Friday, 13th December 2024

ಚುನಾವಣಾ ಪ್ರಕ್ರಿಯೆ ಪಾವಿತ್ರ್ಯ ಅಪಾಯಕ್ಕೆ ಸಿಲುಕುವ ಸಾಧ್ಯತೆ

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೀಡಿದ ದೂರಿನ ಮೇಲೆ ಈಗಾಗಲೇ ಇಬ್ಬರು ಹೆಚ್ಚುವರಿ
ಚುನಾವಣಾಧಿಕಾರಿಗಳನ್ನು ಅಮಾನತುಗೊಳಿಸಿರುವ ಚುನಾವಣಾ ಆಯೋಗ, ಮೂರು ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ಕುರಿತು ತನಿಖೆಗೆ ಆದೇಶಿಸಿದೆ. ಆದರೆ ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವುದ್ಕಾಗಿ ಚುನಾವಣಾ ಆಯೋಗ ಈ ತನಿಖೆ ಮತ್ತು ಕ್ರಮವನ್ನು ಕೇವಲ ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತಗೊಳಿಸಬಾರದು.

ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಮೂರು ಕ್ಷೇತ್ರಗಳಲ್ಲಿ ಆಗಿರುವ ಅಧಿಕಾರಿಗಳ ಬದಲಾವಣೆಯಂತೆ ಕ್ರಮಗಳನ್ನು ಕೈಗೊಳ್ಳ ಬೇಕು. ಆಗ ಮಾತ್ರ ತುನಾವಣಾ ಆಯೋಗದ ಮೇಲೆ ಜನರಿಗೆ ನಂಬಿಕೆ ಬರಲು ಸಾಧ್ಯ. ಇದೊಂದು ಕ್ರಿಮಿನಲ್ ಅಪರಾಧವಾಗಿದ್ದು, ಇದರಲ್ಲಿ ಯಾರೆಲ್ಲಾ ಭಾಗಿ ಆಗಿದ್ದಾರೆ? ಯಾರೆಲ್ಲಾ ದೂರವಾಣಿ ಸಂಪರ್ಕ ಹೊಂದಿ ದ್ದಾರೆ ಎಂದು ತನಿಖೆ ಮಾಡಬೇಕು.

ಕೆಲವು ಶಾಸಕರು ದೊಡ್ಡ ಅಭಿಯಾನದ ಮೂಲಕ ಈ ಮಾಹಿತಿ ಕಳವು ಮಾಡಲು ಪ್ರೋತ್ಸಾಹ ನೀಡಿದ್ದಾರೆ ಎನ್ನಲಾಗಿದೆ. ಆ ನಿಟ್ಟಿನಲ್ಲೂ ಸೂಕ್ತ ತನಿಖೆ ನಡೆಯಬೇಕಿದೆ. ಮತದಾರರ ಗುರುತಿನ ಚೀಟಿ ಅಕ್ರಮ ನಡೆಸಲು ಹಾಗೂ ಖಾಸಗಿ ಮಾಹಿತಿಯನ್ನು ಅಕ್ರಮವಾಗಿ ಕಳುವು ಮಾಡಲು ಚಿಲುಮೆ ಸಂಸ್ಥೆ ಸುಮಾರು ೧೦ ಸಾವಿರ ಮಂದಿಯನ್ನು ನಿಯೋಜಿಸಿ ಕೊಂಡಿತ್ತು. ಹಲವು ಏಜೆನ್ಸಿಗಳಿಗೆ ಉಪಗುತ್ತಿಗೆಯನ್ನೂ ನೀಡಿತ್ತು. ಇದರಲ್ಲಿ ಕೋಟ್ಯಂತರ ರು. ವಹಿವಾಟು ನಡೆದಿದೆ ಎನ್ನಲಾಗಿದೆ.

ಹಾಗಾದರೆ ಇಷ್ಟೊಂದು ಹಣ ಎಲ್ಲಿಂದ ಬಂತು? ಈ ಅಕ್ರಮ ಕಾರ್ಯಾಚರಣೆಗೆ ಬಂಡವಾಳ ಹೂಡಿದ್ದು ಯಾರು? ಈ ಎಲ್ಲಾ ವಿಚಾರಗಳ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಬೇಕಿದೆ. ಬಿಜೆಪಿಗೆ ಮತ ಚಲಾಯಿಸಲು ಆಸಕ್ತಿ ಹೊಂದಿಲ್ಲದ ಸಾವಿರಾರು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದಲೇ ಕೈಬಿಡಲಾಗಿದೆ ಅಥವಾ ಬೇರೊಂದು ಕ್ಷೇತ್ರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಪ್ರತಿಪಕ್ಷದ ಮುಖಂಡರು ದೂರಿzರೆ. ಈ ಆರೋಪದ ಕುರಿತು ತನಿಖೆಯಾಗಬೇಕು.

ಚುನಾವಣಾ ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿನ ವಿಶ್ವಾಸ ಮರುಸ್ಥಾಪಿಸಬೇಕಾದರೆ ಪ್ರಕರಣದ ಕುರಿತು ಸಮಗ್ರವಾಗಿ ತನಿಖೆ  ನಡೆಸಿ, ಸತ್ಯಾಂಶ ಬಯಲಿಗೆಳೆಯಬೇಕಿದೆ. ಇಲ್ಲವಾದಲ್ಲಿ ಇಡೀ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯವೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.