Friday, 13th December 2024

ಸಭ್ಯತೆ ಮೀರದ ವಿರೋಧವಿರಲಿ

ರಾಜ್ಯ ವಿಧಾನಭೆಗೆ ಚುನಾವಣೆ ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ರಾಜಕಾರಣಿಗಳ ಮಾತಿನ ವೀರಾವೇಶ ಹಾಗೂ ಕೆಸರೆರಚಾಟ ಏರು ಮುಖದಲ್ಲಿದೆ. ತಮ್ಮ ರಾಜಕೀಯ ಎದುರಾಳಿಗಳನ್ನು ಹಳಿಯಲು ಬೈಗುಳಗಳ ಭರಾಟೆಯನ್ನೇ ನಡೆಸಿದ್ದಾರೆ.

‘ವೈಶ್ಯೆ, ಪಿಂಪ್, ತಾಕತ್ತು, ಧಮ್, ನಾಲಗೆ ಕತ್ತರಿಸುತ್ತೇನೆ, ಹುಷಾರ್, ನಾಲಾಯಕ, ಪಾದದ ಧೂಳು, ಬಚ್ಚಾ’ ಬರೀ ಇಂತಹ ಮಾತುಗಳೇ ಪರಸ್ಪರರ ಬಾಯಿಯಲ್ಲಿ ಕೇಳಿಬರುತ್ತಿವೆ. ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯ ಹೆಸರನ್ನು ಬೈಗುಳದ ರೂಪದಲ್ಲಿ ಬಳಸುವುದಕ್ಕೂ ಜನಪ್ರತಿನಿಧಿಗಳು ಹೇಸುತ್ತಿಲ್ಲ.

ರಾಜಕಾರಣಿಗಳು ದುಡುಕಿ ಮಾತನಾಡುವುದು ಹೊಸತೇನೂ ಅಲ್ಲ. ಆದರೆ, ಸಾರ್ವಜನಿಕ ಸಭ್ಯತೆಯನ್ನು ಲೆಕ್ಕಿಸದಂತೆ ಮಾತನಾಡುವ ಚಾಳಿ ಹೆಚ್ಚಾಗುತ್ತಿರುವುದು ಕಳವಳದ ಸಂಗತಿ. ಇಂಥ ನಡವಳಿಕೆಗಳ ಮೂಲಕ ಜನರೆದುರು ನಗೆಪಾಟಲಿಗೀಡಾಗುತ್ತಿದ್ದೇವೆ ಎನ್ನುವ ಪ್ರಜ್ಞೆ ಯಾರಿಗೂ ಇದ್ದಂತಿಲ್ಲ. ರಾಜಕಾರಣದಲ್ಲಿ ಆರೋಪ, ಪ್ರತ್ಯಾರೋಪ ಅಸಹಜವೇನಲ್ಲ.

ಆದರೆ, ಈ ಮಾತುಕತೆ ಮತ್ತು ವಿರೋಧವು ತಾತ್ವಿಕ ನೆಲೆಗಟ್ಟಿನಲ್ಲಿರಬೇಕು. ಸಭ್ಯತೆ ಮೀರ ದಂತಿರಬೇಕು. ಆದರೆ ಹಾಗಾಗುತ್ತಿಲ್ಲ, ಎಲ್ಲರ ಬಾಯಲ್ಲೂ ಕೊಳಕು ಮಾತುಗಳೇ ಹರಿದಾಡುತ್ತಿವೆ. ಸಚಿವರು, ಶಾಸಕರೇ ಕೊಳಕು ಮಾತುಗಳನ್ನಾಡಲು ನಿಂತರೆ, ಅವರ ಹಿಂಬಾಲಕರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಲಗಾಮು ಇಲ್ಲದಂತಾಗುತ್ತದೆ. ಜನಪ್ರತಿನಿಧಿಯ ಮಾತುಗಳು ಸಾರ್ವಜನಿಕ ಸಭ್ಯತೆಯಿಂದ ಕೂಡಿರಬೇಕು ಹಾಗೂ ನಾಗರಿಕರಿಗೆ ಮಾದರಿಯಾಗಿರಬೇಕು. ಆದರೆ, ರಾಜ್ಯದ ರಾಜಕಾರಣಿಗಳು ಬೈದಾಡಿಕೊಳ್ಳಲು ಬಳಸುತ್ತಿರುವ ಭಾಷೆ ಕೊಳಕು ಅಭಿರುಚಿಯzಗಿದೆ ಹಾಗೂ ಅವರು ಪ್ರತಿನಿಧಿಸುವ ಸ್ಥಾನಗಳ ಮರ್ಯಾದೆ ಕಳೆಯುವಂತಿದೆ.

ನಾಲಗೆಯ ಮೇಲೆ ನಿಯಂತ್ರಣವಿಲ್ಲದ ಹಾಗೂ ಮಾತಿನ ಸೂಕ್ಷ್ಮ ಅರಿಯದ ರಾಜಕಾರಣಿಗಳೇ ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣದ ಪಠ್ಯ ಗೊತ್ತು ಪಡಿಸಲು ವಿಪರೀತ ಉತ್ಸಾಹ ವ್ಯಕ್ತಪಡಿಸುತ್ತಿರುವುದು ತಮಾಷೆಯಾಗಿದೆ. ನೈತಿಕ ಶಿಕ್ಷಣದ ತುರ್ತು ಇರುವುದು ಯಾರಿಗೆ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳುವುದು ಈಗ ಎಲ್ಲ ರಾಜಕೀಯ ಪಕ್ಷಗಳಿಗೂ ಅಗತ್ಯವಾಗಿದೆ. ಸಾಮಾಜಿಕ ಜೀವನ ದಲ್ಲಿರುವವರು ಯುವ ಪೀಳಿಗೆಗೆ ಆದರ್ಶ, ಮಾದರಿಯಾಗಬೇಕು. ಅದು ಬಿಟ್ಟು ಹೀಗೆ ಬಾಯಿಗೆ ಬಂದಂತೆ ನಾಲಗೆ ಹರಿಬಿಟ್ಟರೆ ಯುವಜನತೆಗೆ ಏನು ಸಂದೇಶ ಕೊಡುತ್ತಿದ್ದೇವೆ ಎನು ಸಂದೇಶ ಕೊಟ್ಟಂತಾಗುತ್ತದೆ ಎಂಬುದನ್ನು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕು.