Saturday, 14th December 2024

ಗಡಿಬಿಕ್ಕಟ್ಟುಗಳಿಂದಾಗಿ ಪ್ರಾಣಹಾನಿ ಸಂಭವಿಸದಿರಲಿ

ಒಂದೆಡೆ ಚೀನಾ – ಭಾರತ ನಡುವಿನ ಗಡಿ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲಿಯೇ ಮತ್ತೊಂದೆಡೆ ಆರ್ಮೇನಿಯಾ – ಅಜರ್‌ ಬೈಜಾನ್ ರಾಷ್ಟ್ರಗಳ ನಡುವಿನ ವಿವಾದವೂ ತಾರಕಕ್ಕೇರಿದೆ. ಯಾವುದೇ ರಾಷ್ಟ್ರಗಳ ಸಂಘರ್ಷಗಳು ಏರ್ಪಟ್ಟಾಗಲೂ ಬಲಿಯಾ ಗುವುದು ಅಮಾಯಕ ಜೀವಗಳು.

ಎರಡು ದೇಶಗಳ ಪ್ರತಿಷ್ಠೆಗಾಗಿ ಅಮಾಯಕ ಜೀವಗಳನ್ನು ಬಲಿಕೊಡುವುದು ಸಮಂಜಸವಲ್ಲ. ವಿಶ್ವಸಂಸ್ಥೆಯ ಜಾಗತಿಕ ನಾಯಕರ ಮಾರ್ಗದರ್ಶನದಲ್ಲಿ ಶಾಂತಿ ಕಾಪಾಡುವುದರಿಂದ ಹಲವು ಜೀವಗಳ ಹಾನಿ ತಡೆಯಬಹುದು. ಇಸ್ಲಾಮಿಕ್ ರಾಷ್ಟ್ರ ವಾದ ಅಜರ್ ಬೈಜಾನ್ ಹಾಗೂ ಕ್ರೈಸ್ತ ಪ್ರಾಬಲ್ಯವಿರುವ ಆರ್ಮೇನಿಯಾ ರಾಷ್ಟ್ರಗಳ ನಡುವೆ ನಗೋರ್ನೋ-ಕಾರಾಬಕ್ ಪ್ರದೇಶ ದಲ್ಲಿನ ಗಡಿ ಕುರಿತಂತೆ 1980ರಿಂದಲೂ ವಿವಾದ ಮುಂದುವರಿದಿದೆ.

ಮೊದಲ ಬಾರಿ 1991 ರಲ್ಲಿ ನಡೆದ ಕದನದಲ್ಲಿ 30 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟು, ಸಾವಿರಾರು ಮಂದಿ ನಿರಾಶ್ರಿತರಾ ಗಿದ್ದರು. 1994ರಲ್ಲಿ ಎರಡು ದೇಶಗಳ ನಡುವೆ ನಡೆದ ಕದನ ವಿರಾಮ ಉಲ್ಲಂಘನೆಯ ಪರಿಣಾಮ ನಡೆದ ಘರ್ಷಣೆ ಯಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಮತ್ತೊಮ್ಮೆ ಘರ್ಷಣೆ ಏರ್ಪಟ್ಟು 100ಕ್ಕೂ ಹೆಚ್ಚಿನ ಜನ ಗಾಯಗೊಂಡು 23 ಮಂದಿ ಮೃತಪಟ್ಟಿದ್ದಾರೆ. ಈ ರೀತಿ ಗಡಿ ಘರ್ಷಣೆ ಹಲವು ಸಾವುಗಳಿಗೆ ಕಾರಣವಾಗುವುದನ್ನು ತಡೆಯುವ ನಿಟ್ಟಿನಲ್ಲಿಯೂ ವಿಶ್ವಸಂಸ್ಥೆಯ ಪಾತ್ರ ಮಹತ್ವ.

ಇದೀಗ ಚೀನಾ – ಭಾರತದ ನಡುವೆ ಪೂರ್ವ ಲಡಾಕ್ ಭೂ ಪ್ರದೇಶದ ಕುರಿತು ಏರ್ಪಟ್ಟಿರುವ ಗಡಿ ಸಂಘರ್ಷವೂ ಸಹ ದಿನೇ ದಿನೇ ಜಟಿಲವಾಗುತ್ತಿದೆ. ಮೊದಲಿನಿಂದಲೂ ಶಾಂತಿ ಮಂತ್ರ ಜಪಿಸುತ್ತಿದ್ದ ಭಾರತವು ಇದೀಗ ಚೀನಾ ಕ್ಯಾತೆಗೆ ತಕ್ಕ ಉತ್ತರ ನೀಡಲು ಸಿದ್ಧತೆ ಆರಂಭಿಸಿದೆ. ಚಳಿಗಾಲ ಆರಂಭಗೊಂಡರೂ ಪೂರ್ವ ಲಡಾಕ್‌ನಲ್ಲಿ ಚೀನಾ ಸೇನೆ ಹಿಂದೆ ಸರಿಯದಿರುವುದರಿಂದ ಭಾರತವೂ ತನ್ನ ಸೇನೆಯನ್ನು ಜಮಾವಣೆಮಾಡಿದೆ. ಚೀನಾ ಸೇನಾ ಪಡೆಯ ಯಾವುದೇ ದುಸ್ಸಾಹಸವನ್ನು ಹಿಮ್ಮೆಟ್ಟಿಸಲು ಭಾರತೀಯ ವಾಯುಪಡೆ ಸರ್ವಸನ್ನದ್ಧವಾಗಿದ್ದು, ಸಾಧ್ಯವಾದಷ್ಟು ಶಾಂತಿಯುತವಾಗಿ ಗಡಿ ಬಿಕ್ಕಟ್ಟುಗಳನ್ನು ಬಗೆಹರಿಸಿ ಕೊಳ್ಳುವ ಮೂಲಕ ಪ್ರಾಣಹಾನಿ ತಡೆಗಟ್ಟಬೇಕಿರುವುದು ಬಹುಮುಖ್ಯ.