Monday, 14th October 2024

Editorial: ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಮುಕ್ತಿ ಬೇಕಿದೆ

ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಸುತ್ತಿರುವ ದೇಶ ಭಾರತ ಎಂಬ ಕುಖ್ಯಾತಿಯನ್ನು ಪಡೆದಿದೆ. ಭಾರತದಲ್ಲಿ ಪ್ರತಿವರ್ಷ ಸೃಷ್ಟಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವು ಸುಮಾರು 93 ಲಕ್ಷ ಟನ್.

ಜಗತ್ತಿನಲ್ಲಿ ಸೃಷ್ಟಿಯಾಗುವ ಪ್ಲಾಸ್ಟಿಕ್ ತ್ಯಾಜ್ಯದ ಐದನೇ ಒಂದು ಭಾಗ ಇಲ್ಲಿ ಸೃಷ್ಟಿಯಾಗುತ್ತಿದೆ. ಪ್ರತಿ ವರ್ಷದ ಅಂಕಿಅಂಶಗಳನ್ನು ಗಮನಿಸಿದರೆ, ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವುದು
ಕಾಣಿಸುತ್ತದೆ. ಪ್ಲಾಸ್ಟಿಕ್ ತ್ಯಾಜ್ಯದ ಸಂಗ್ರಹ, ವಿಲೇವಾರಿ ಮತ್ತು ಮರುಬಳಕೆಗೆ ಹಲವು ನಿಯಮಗಳಿವೆ. ಆದರೆ ಅನುಷ್ಠಾನ ಮಾತ್ರ ಸಮರ್ಪಕವಾಗಿ ಆಗುತ್ತಿಲ್ಲ.

ಇದನ್ನೂ ಓದಿ: Physical Harassment: 50 ವರ್ಷಗಳ ಹಿಂದೆ ನನ್ನ ಸ್ಕರ್ಟ್‌ ಎತ್ತಲು ಯತ್ನಿಸಿದ್ದ ಟ್ರಂಪ್‌! ಮಹಿಳೆಯ ಗಂಭೀರ ಆರೋಪ

ಬೆಂಗಳೂರಿನಲ್ಲೂ ಪ್ರತಿ ವರ್ಷ ಸುಮಾರು 4000 ಟನ್‌ನಷ್ಟು ತ್ಯಾಜ್ಯ ಶೇಖರಣೆ ಆಗುತ್ತಿದೆ. ಅದರಲ್ಲಿ ಬಹುತೇಕ ಪ್ಲಾಸ್ಟಿಕ್ ತ್ಯಾಜ್ಯಗಳು ಆಗಿವೆ. ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುವ ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಯಂತ್ರ ಣಕ್ಕೆ ತರುವುದು ಅಸಾಧ್ಯವೇನೋ ಎಂಬಂತಾಗಿದೆ. ರಾಜ್ಯ ಸರಕಾರ ಕೂಡ 2016ರ ಮಾರ್ಚ್ 11ರಿಂದ ಜಾರಿಗೆ ಬರುವಂತೆ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ, ಸಾಗಣೆ, ಸಂಗ್ರಹ ಮತ್ತು ಮಾರಾಟವನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ. ಆರಂಭದಲ್ಲಿ ಕೊಂಚ ಮಟ್ಟಿಗೆ ತಗ್ಗಿದ್ದ ಪ್ಲಾಸ್ಟಿಕ್ ಹಾವಳಿಯು ಮತ್ತೆ ತೀವ್ರಗೊಂಡಿದೆ.

ರೆಸ್ಟೊರೆಂಟ್‌ಗಳು, ಹೋಟೆಲ್ ಗಳು, ಚಿಲ್ಲರೆ ಮಳಿಗೆಗಳು, ಹೂವು, ಹಣ್ಣು, ತರಕಾರಿ ಮಾರುಕಟ್ಟೆಗಳು, ದಿನಸಿ ಅಂಗಡಿಗಳು, ಔಷಧದ ಅಂಗಡಿ, ಬೇಕರಿಗಳಲ್ಲಿ ಪ್ಲಾಸ್ಟಿಕ್ ಕೈಚೀಲಗಳ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಪಾತ್ರ ನಿರ್ಣಾಯಕವಾಗಿದೆಯಾದರೂ ಜನರ ಸಹಭಾಗಿತ್ವವೂ ಮುಖ್ಯವಾಗಿದೆ. ನಿತ್ಯ ನಡೆಯುವ ವಿವಿಧ ಸಮಾರಂಭಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕಿದೆ.

ಅದರ ಬದಲಾಗಿ ಅಡಿಕೆ ಪಟ್ಟೆ, ಬಾಳೆ ಎಲೆ ಹಾಗೂ ಮರು ಬಳಸಬಹುದಾದಂತಹ ಉಕ್ಕಿನ ವಸ್ತುಗಳನ್ನು ಉಪ ಯೋಗಿಸಬೇಕಿದೆ. ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳದಲ್ಲಿಯೇ ಬೇರ್ಪಡಿಸಿ, ವಿಲೇವಾರಿಗೆ ಕ್ರಮವಹಿಸಬೇಕು. ಆ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ನಗರ, ರಾಜ್ಯ, ದೇಶವನ್ನು ನಿರ್ಮಾಣ ಮಾಡಬೇಕಿದೆ.