ತುಕೊಳ್ಳ ಬೇಕಿದೆ.
ಪ್ರಸ್ತುತ ನಮ್ಮಲ್ಲಿ ಐಟಿ ಕಾಯಿದೆ ಹಾಗೂ ಅಪರಾಧ ದಂಡ ಸಂಹಿತೆಯ ಕೆಲವು ಸೆಕ್ಷನ್‌ಗಳು ಈ ಪಿಡುಗನ್ನು ನಿರ್ವಹಿಸುವ ಕೆಲಸವನ್ನು ಮಾಡುತ್ತಿವೆ. ಆದರೆ ಈ ನಿಯಮವನ್ನು ಸೋಶಿಯಲ್ ಮೀಡಿಯಾಗಳು ಕಟ್ಟನಿಟ್ಟಾಗಿ ಪಾಲಿಸುತ್ತಿಲ್ಲ. ಪಾಲಿಸುವಂತೆ ಮಾಡುವುದು ಸರಕಾರದ ಜವಾಬ್ದಾರಿ. ಡೀಪ್ ಫೇಕ್ ಸೈಬರ್ ಕ್ರೈಂನೊಂದಿಗೆ ವಿಶೇಷವಾಗಿ ವ್ಯವಹರಿಸಲು ಸ್ಪಷ್ಟವಾದ ಕಾನೂನು ರೂಪಿಸುವ ಅಗತ್ಯವಿದೆ