ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಧ್ರುವೀಕರಣ ಸಾಮಾನ್ಯ. ಅಸಮಾಧಾನಿತರು, ಟಿಕೆಟ್ ವಂಚಿತರು ಪಕ್ಷದಿಂದ ಪಕ್ಷಕ್ಕೆ ಹಾರುವುದು, ವೈಯಕ್ತಿಕ ಸ್ಥಾನಮಾನ, ರಾಜಕೀಯ ಲಾಭಕ್ಕಾಗಿ ‘ಚೌಕಾಶಿ’ಗೆ ಇಳಿಯುವುದು ಆರಂಭದಿಂದಲೂ ನಡೆದು ಬಂದಿದ್ದೇ.
ಆದರೆ, ಒಂದು ಪಕ್ಷದಲ್ಲಿ ಸುದೀರ್ಘ ಕಾಲದಿಂದ ಇದ್ದು, ಅಲ್ಲಿ ಹಲವು ಅಧಿಕಾರದ ಸ್ತರಗಳನ್ನು ಕಂಡ ನಾಯಕರು ಏಕಾಏಕಿ ಸಿದ್ಧಾಂತಗಳನ್ನೆಲ್ಲ ಬದಿಗಿಟ್ಟು ಪಕ್ಷಾಂತರಕ್ಕೆ ಪಕ್ಕಾಗುವುದು ಇತ್ತೀಚಿನ ದಿನಗಳಲ್ಲಿನ ಅನಪೇಕ್ಷಿತ ರಾಜಕೀಯ ಬೆಳವಣಿಗೆ. ಜಗದೀಶ್ ಶೆಟ್ಟರ್ ಪ್ರಕರಣ ಇದಕ್ಕೊಂದು ತಾಜಾ ಉದಾಹರಣೆ. ಜನಸಂಘದಿಂದ ಬೆಳೆದು ಬಂದಿದ್ದ ಪಕ್ಕಾ ಬಿಜೆಪಿಗ, ರಾಜ್ಯದ ಹಿರಿಯ ರಾಜಕಾರಣಿ ಜಗದೀಶ್ ಶೆಟ್ಟರ್ ಕೊನೆಗೂ ಕಾಂಗ್ರೆಸ್ ಸೇರಿದ್ದಾರೆ.
ಶೆಟ್ಟರ್ ಅವರ ಈ ನಡೆ ಎಷ್ಟರ ಮಟ್ಟಿಗೆ ಫಲ ನೀಡೀತು ಎಂಬುದನ್ನು ಊಹಿಸಲು ಕಾಲವಿನ್ನೂ ಕಿರಿದು. ಆದರೆ ಅವಕಾಶ ಕ್ಕಾಗಿಯೇ ಶೆಟ್ಟರ್ ಕಾಂಗ್ರೆಸ್ ಸೇರಿದ್ದಂತೂ ನಿಜ. ಹಾಗೂ ಅಂಥ ಹಿರಿಯರಿಗೆ ಪಕ್ಷ ಇನ್ನೊಂದು ಅವಕಾಶ ನೀಡಬೇಕಿತ್ತು ಎಂಬುದೂ ವಾಸ್ತವ. ಹೊಸಬರಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಬಿಜೆಪಿ ವರಿಷ್ಠರು ಶೆಟ್ಟರ್ ಬೇಡಿಕೆಗೆ ಬಗ್ಗದಿರುವುದು ಒಪ್ಪತಕ್ಕ ವಿಚಾರವಾದರೂ, ರಾಜ್ಯದ ಪಕ್ಷಾಧ್ಯಕ್ಷ, ಮುಖ್ಯ ಮಂತ್ರಿಯಂಥ ಹುದ್ದೆಯಲ್ಲಿದ್ದ, ಬಹುಮುಖ್ಯ ಲಿಂಗಾಯತ ಸಮುದಾಯದವರನ್ನು ಪ್ರತಿನಿಧಿಸುವ ಜಗದೀಶ್ ಶೆಟ್ಟರ ನಡೆಯನ್ನು ಅಷ್ಟೊಂದು ಹಗುರವಾಗಿ ತೆಗೆದುಕೊಳ್ಳ ಬಾರದಿತ್ತೇನೋ!
ಏಕೆಂದರೆ ವೀರೇಂದ್ರಪಾಟೀಲ್ ಬಳಿಕ ಬಿಜೆಪಿಯನ್ನೇ ಬೆಂಬಲಿಸುತ್ತ ಬಂದಿದ್ದ ಲಿಂಗಾಯತರ ವೋಟ್ ಬ್ಯಾಂಕ್ ಅನ್ನು ಅಲಕ್ಷಿಸುವಂತಿಲ್ಲ. ಇದರಿಂದ ಕಾಂಗ್ರೆಸ್‌ಗೆ ಸಹಾಯವಾದೀತೆಂಬುದನ್ನು ಅಲ್ಲಗಳೆಯಲಾಗದು. ಆದರೆ, ಈ ರೀತಿಯ ಅಧಿಕಾರದ ಲಾಭಕ್ಕೆ ಪಕ್ಷದ ವಿರುದ್ಧ ಸಿಡಿದೆದಿದ್ದ, ಇದೇ ಲಿಂಗಾಯತ ಸಮುದಾಯದ ನಿಜಲಿಂಗಪ್ಪ, ವೀರೇಂದ್ರಪಾಟೀಲ್ ಸ್ಥಿತಿ ಏನಾಗಿ ತ್ತೆಂಬುದು ಇತಿಹಾಸದಲ್ಲಿ ದಾಖಲಾಗಿದೆ.
ಯಾವುದೇ ರಾಜಕಾರಣಿಗಳ ಬಗ್ಗೆ ಜನರಲ್ಲಿ ಇರುವ ‘ಸಜ್ಜನ’ ಎಂಬ ರೀತಿಯ ಅಭಿಪ್ರಾಯ ಇಂಥ ಸನ್ನಿವೇಶದಲ್ಲಿ ಮುಕ್ಕಾಗುವ ಸಂಭವವೂ ಇಲ್ಲದಿಲ್ಲ. ಜತೆಗೆ ಮೂಲ ಪಕ್ಷದ ಸಂಸ್ಕೃತಿಯಲ್ಲೇ ಬೆಳೆದ ಶೆಟ್ಟರ್ ಅಂಥವರಿಗೆ ಯಾವುದೇ ಇನ್ನಿತರ ಪಕ್ಷಗಳ
ವಾತಾವರಣ ಒಗ್ಗದೆಯೂ ಹೋಗಬಹುದು. ಇನ್ನು ಲಕ್ಷ್ಮಣ ಸವದಿ ಅಂಥವರದ್ದು ವಿಶೇಷ ಎನಿಸುವುದಿಲ್ಲ. ಏಕೆಂದರೆ ಈಗಾಗಲೇ ಜನತಾ ಪರಿವಾರದಿಂದ ಬಿಜೆಪಿಗೆ ವಲಸೆ ಬಂದವರಾದ ಅವರು, ಮತ್ತೆ ಇನ್ನೊಂದೆಡೆ ವಲಸೆ ಹೋದಾಗ ಇತಿಮಿತಿಗಳು ಅವರನ್ನು ಹೆಚ್ಚಾಗಿ ಬಾಧಿಸದು.
ನಾಲ್ಕು ದಶಕಗಳ ಕಾಲ ಅಧಿಕಾರ ಅನುಭವಿಸಿದ ಶೆಟ್ಟರ್, ಇದೆಲ್ಲವನ್ನೂ ಸ್ವಸಾಮರ್ಥ್ಯದಿಂದಲೇ ಗಳಿಸಿದ್ದು ಎಂದೇನೂ ಹೇಳಲಾಗದು. ಇಂಥ ಸನ್ನಿವೇಶದಲ್ಲಿ ಅವರನ್ನು ಬೆಂಬಲಿಸದ ಕಾರ್ಯಕರ್ತರು, ಮತದಾರರ ಮನಃಸ್ಥಿತಿಯನ್ನೂ ನಾಯಕ ನಾದವ ಯೋಚಿಸಬೇಕಾದ್ದು ವಿಹಿತ.