Wednesday, 11th December 2024

ಬರ ನಿರ್ವಹಣೆ: ವಿಳಂಬ ಬೇಡ

ಮುಂಗಾರು ಮಳೆಯ ಕೊರತೆಯಿಂದ ಜಲ ಮೂಲಗಳು ದಿನದಿಂದ ದಿನಕ್ಕೆ ಬರಿದಾಗು ತ್ತಿದ್ದು, ರಾಜ್ಯದ ಕೆರೆಗಳಲ್ಲಿ ನೀರಿನ ಪ್ರಮಾಣ ಕಳೆದ ನಾಲ್ಕು ವರ್ಷಕ್ಕೆ ಹೋಲಿಕೆ ಮಾಡಿದರೆ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜಲಾಶಯಗಳಲ್ಲೂ ನೀರಿನ  ಮಟ್ಟ ಕುಸಿಯುತ್ತಿದೆ.

ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಸಾವಿರಾರು ರುಪಾಯಿ ವೆಚ್ಚ ಮಾಡಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಹೊತ್ತು ತಂದಿದ್ದ ರೈತರು ಮಳೆ ಕೊರತೆಯಿಂದ ಕಂಗಾಲಾಗಿದ್ದಾರೆ. ಸಾವಿರಾರು ಕ್ವಿಂಟಲ್ ಬೀಜ ಹಾಗೂ ರಸಗೊಬ್ಬರ ರೈತರ ಮನೆಗಳಲ್ಲಿ ಮೂಲೆ ಸೇರಿವೆ. ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ, ಈವರೆಗೆ, ಶೇ.೭೧ರಷ್ಟುಮಳೆ ಕೊರತೆಯಿಂದ ಶೇ.೧೦ರಷ್ಟುಮಾತ್ರ ಬಿತ್ತನೆ ಆಗಿದೆ. ಸುಮಾರು ಆರು ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಹಾಗೂ ಹತ್ತು ಸಾವಿರ ಕ್ವಿಂಟಲ್ ರಸಗೊಬ್ಬರ ಖರೀದಿ ಆಗಿದೆ. ಈ ಪೈಕಿ ಬಳಕೆ ಆಗಿದ್ದು ಮಾತ್ರ ತೀರಾ ಕಡಿಮೆ.

ಮಳೆಯಾಗದ ಕಾರಣ ರಸಗೊಬ್ಬರದ ಪ್ಯಾಕೆಟ್‌ಗಳು ಅನಾಥವಾಗಿದ್ದು, ರೈತರಿಗೆ ದಿಕ್ಕು ತೋಚದಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಭೀತಿ ಇದೆ. ಈ ಬರ ಪರಿಸ್ಥಿತಿ ಎದುರಿಸಲು ಮೋಡ ಬಿತ್ತನೆಗೆ ಸರಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ‘ಮಳೆ ಕೊರತೆ ಪರಿಸ್ಥಿತಿ ನಿಭಾಯಿಸಲು ೧೦ ದಿನಗಳಲ್ಲಿ ಕಂದಾಯ ಸಚಿವರು ನಿರ್ಧಾರ ಪ್ರಕಟಿಸಲಿದ್ದಾರೆ’ ಎಂದು ಸಚಿವ ಶರಣಪ್ರಕಾಶ್ ಪಾಟೀಲ ಅವರು ಹೇಳಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ೧೦ ದಿನಗಳೆಂದರೆ ದೂರದ ಮಾರ್ಗವಾಗಿದೆ. ೧೦ ದಿನಗಳಲ್ಲಿ ಮೋಡ ಬಿತ್ತನೆಗೆ ನಿರ್ಧಾರ ಮಾಡಿದರೂ, ಅದು ಕಾರ್ಯಗತವಾಗಲು ಕನಿಷ್ಠ ೫-೧೦ ದಿನ ಬೇಕು. ಅಲ್ಲಿಗೆ ಇನ್ನೂ ಇಪ್ಪತ್ತು ದಿನ ಮಳೆಗಾಗಿ ರೈತರು ಕಾಯು ತ್ತಲೇ ಕುಳಿತುಕೊಳ್ಳಬೇಕು.

ಒಂದು ವೇಳೆ ೨೦ ದಿನಗಳ ನಂತರ ಮಳೆಯಾದರೂ ಬಿತ್ತನೆ ಮಾಡಿ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಸರಕಾರ ನಿರ್ಧಾರ ಪ್ರಕಟಿಸುವಲ್ಲಿ ವಿಳಂಬ ಮಾಡಬಾರದು. ಅಲ್ಲದೆ, ಕುಡಿಯುವ ನೀರಿನ ಸಮಸ್ಯೆ ಕಂಡುಬರಬಹುದಾದ ಗ್ರಾಮಗಳಿಗೆ ಅಽಕಾರಿಗಳು ಖುದ್ದಾಗಿ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.