Wednesday, 11th December 2024

ಪ್ರಾಧ್ಯಾಪಕರ ನೇಮಕವಿಲ್ಲದೆ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ?

ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ಸರಕಾರ ರಾಜ್ಯದಲ್ಲಿ ಏಳು ವಿಶ್ವವಿದ್ಯಾಲಯಗಳನ್ನು ನೂತನವಾಗಿ ಸ್ಥಾಪಿಸಿ, ಅವುಗಳಿಗೆಲ್ಲ ಇದೀಗ
ಕುಲಪತಿಗಳನ್ನೂ ನೇಮಿಸಿದೆ. ಆದರೆ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇರುವ ಬಗ್ಗೆ ಸರಕಾರ ಏಕೆ ತಲೆಕೆಡಿಸಿಕೊಳ್ಳುತ್ತಿಲ್ಲ?
ನಿತ್ಯವೂ ವಿದ್ಯಾರ್ಥಿಗಳಿಗೆ ಪಾಠ ಮಾಡುವವರು ಪ್ರಾಧ್ಯಾಪಕರು.

ಅವರಿಲ್ಲದೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಆದರೆ ರಾಜ್ಯದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಪ್ರಾಧ್ಯಾಪಕರ ಕೊರತೆ ಇದೆ. ಮಾಹಿತಿಯೊಂದರ ಪ್ರಕಾರ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಶೇ.೫೨.೪೯ರಷ್ಟು ಹುದ್ದೆಗಳು ಖಾಲಿಯಿವೆ. ಅನೇಕ ವಿಶ್ವವಿದ್ಯಾಲಯಗಳಲ್ಲಿನ ಕೆಲವು ವಿಭಾಗಗಳಲ್ಲಿ ಕಾಯಂ ಪ್ರಾಧ್ಯಾಪಕರೇ ಇಲ್ಲ. ಸರಕಾರಿ ಕಾಲೇಜುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರಿದ್ದಾರೆ. ಇವರು ಎರಡು-ಮೂರು ಕಾಲೇಜುಗಳಲ್ಲಿ ಅರೆಬರೆ ಸಂಭಾವನೆಗೆ ಕೆಲಸ ಮಾಡುತ್ತಿರುತ್ತಾರೆ.

ಇವರು ಹೇಗೆ ಗುಣಮಟ್ಟದ ಬೋಧನೆ ನೀಡಲು ಸಾಧ್ಯ? ಸರಕಾರವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸುವುದರಲ್ಲಿ ತೋರು ತ್ತಿರುವ ಉತ್ಸಾಹ, ಕಾಳಜಿಯನ್ನು ಅಲ್ಲಿ ಪ್ರಾಧ್ಯಾ ಪಕರನ್ನು ನೇಮಿಸುವ ಬಗ್ಗೆ ತೋರುತ್ತಿಲ್ಲ. ನಿರ್ದಿಷ್ಟ ಸಂಖ್ಯೆಯ ಕಾಯಂ ಉಪನ್ಯಾಸಕರು ಇಲ್ಲದ ಕಾರಣದಿಂದಾಗಿ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ನ್ಯಾಕ್ ಮಾನ್ಯತೆಯಲ್ಲಿ ಹಿನ್ನಡೆ ಎದುರಿಸಿವೆ.

ಅಲ್ಲದೆ, ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಕಾಯಂ ಬೋಧಕರಷ್ಟೇ ಮಾರ್ಗದರ್ಶನ ಮಾಡಲಿಕ್ಕೆ ಅವಕಾಶವಿರುವುದರಿಂದ, ಸಂಶೋಧನೆಯಲ್ಲಿ ತೊಡಗಿ ಕೊಳ್ಳುವ ವಿದ್ಯಾರ್ಥಿಗಳು ಮಾರ್ಗದರ್ಶಕರ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ವಿಶ್ವವಿದ್ಯಾಲಯಗಳ ಮುಖ್ಯ ಉದ್ದೇಶವೊಂದರಲ್ಲಿ ಒಂದಾದ ಸಂಶೋಧನೆಯೂ ಹೇಳಿಕೊಳ್ಳುವ ಮಟ್ಟದಲ್ಲಿ ಆಗುತ್ತಿಲ್ಲ.

ಮಾರ್ಗ ದರ್ಶನ ಮಾಡುವವರ ಕೊರತೆಯಿದ್ದಾಗ ಸಂಶೋಧನಾ ಚಟುವಟಿಕೆಗಳು ನಡೆಯುವುದು ಹೇಗೆ ಸಾಧ್ಯ ಎಂಬುದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಸರಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಧ್ಯಾಪಕರ ನೇಮಕಕ್ಕೆ ಸರಕಾರ ಆದೇಶ ಹೊರಡಿಸಬೇಕು. ಹೊಸದಾಗಿ ಸ್ಥಾಪನೆಯಾಗಿರುವ ಚಾಮರಾಜನಗರ, ಬೀದರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಹಾಗೂ ಬಾಗಲಕೋಟೆಯಲ್ಲಿ ವಿಶ್ವವಿದ್ಯಾಲಯಗಳಲ್ಲೂ ಶೀಘ್ರದಲ್ಲೇ ಪ್ರಾಧ್ಯಾಪಕರ ನೇಮಕ ಮಾಡಬೇಕು. ಆ ಮೂಲಕ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿ ಸುವ ಕೆಲಸ ಮಾಡಬೇಕು.