ಜಗತ್ತಿನ ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ಒಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. ಈಗ ವ್ಯಾಪಕವಾಗಿರುವ ಡೆಲ್ಟಾ ತಳಿಗಿಂತ ಬಹಳ ವೇಗವಾಗಿ ಹರಡುವ ಸಾಮರ್ಥ್ಯವನ್ನು ಈ ತಳಿಯು ಹೊಂದಿದೆ.
ಹೀಗಾಗಿ ಈ ತಳಿ ಜಗತ್ತನ್ನೆ ಮತ್ತೆ ಭಯಭೀತಗೊಳಿಸಿದೆ. ಕೋವಿಡ್ ಸಾಂಕ್ರಾಮಿಕಕ್ಕೆ ಲಗಾಮು ಹಾಕದಿರುವುದೇ ಈ ಮತ್ತೊಂದು ಭೀತಿಗೆ ಕಾರಣವಾಗಿದೆ. ಈ ಭೀತಿಗೆ ಮತ್ತೊಂದು ಮುಖ್ಯ ಕಾರಣವೆಂದರೆ ಕೋವಿಡ್ ನಿರೋಧಕ ಲಸಿಕೆಗಳು ಈ ತಳಿಯಿಂದ ರಕ್ಷಣೆ ಕೊಡುವುದಿಲ್ಲ ಎಂದು ತಜ್ಞರು ಹೇಳಿದ್ದು. ಅಲ್ಲದೆ, ಚಳಿಗಾಲದ ಹವಾಮಾನದಲ್ಲಿ ಈ ವೈರಾಣುವಿನ ಚಟುವಟಿಕೆ ವೇಗ ಪಡೆದುಕೊಳ್ಳುತ್ತದೆ ಎಂಬುದು ಈಗಾಗಲೇ ದೃಢಪಟ್ಟಿದೆ. ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಮುಂದಿನ ಮಾರ್ಚ್ ಹೊತ್ತಿಗೆ ಏಳು ಲಕ್ಷಕ್ಕೂ ಹೆಚ್ಚು ಜನರು ಈ ವೈರಾಣುವಿನಿಂದ ಮೃತರಾಗ ಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಈಗಾಗಲೇ ಯುರೋಪ್ ಮತ್ತು ಅಮೆರಿಕವು ಇದರ ಸಂಕಷ್ಟ ಎದುರಿಸುತ್ತಿವೆ. ಜನಸಂಖ್ಯೆಯ ಶೇ.೭೦ರಷ್ಟು ಭಾಗಕ್ಕೆ ಪೂರ್ಣ ಲಸಿಕೆ ಹಾಕಲಾಗಿರುವ ದೇಶಗಳಲ್ಲಿಯೇ ಪ್ರಕರಣಗಳ ಏರಿಕೆ ತೀವ್ರಗೊಂಡಿದೆ.
ಲಸಿಕೆ ಹಾಕಿಸಿಕೊಳ್ಳದವರಲ್ಲಿಯೇ ಹೊಸ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಆದರೆ, ಲಸಿಕೆಯ ಎರಡೂ ಡೋಸ್ ಹಾಕಿಸಿಕೊಂಡವರಲ್ಲಿಯೂ ಸೋಂಕು ಕಾಣಿಸಿಕೊಂಡದ್ದು ಕಳವಳಕಾರಿ ಅಂಶ. ಇದರಿಂದ ಭಾರತವು ಕಲಿಯಬೇಕಾದ ಪಾಠ ಬಹಳಷ್ಟಿದೆ. ದೇಶದ ಒಟ್ಟು ಜನಸಂಖ್ಯೆಯ ಶೇ.೩೦ಕ್ಕಿಂತ ಸ್ವಲ್ಪ ಹೆಚ್ಚಿನ ಭಾಗಕ್ಕಷ್ಟೇ ಲಸಿಕೆಯ ಎರಡೂ ಡೋಸ್ ಹಾಕಲಾಗಿದೆ. ಅಂದರೆ, ಜನಸಂಖ್ಯೆಯ ಬಹುಭಾಗಕ್ಕೆ ಲಸಿಕೆಯ ರಕ್ಷಣೆ ಸಿಕ್ಕಿಲ್ಲ. ಇಷ್ಟೊಂದು ದೊಡ್ಡ ವರ್ಗಕ್ಕೆ ಲಸಿಕೆಯ ರಕ್ಷಣೆ ಇಲ್ಲದೇ ಇರುವುದು ಬಹುದೊಡ್ಡ ಅಪಾಯಕ್ಕೆ ಕಾರಣ ಆಗಬಹುದು. ೧೨ ಕೋಟಿಗೂ ಹೆಚ್ಚು ಜನರು ಲಸಿಕೆಯ ಎರಡನೇ ಡೋಸ್ ಅನ್ನು ನಿಗದಿತ ಅವಧಿಯಲ್ಲಿ ಪಡೆಯದೆ ತಪ್ಪಿಸಿಕೊಂಡಿzರೆ ಎಂದು ಕೇಂದ್ರ ಆರೋಗ್ಯ ಸಚಿವರು ಇತ್ತೀಚೆಗೆ ಹೇಳಿದ್ದರು.
ರಾಜ್ಯದಲ್ಲಿ ೪೫ ಲಕ್ಷ ಮಂದಿ ಎರಡನೇ ಡೋಸ್ ಹಾಕಿಸಿಕೊಂಡಿಲ್ಲ ಎಂದು ರಾಜ್ಯದ ಆರೋಗ್ಯ ಸಚಿವರು ಹೇಳಿದ್ದಾರೆ. ಇವರೆಲ್ಲರಿಗೂ ಆದಷ್ಟು ಬೇಗ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕಿದೆ. ಒಮೈಕ್ರಾನ್ ರೂಪಾಂತರ ತಳಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಜನರು ಗಂಭೀರವಾಗಿ ಪರಿಗಣಿಸ ಬೇಕಿದೆ. ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಮತ್ತೊಂದು ಅಪಾಯಕ್ಕೆ ದೇಶವನ್ನು ತಳ್ಳಿದಂತಾದೀತು.