Monday, 9th December 2024

ಏರುತ್ತಿದೆ ಚುನಾವಣಾ ಜ್ವರ

ರಾಜ್ಯದಲ್ಲಿ ರಾಜಕೀಯ ಸಮರದ ಬಿಸಿ ದಿನೇ ದಿನೇ ಏರಲಾರಂಭಿಸಿದೆ. ಚುನಾವಣೆ ಸಮೀಪಿಸುತ್ತಿದೆ ಎಂಬುದರ ದ್ಯೋತಕವಾಗಿ ಮುಖಂಡರ ಮಾತಿನ ಸಮರ ಜೋರಾಗಿದೆ. ಸಭ್ಯತೆಯ ಮೇರೆ ಮೀರದೆ ಆರೋಗ್ಯಕರ ವಾಗ್ಯುದ್ಧ ನಡೆಸುವುದು ರಾಜಕೀಯದಲ್ಲಿ ತಪ್ಪೇನೂ ಅಲ್ಲ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಅಂತಹದೊಂದು ಪ್ರವೃತ್ತಿಯನ್ನು ರಾಜಕಾರಣಿಗಳು ಮರೆತೇ ಬಿಟ್ಟಿರುವುದು ದೃಗ್ಗೋಚರ. ವೈಯಕ್ತಿಕ ನಿಂದನೆ, ಮಾನಹಾನಿಕರ ಹೇಳಿಕೆಗಳೇ ವಿಜೃಂಭಿಸು ತ್ತಿರುವುದು ರೇಜಿಗೆ ಹುಟ್ಟಿಸುವ ಸಂಗತಿ.

ಒಂದಷ್ಟು ಮಂದಿ ಮುಖಂಡರ ಹಿಂಬಾಲಕರು ಇಂತಹ ತೇಜೋವಧೆಯ ಹೇಳಿಕೆಗಳನ್ನು ಮನಸಾರೆ ಅನುಭವಿಸಿ ಖುಷಿಪಡಬಹುದೇನೋ. ಆದರೆ ಬಹುತೇಕ ಜನಸಾಮಾನ್ಯರು, ಪ್ರಜ್ಞಾವಂತ ನಾಗರಿಕರು ತಾತ್ವಿಕವಾಗಿ ಯಾವುದೇ ನಾಯಕನ ಬೆಂಬಲಿಗರಾಗಿದ್ದರೂ ತಾವು ಮೆಚ್ಚಿವ ನಾಯಕನ ಎಲ್ಲ ಹೇಳಿಕೆ ಒಪ್ಪಲಾರರು, ಸಮರ್ಥಿಸಲಾರರು. ಅಷ್ಟರ ಮಟ್ಟಿಗೆ ಪ್ರಜ್ಞಾ ವಂತಿಕೆ ಮತದಾರರಲ್ಲಿದೆ. ಆದರೆ ರಾಜಕಾರಣಿಗಳಲ್ಲಿ ಮಾತ್ರ ಅದು ಕಾಣಿಸುತ್ತಿಲ್ಲ.

ಈ ಮುಖಂಡರು ಮಾಡುವ ಆರೋಪಗಳು, ಪರಸ್ಪರ ತೇಜೋವಧೆಯ ಹೇಳಿಕೆಗಳು ಎಲ್ಲವೂ ಚುನಾವಣೆ ಮುಗಿಯುವ ವರೆಗೆ ಮಾತ್ರ ಚಾಲ್ತಿ ಯಲ್ಲಿರುತ್ತವೆ. ಫಲಿತಾಂಶದ ನಂತರ ಅವರವರೇ ಪರಸ್ಪರ ಹೆಗಲಿಗೆ ಕೈಹಾಕಿಕೊಂಡು ಓಡಾಡುವ ಅಥವಾ ವೇದಿಕೆ ಹಂಚಿಕೊಳ್ಳುವ, ಜತೆಗೂಡಿ ‘ಭೋಜನ’ ಸವಿಯುವ ದೃಶ್ಯಗಳು ವ್ಯಾಪಕವಾಗಿ ಕಾಣಸಿಗುತ್ತವೆ.

ಮುಖಂಡರನ್ನು ನಂಬಿದ ಹಿಂಬಾಲಕರು ಮಾತ್ರ ತಮ್ಮ ತಮ್ಮ ನಾಯಕರ ದ್ವೇಷಪೂರಿತ ಹೇಳಿಕೆಗಳನ್ನು ನಂಬಿಕೊಂಡು ವೈಯಕ್ತಿಕ ಜಿದ್ದಾಜಿದ್ದಿಗೆ ಬಿದ್ದು ಮಾನವೀಯ ಸಂಬಂಧಗಳನ್ನು ಹಾಳು ಮಾಡಿಕೊಳ್ಳುತ್ತಾರೆ ಅಷ್ಟೆ. ಆದ್ದರಿಂದ ಮುಖಂಡರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸದೆ, ವಿವೇಚನೆಯಿಂದ ಸ್ವೀಕರಿಸುವುದು, ಬಿಡುವುದು ಜನಸಾಮಾನ್ಯರ ಆದ್ಯತೆಯಾಗಬೇಕು.

ಸ್ವಯಂ ಶುದ್ಧೀಕರಣದ ಪ್ರಯತ್ನವನ್ನು ಮಾಡಿಕೊಳ್ಳಬೇಕೇ ಹೊರತು, ಯಾರದೇ ಬುದ್ಧಿವಾದ, ಒಳ್ಳೆಯ ಮಾತುಗಳು ಅಂಥವರನ್ನು ಬದಲಿಸ ಲಾರವು. ನ್ಯಾಯಾಂಗದಿಂದಾಗಲಿ, ಕಾನೂನಿನಿಂದಾಗಲಿ ರಾಜಕೀಯದ ರಾಡಿಯನ್ನು ಶುದ್ಧೀಕರಿಸಲು ಸಾಧ್ಯವಿಲ್ಲ. ಅದು ಆ ಕ್ಷೇತ್ರದಲ್ಲಿರುವವರಲ್ಲಿ ಅಂತಸುರಣವಾಗಿ ಒಳಗಿನಿಂದ ಬರಬೇಕು. ಆದರೆ ಅಂಥವನ್ನೆಲ್ಲ ಈಗಿನ ಸನ್ನಿವೇಶದಲ್ಲಿ ನಿರೀಕ್ಷಿಸುವುದು ಕನಸಿನ ಮಾತೇ ಸರಿ.