ನಟ ದರ್ಶನ್‌ಗೆ ವಿಶೇಷ ಆದರಾತಿಥ್ಯ ನೀಡಿದ ಕಾರಣಕ್ಕೆ ಸುದ್ದಿಯಾದ ಪರಪ್ಪನ ಅಗ್ರಹಾರ ಇದೀಗ ಮತ್ತೆ ಸುದ್ದಿ ಯಾಗಿದೆ. ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಭಾನುವಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ ವೇಳೆ ರೌಡಿ ವಿಲ್ಸನ್ ಗಾರ್ಡನ್ ನಾಗರಾಜನ ಬಳಿ ಮಾದಕದ್ರವ್ಯ ಪತ್ತೆಯಾಗಿದೆ. ನಾಗರಾಜ್ ಮತ್ತು ಸ್ನೇಹಿತರ ಬಳಗದಿಂದ ಪೊಲೀಸರು ಡ್ರಗ್ಸ್, ೧೫ ಮೊಬೈಲ್‌ಗಳು, ಎಲೆಕ್ಟ್ರಿಕ್ ಸ್ಟವ್, ಮೂರು ಲಾಂಗ್‌ಗಳು, ಬೀಡಿ, ಸಿಗರೇಟ್ ಪ್ಯಾಕ್‌ಗಳು, ಪೆನ್‌ಡ್ರೈವ್ ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂದರೆ ಪರಪ್ಪನ ಅಗ್ರಹಾರ ಜೈಲನ್ನು ಪೊಲೀಸರ ಬದಲು ರೌಡಿಗಳೇ ನಿಯಂತ್ರಿಸುತ್ತಿರುವುದು ಸ್ಪಷ್ಟವಾಗಿದೆ. ಜೈಲು ಆವರಣದಲ್ಲಿ ದರ್ಶನ್ ಕುರ್ಚಿ ಹಾಕಿಕೊಂಡು ಚಹಾ ಮತ್ತು ಸಿಗರೇಟ್ ಸೇವಿಸುತ್ತಾ ಇದ್ದ ಫೋಟೋಗಳು
ವೈರಲ್ ಆದಾಗ ವಿಲ್ಸನ್ ಗಾರ್ಡನ್ ನಾಗನ ಫೋಟೋ ಕೂಡ ಬಯಲಾಗಿತ್ತು.
ದರ್ಶನ್‌ಗೆ ಆತಿಥ್ಯ ನೀಡುವಲ್ಲಿ ಈತನದೇ ಪ್ರಮುಖ ಪಾತ್ರ ಎನ್ನಲಾಗಿತ್ತು. ಈ ಸಂಬಂಧ ನಾಗನ ವಿರುದ್ಧ ಪ್ರಕರಣ ದಾಖಲಿಸಿ ಎಚ್ಚರಿಕೆ ಯನ್ನೂ ನೀಡಲಾಗಿತ್ತು. ಪ್ರಕರಣದಲ್ಲಿ ಜೈಲು ಅಧಿಕರು ಸೇರಿ ಹಿರಿಯ ಅಧಿಕಾರಿಗಳ ತಲೆ ದಂಡವಾಗಿತ್ತು. ಘಟನೆ ನಡೆದು ಎರಡು ವಾರಗಳು ಕಳೆಯುವಷ್ಟರಲ್ಲಿಯೇ ಜೈಲಿನಲ್ಲಿ ಮಾದಕ ದ್ರವ್ಯ, ಮೊಬೈಲ್, ಸ್ಟವ್‌ಗಳು ಪತ್ತೆಯಾಗಿವೆ ಎಂದರೆ ಇಲ್ಲಿ ರೌಡಿಗಳ ಪ್ರಾಬಲ್ಯ ಎಷ್ಟರ ಮಟ್ಟಿಗಿದೆ ಎನ್ನುವುದನ್ನು ಊಹಿಸಬಹುದು.
ಕಳೆದ ಮೂರು ತಿಂಗಳಲ್ಲಿ ಪೊಲೀಸರು ಇದೇ ಜೈಲಿನ ಮೇಲೆ ಹಲವು ಬಾರಿ ದಾಳಿ ನಡೆಸಿದ್ದಾರೆ. ಪ್ರತಿ ಬಾರಿ ದಾಳಿ ನಡೆಸುವಾಗಲೂ ಮುಂಚಿತವಾಗಿ ಮಾಹಿತಿ ಸೋರಿಕೆಯಾಗುತ್ತಿದ್ದ ಕಾರಣ ಯಾವುದೇ ವಸ್ತುಗಳನ್ನು ವಶಪಡಿಸಿ ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಮುಂಚಿತವಾಗಿ ಮಾಹಿತಿ ನೀಡದೆ ಕ್ಷಿಪ್ರ ದಾಳಿ ನಡೆಸಿದ ಕಾರಣ ಈ ವಸ್ತುಗಳು ಪತ್ತೆಯಾಗಿವೆ.
ದರ್ಶನ್ ಪ್ರಕರಣದಲ್ಲಿ ಜೈಲು ಅಧಿಕಾರಿಗಳ ಎತ್ತಂಗಡಿಯಾದ ಬಳಿಕವೂ ರೌಡಿಗಳ ಪಾಲಿಗೆ ಈ ಜೈಲು ವಿಶ್ರಾಂತಿ ತಾಣವಾಗಿ ಮುಂದುವರಿದಿತ್ತು ಎಂದರೆ ಇನ್ನಷ್ಟೂ ಅಧಿಕಾರಿಗಳು ಕೈದಿಗಳೊಂದಿಗೆ ಶಾಮೀಲಾಗಿರುವುದು ಸ್ಪಷ್ಟ. ರಾಜ್ಯದ ಎಲ್ಲ ಜೈಲುಗಳಲ್ಲೂ ಇದೇ ರೀತಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ದೂರುಗಳಿವೆ. ಕೃತಕ ಬುದ್ಧಿ ಮತ್ತೆ, ಸಿಸಿಟಿವಿ ಕಣ್ಗಾವಲು, ಸೆನ್ಸರ್ ವ್ಯವಸ್ಥೆ ಇರುವ ಈ ಆಧುನಿಕ ತಂತ್ರಜ್ಞಾನ ಕಾಲದಲ್ಲೂ ಜೈಲಿನೊಳಗೆ ಅಕ್ರಮ ವಸ್ತುಗಳ ಪೂರೈಕೆ ಸ್ಥಗಿತ ಸಾಧ್ಯವಾಗುತ್ತಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ.
ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ರೌಡಿಗಳ ಪಡೆಗೆ ಕಡಿವಾಣ ಹಾಕದೇ ಹೋದರೆ ಇಡೀ ಪೊಲೀಸ್ ವ್ಯವಸ್ಥೆ ನಗೆಪಾಟಲಿಗೀಡಾಗಲಿದೆ. ಪ್ರಾಮಾಣಿಕ ಅಧಿಕಾರಿಗಳ ನೈತಿಕ ಸ್ಥೆರ್ಯ ಕುಸಿಯಲಿದೆ.
ಇದನ್ನೂ ಓದಿ: Actor Darshan: ದರ್ಶನ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಪೊಲೀಸರ ಮೇಲೆಯೇ ದೂರು